ಸಾರಾಂಶ
ಬೆಂಗಳೂರು : ‘ಬೆಕ್ಕು ಕಳವು ಪ್ರಕರಣ’ವೊಂದು ಸೋಮವಾರ ಹೈಕೋರ್ಟ್‌ನಲ್ಲಿ ಸದ್ದು ಮಾಡಿದ್ದು, ನ್ಯಾಯಮೂರ್ತಿಗಳ ಹಾಗೂ ಕೋರ್ಟ್ ಹಾಲ್‌ನಲ್ಲಿ ನೆರೆದಿದ್ದ ವಕೀಲರಿಗೆ ಅಚ್ಚರಿ ಮೂಡಿಸುವುದರ ಜೊತೆಗೆ ಕೆಲ ಸಮಯ ನಗುವಿಗೆ ಕಾರಣವಾಯಿತು.
ಮನೆಯಲ್ಲಿ ಬೆಕ್ಕು ಇತ್ತು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ವಿರುದ್ಧ ಜೀವ ಬೆದರಿಕೆ, ಶಾಂತಿಭಂಗ ಮತ್ತು ಮಹಿಳೆಯ ಘನತೆಗೆ ಧಕ್ಕೆತಂದ ಆರೋಪದ ಮೇಲೆ ದೂರು ದಾಖಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಹ ಸಲ್ಲಿಸಿದ್ದಾರೆ.
ಬೆಕ್ಕು ಮನೆಯಲ್ಲಿ ಕಾಣಿಸಿಕೊಂಡಿರುವುದಕ್ಕೂ ಮಹಿಳೆಯ ಘನತೆಗೆ ಧಕ್ಕೆ ತಂದ ಪ್ರಕರಣಕ್ಕೂ ಎಲ್ಲಿಂದ ಸಂಬಂಧ ಎಂದು ಅಚ್ಚರಿಗೊಂಡ ನ್ಯಾಯಮೂರ್ತಿಗಳು ಇಂತಹ ನಿಷ್ಪ್ರಯೋಜಕ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ನಂತರ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಎಲ್ಲ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆದೇಶಿಸಿದ್ದಾರೆ.ಪಕ್ಕದ ಮನೆಯ ಡೇಸಿ ಎಂಬ ಹೆಸರಿನ ಬೆಕ್ಕು ತಮ್ಮ ಮನೆಯಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಬೆಕ್ಕು ಸಾಕುತ್ತಿರುವ ನಿಖಿತಾ ಅಂಜನಾ ಅಯ್ಯಂಗಾರ್ ದಾಖಲಿಸಿದ್ದ ದೂರು ಆಧರಿಸಿ ಆನೇಕಲ್ ತಾಲೂಕಿನ ಶಿಕಾರಿಪಾಳ್ಯದ ಸಿರಾಜ್ ಬಡಾವಣೆಯ ನಿವಾಸಿ ತಹ ಹುಸೈನ್ ವಿರುದ್ಧ ಹೆಬ್ಬಗೋಡಿ ಠಾಣಾ ಪೊಲೀಸರು ಜೀವ ಬೆದರಿಕೆ, ಶಾಂತಿಭಂಗ ಮತ್ತು ಮಹಿಳೆಯ ಘನತೆಗೆ ಧಕ್ಕೆತಂದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು.
--ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 2022ರ ಸೆ.2ರಂದು ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ತಮ್ಮ ವಿರುದ್ದ ಪ್ರಕರಣ ರದ್ದು ಕೋರಿ ತಹ ಹುಸೈನ್‌ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ತಹ ಹುಸೈನ್ ಅವರ ಮನೆಯ ಕಿಟಕಿಯಿಂದ ಬೆಕ್ಕು ಬಂದು-ಹೋಗುತ್ತದೆ, ಹಾಗೆಂದ ಮಾತ್ರಕ್ಕೆ ಜೀವ ಬೆದರಿಕೆ, ಮಹಿಳೆಯ ಘನತೆಗೆ ಧಕ್ಕೆ ತಂದ ಮತ್ತು ಶಾಂತಿ ಭಂಗ ಅಪರಾಧ ಕೃತ್ಯ ಎಸಗಿದಂತಾಗುವುದಿಲ್ಲ ಎಂಬ ಅರ್ಜಿದಾರರ ಪರ ವಕೀಲರು ವಾದವನ್ನು ನ್ಯಾಯಮೂರ್ತಿಗಳು ಪರಿಗಣಿಸಿದರು. ಇಂತಹ ಪ್ರಕರಣದ ವಿಚಾರಣೆ ಮುಂದುವರಿಸಲು ಅನುಮತಿಸಿದರೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಭಂಗ ಉಂಟು ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿದರು. ಹಾಗೆಯೇ, ಅರ್ಜಿದಾರರ ವಿರುದ್ಧ ದೂರು ಸಲ್ಲಿಸಿದ್ದ ಮಹಿಳೆಗೆ ತುರ್ತು ನೋಟಿಸ್ ಜಾರಿಗೊಳಿಸಿತು.
ಇದಕ್ಕೂ ಮುನ್ನ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರರು ಏಕೆ ಬೆಕ್ಕನ್ನು ಕಳವು ಮಾಡಿದ್ದಾರೆ. ಅವರ ಮನೆಯಲ್ಲಿ ಬೆಕ್ಕು ಏಕೆ ಇತ್ತು, ಮಹಿಳೆಯ ಘನತೆಗೆ ಧಕ್ಕೆ ತಂದಿರುವುದಕ್ಕೂ ಬೆಕ್ಕಿಗೂ ಏನು ಸಂಬಂಧ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯೂರ್ತಿಗಳು ಪ್ರಶ್ನಿಸಿದರು.
ಅರ್ಜಿದಾರರು ಪರ ವಕೀಲರು ಉತ್ತರಿಸಿ, ಬೆಕ್ಕು ನಮ್ಮ ಮನೆಯ ಕಿಟಕಿಯಿಂದ ಬಂದು ಹೋಗುತ್ತದೆ, ಸಿಸಿಟಿವಿಯ ಅ ದೃಶ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ. ಅರ್ಜಿದಾರರ ಮನೆಯ ರಸ್ತೆಯಲ್ಲಿ ಇರುವವರೆಲ್ಲರ ವಿರುದ್ಧವೂ ಬೆಕ್ಕು ಕಳೆದುಕೊಂಡ ಬಗ್ಗೆ ದೂರು ದಾಖಲಿಸಲಾಗಿದೆ. ಈಗಾಗಲೇ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅಪಹರಣ ಪ್ರಕರಣ ದಾಖಲಿಸಿಲ್ಲವಷ್ಟೇ ಎಂದು ವಿವರಿಸಿದರು.
ನ್ಯಾಯಮೂರ್ತಿ ಅಚ್ಚರಿ:
ದೋಷಾರೋಪ ಪಟ್ಟಿ ಸಲ್ಲಿಸಿರುವ ಪೊಲೀಸರ ನಡೆಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ನಿಜವಾದ ಅಪರಾಧ ಪ್ರಕರಣಗಳನ್ನು ನೋಡಿ ಎಂದರೆ, ಬೆಕ್ಕು ಕಾಣೆಯಾದ ಪ್ರಕರಣವನ್ನು ಪೊಲೀಸರು ನೋಡುತ್ತಾರೆ. ಬೆಕ್ಕು ಎಲ್ಲರ ಮನೆಗೆ ಒಳಗೆ ಹೋಗಿ ಹೊರಬಂದಿದೆ. ಇದರಿಂದ ಬೆಕ್ಕು ಕಾಣೆಯಾಗಿದೆ ಎಂದು ದೂರು ನೀಡಿದರೆ, ಅದನ್ನು ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.