ಡ್ರಾಪ್‌ ನೆಪದಲ್ಲಿ 21 ವರ್ಷದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆತ್ತಲೆಗೊಳಿಸಿ ರೇಪ್‌ ಯತ್ನಿಸಿದವನ ಸೆರೆ

| Published : Aug 20 2024, 06:57 AM IST

rape case

ಸಾರಾಂಶ

ಡ್ರಾಪ್‌ ಕೊಡುವ ನೆಪದಲ್ಲಿ 21 ವರ್ಷದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ಸಂಬಂಧ ದ್ವಿಚಕ್ರ ವಾಹನ ಸವಾರನನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು :  ಡ್ರಾಪ್‌ ಕೊಡುವ ನೆಪದಲ್ಲಿ 21 ವರ್ಷದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ಸಂಬಂಧ ದ್ವಿಚಕ್ರ ವಾಹನ ಸವಾರನನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಡುಗೋಡಿಯ ಎಸ್‌.ಆರ್‌.ನಗರ ನಿವಾಸಿ ಮುಖೇಶ್ವರನ್‌(24) ಬಂಧಿತ. ಆರೋಪಿಯು ಭಾನುವಾರ ಮಧ್ಯರಾತ್ರಿ ಸುಮಾರು 1.30ಕ್ಕೆ ಡ್ರಾಪ್‌ ಕೇಳಿದ ಯುವತಿಯನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಎಚ್‌ಎಸ್‌ಆರ್‌ ಲೇಔಟ್‌ 7ನೇ ಸೆಕ್ಟರ್‌ನ ರಾಜೀವ್‌ ಗಾಂಧಿನಗರದ ಹೊಸೂರು ಮುಖ್ಯರಸ್ತೆಯ ಗಿರಿಯಾಸ್‌ ಶೋ ರೂಮ್‌ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಆರೋಪಿ ಡ್ಯಾನ್ಸ್‌ ಕೋರಿಯೋಗ್ರಾಫರ್‌: 

ಬಂಧಿತ ಆರೋಪಿ ಮುಖೇಶ್ವರನ್‌ ತಮಿಳುನಾಡು ಮೂಲದವನು. ಕಳೆದ 21 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ವೃತ್ತಿಯಲ್ಲಿ ಡ್ಯಾನ್ಸ್‌ ಕೋರಿಯೋಗ್ರಾಫರ್‌ ಆಗಿರುವ ಮುಖೇಶ್ವರನ್‌, ಭಾನುವಾರ ರಾತ್ರಿ ಕೋರಮಂಗಲದಲ್ಲಿ ಸ್ನೇಹಿತರ ಜತೆಗೆ ಮದ್ಯದ ಪಾರ್ಟಿ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಕಡೆಗೆ ತೆರಳುತ್ತಿದ್ದ. ಈ ವೇಳೆ ಮಾರ್ಗ ಮಧ್ಯೆ ಯುವತಿ ಡ್ರಾಪ್‌ ಕೇಳಿದ್ದಾಳೆ. ಬಳಿಕ ಬೈಕ್‌ನಲ್ಲಿ ಕೂರಿಸಿಕೊಂಡು ಹೊರಟ ಆರೋಪಿಯು ಹೊಸೂರು ಮುಖ್ಯರಸ್ತೆಯಲ್ಲಿ ಮಾರ್ಗ ಬದಲಿಸಿದ್ದಾನೆ.

ಎಚ್ಚೆತ್ತ ಸಂತ್ರಸ್ತೆಯು ತನ್ನ ಮೊಬೈಲ್‌ನಲ್ಲಿ ಎಸ್‌ಒಎಸ್‌ ಬಟನ್‌ ಒತ್ತಿ ಸ್ನೇಹಿತರಿಗೆ ತುರ್ತು ಸಂದೇಶ ಹಾಗೂ ತನ್ನ ಲೈವ್‌ ಲೊಕೇಶನ್‌ ಕಳುಹಿಸಿದ್ದಾಳೆ. ಅಷ್ಟರಲ್ಲಿ ಆರೋಪಿಯು ಹೊಸೂರು ಮುಖ್ಯರಸ್ತೆಯ ಗಿರಿಯಾಸ್‌ ಶೋ ರೂಮ್‌ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಲವಂತವಾಗಿ ಆಕೆಯ ಬಟ್ಟೆಗಳನ್ನು ಕಳಚಿ ಬೆತ್ತಲೆಗೊಳಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ಸಾಕಷ್ಟು ಪ್ರತಿರೋಧವೊಡ್ಡಿದ್ದಾಳೆ.

 ಸ್ನೇಹಿತರಿಂದ ಯುವತಿ ರಕ್ಷಣೆ 

ಅಷ್ಟರಲ್ಲಿ ತುರ್ತು ಸಂದೇಶ, ಲೈವ್‌ ಲೊಕೇಶನ್‌ ಆಧರಿಸಿ ಯುವತಿಯ ಸ್ನೇಹಿತರು ಸ್ಥಳಕ್ಕೆ ಬಂದಿದ್ದಾರೆ. ಬೆತ್ತಲಾಗಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿಯನ್ನು ರಕ್ಷಿಸಿ ಕಾರಿನಲ್ಲಿ ಕೂರಿಸಿದ್ದಾರೆ. ಈ ವೇಳೆ ಆರೋಪಿಯು ಸ್ಥಳದಲ್ಲಿ ಅರೆಬೆತ್ತಲಾಗಿ ಗಾಬರಿಯಲ್ಲಿ ನಿಂತಿರುವುದನ್ನು ನೋಡಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿಯು ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಬಳಿಕ ಸ್ನೇಹಿತರಿಬ್ಬರುಯುವತಿಯನ್ನು ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

 ನೋಂದಣಿ ಸಂಖ್ಯೆ ಆಧರಿಸಿ ಬಂಧನ 

ಈ ಸುದ್ದಿ ತಿಳಿದು ಆಸ್ಪತ್ರೆಗೆ ದೌಡಾಯಿಸಿದ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು, ಯುವತಿಯ ಸ್ನೇಹಿತನಿಂದ ದೂರು ಪಡೆದು ದುಷ್ಕರ್ಮಿಯ ಬಂಧನಕ್ಕೆ ತನಿಖೆ ಕೈಗೊಂಡಿದ್ದರು. ಬಳಿಕ ಯುವತಿ ಡ್ರಾಪ್‌ ಪಡೆದ ಸ್ಥಳದಿಂದ ಘಟನಾ ಸ್ಥಳದ ವರೆಗಿನ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದಾಗ, ಆರೋಪಿಯ ಬೈಕ್‌ ನೋಂದಣಿ ಸಂಖ್ಯೆ ಪತ್ತೆಹಚ್ಚಿ ಬಳಿಕ ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಮದ್ಯದ ಅಮಲಿನಲ್ಲಿ ಅತ್ಯಾಚಾರಕ್ಕೆ ಯತ್ನ: 

ಮುಖೇಶ್ವರನ್‌ ಮದ್ಯ ಸೇವಿಸಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ. ಮಾರ್ಗ ಮಧ್ಯೆ ಡ್ರಾಪ್‌ ಕೇಳಿದ ಯುವತಿಯನ್ನು ಕೂರಿಸಿಕೊಂಡು ಹೋಗುವಾಗ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈತನ ವಿರುದ್ಧ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇಲ್ಲ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಶಕ್ಕೆ ಪಡೆದು ಘಟನೆ ಬಗ್ಗೆ ಹೆಚ್ಚಿನ ವಿಚಾರಣೆಗೆ ಒಳಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

 ಯುವತಿ ಆರ್ಮಿ ಅಧಿಕಾರಿ ಪುತ್ರಿ: 

ಸಂತ್ರಸ್ತೆ ನಾಗಲ್ಯಾಂಡ್‌ ಮೂಲದ ಆರ್ಮಿ ಅಧಿಕಾರಿ ಪುತ್ರಿ. ನಗರದ ಹೊರವಲಯದ ಚಂದಾಪುರದಲ್ಲಿ ನೆಲೆಸಿರುವ ಈಕೆ ಆನೇಕಲ್‌ನ ಖಾಸಗಿ ಕಾಲೇಜಿನಲ್ಲಿ ಬಿಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಘಟನೆ ಬಗ್ಗೆ ಆಕೆಯಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಶನಿವಾರ ತಡರಾತ್ರಿ ಕೋರಮಂಗಲದ ಪಬ್‌ವೊಂದರಲ್ಲಿ ಸ್ನೇಹಿತರೊಂದಿಗೆ ವೀಕೆಂಡ್‌ ಪಾರ್ಟಿಯಲ್ಲಿ ಯುವತಿ ಭಾಗವಹಿಸಿದ್ದಳು. ಪಾರ್ಟಿ ಮುಗಿಸಿಕೊಂಡು ಭಾನುವಾರ ಮುಂಜಾನೆ ಸ್ನೇಹಿತನ ಜತೆಗೆ ಕಾರಿನಲ್ಲಿ ಮನೆಗೆ ವಾಪಸ್‌ ಹೋಗುವಾಗ, ಕೋರಮಂಗಲದ ಫೋರಂ ಮಾಲ್‌ ಬಳಿ ಕಾರು, ಆಟೋರಿಕ್ಷಾಗೆ ಡಿಕ್ಕಿಯಾಗಿ ಅಪಘಾತವಾಗಿತ್ತು. ಈ ವೇಳೆ ಸ್ನೇಹಿತ ಹಾಗೂ ಆಟೋ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಅಷ್ಟರಲ್ಲಿ ಹೋಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಪೊಲೀಸರನ್ನು ಕಂಡು ಆತಂಕಗೊಂಡಿದ್ದ ಯುವತಿ, ಅದೇ ಮಾರ್ಗದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನ ತಡೆದು ಡ್ರಾಪ್‌ ಕೇಳಿದ್ದಳು. ಬಳಿಕ ಆತ ಸುಮಾರು 2 ಕಿ.ಮೀ. ವರೆಗೆ ಡ್ರಾಪ್ ನೀಡಿ ತೆರಳಿದ್ದ. ಬಳಿಕ ಅದೇ ಮಾರ್ಗದಲ್ಲಿ ಬರುತ್ತಿದ್ದ ಆರೋಪಿ ಮುಖೇಶ್ವರನ್‌ನನ್ನು ಡ್ರಾಪ್‌ ಕೇಳಿದ್ದಳು. ಡ್ರಾಪ್‌ ಕೊಡುವ ನೆಪದಲ್ಲಿ ಆರೋಪಿಯು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ.

ಅಪರಿಚಿತರಿಂದ ಡ್ರಾಪ್‌ ಪಡೆಯುವಾಗ ಎಚ್ಚರ:

ರಾತ್ರಿ ವೇಳೆ ಅಪರಿಚಿತರಿಂದ ಡ್ರಾಪ್‌ ಪಡೆಯುವಾಗ ಸಾರ್ವಜನಿಕರು ಎಚ್ಚರವಹಿಸಬೇಕು. ತಾವು ಡ್ರಾಪ್‌ ಪಡೆಯುವ ವಾಹನದ ಸಂಖ್ಯೆಯನ್ನು ಕುಟುಂಬದವರು ಅಥವಾ ಸ್ನೇಹಿತರಿಗೆ ತಿಳಿಸಬೇಕು. ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಸಹಾಯ ಪಡೆದುಕೊಳ್ಳಬೇಕು ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.

ಘಟನೆ ಸಂಬಂಧ ಆರೋಪಿಯ ಪತ್ತೆಗೆ ಪೊಲೀಸರ ಐದು ತಂಡ ರಚಿಸಲಾಗಿತ್ತು. ಒಂದೊಂದು ತಂಡಕ್ಕೂ ಪ್ರತ್ಯೇಕ ಜವಾಬ್ದಾರಿ ವಹಿಸಲಾಗಿತ್ತು. ತನಿಖೆ ವೇಳೆ ಸಿಕ್ಕ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು

-ಸಾರಾ ಫಾತಿಮಾ, ಆಗ್ನೇಯ ವಿಭಾಗದ ಡಿಸಿಪಿ