ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾದ ನೈಋತ್ಯ ಮುಂಗಾರು ಮಾರುತಗಳು ವಾಡಿಕೆಗಿಂತ 3 ದಿನ ತಡವಾಗಿ, ಗುರುವಾರ ಕೇರಳವನ್ನು ಪ್ರವೇಶಿಸಿವೆ. ಇದರ ಸುಳಿವಾಗಿ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ
ನವದೆಹಲಿ: ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾದ ನೈಋತ್ಯ ಮುಂಗಾರು ಮಾರುತಗಳು ವಾಡಿಕೆಗಿಂತ 3 ದಿನ ತಡವಾಗಿ, ಗುರುವಾರ ಕೇರಳವನ್ನು ಪ್ರವೇಶಿಸಿವೆ. ಇದರ ಸುಳಿವಾಗಿ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, 3 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಗುರುವಾರಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ.
ರಾಜ್ಯದ ಹಲವು ಭಾಗಗಳಲ್ಲಿ ಗಂಟೆಗೆ 40 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆ ಅಪ್ಪಳಿಸಿದೆ. ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳಲಿದ್ದು ಅಲಪ್ಪುಳ, ಕೊಟ್ಟಾಯಂ ಹಾಗೂ ಎರ್ನಾಕುಲಂ ಜಿಲ್ಲೆಗಳಿಗೆ ಗುರುವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಇಡುಕ್ಕಿ ಹಾಗೂ ತ್ರಿಶ್ಶೂರ್ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.
ಈ ವರ್ಷ ಮೇ 26ಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಮೊದಲಿಗೆ ಹವಾಮಾನ ಇಲಾಖೆ ಅಂದಾಜಿಸಿತ್ತು. ಬಳಿಕ ಜೂ.4ರ ಸುಳಿವು ನೀಡಿತ್ತು. ಅದರಂತೆ ವಾಡಿಕೆಗಿಂತ 3 ದಿನ ವಿಳಂಬವಾಗಿದ್ದು ಮಾರುತ ಕೇರಳಕ್ಕೆ ಕಾಲಿಟ್ಟಿದೆ. ಸಾಮಾನ್ಯವಾಗಿ ಜೂ.1ರಂದು ಕೇರಳದ ಮೂಲಕ ಭಾರತವನ್ನು ಮುಂಗಾರು ಮಾರುತಗಳು ಪ್ರವೇಶ ಮಾಡುತ್ತವೆ.
ಮಳೆ ಕೊರತೆ:
ಈ ಬಾರಿ ಎಲ್‌ನಿನೋದ ಪರಿಣಾಮ ದೇಶವ್ಯಾಪಿ ಮಳೆ ಕೊರತೆಯಾಗಲಿದೆ. ದೀರ್ಘಕಾಲೀನ ಸರಾಸರಿಯ ಶೇ.90ರಷ್ಟು ಮಾತ್ರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಭವಿಷ್ಯ ನುಡಿದಿದೆ.
ಮುಂಗಾರು ಪ್ರವೇಶ:
ಕೇರಳದ 14 ಹವಾಮಾನ ಕೇಂದ್ರಗಳ ವ್ಯಾಪ್ತಿಯ ಪೈಕಿ ಶೇ.60ರಷ್ಟು ಪ್ರದೇಶಗಳಲ್ಲಿ ಸತತ 2 ದಿನಗಳ ಕಾಲ 2.5 ಮಿ.ಮೀಗಿಂತ ಹೆಚ್ಚು ಮಳೆಯಾದರೆ, ಅರಬ್ಬೀ ಸಮುದ್ರ ವಲಯದಲ್ಲಿ ಬೀಸುವ ಗಾಳಿಯಿಂದ ದಕ್ಷಿಣದಿಂದ ನೈಋತ್ಯ ದಿಕ್ಕಿನೆಡೆಗೆ ಗಂಟೆಗೆ 28ರಿಂದ 37 ಕಿ.ಮೀ ವೇಗದಲ್ಲಿ ಬೀಸಿದರೆ ಮೋಡಗಳ ಮೇಲ್ಭಾಗದ ಉಷ್ಣಾಂಶ ಮತ್ತು ಸಾಂದ್ರತೆಯು ಪ್ರತಿ ಚದರ ಮೀಟರ್‌ಗೆ 200 ವ್ಯಾಟ್‌ಗಿಂತ ಕಡಿಮೆ ಇದ್ದರೆ ಆಗ ದೇಶಕ್ಕೆ ಅಧಿಕೃತವಾಗಿ ಮುಂಗಾರು ಮಾರುತ ಪ್ರವೇಶ ಆಗಿದೆ ಎಂದು ಘೋಷಿಸಲಾಗುತ್ತದೆ. ಜೂನ್‌ನಿಂದ 4 ತಿಂಗಳು ಕಾಲ ಹಂತಹಂತವಾಗಿ ದೇಶಾದ್ಯಂತ ವ್ಯಾಪಿಸುವ ಮುಂಗಾರು ಮಾರುತಗಳು ಮಳೆ ಸುರಿಸುತ್ತವೆ.
