ನವದೆಹಲಿ : 2012ರಲ್ಲಿ ಪಕ್ಷ ಸ್ಥಾಪನೆ ಆದ ನಂತರ ಆಮ್ ಆದ್ಮಿ ಪಕ್ಷಕ್ಕೆ (ಆಪ್) ಶುಕ್ರವಾರ ಅತಿದೊಡ್ಡ ಹೊಡೆತ ಬಿದ್ದಿದೆ. ಇತ್ತೀಚೆಗೆ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಜತೆ ಮುನಿದಿದ್ದ ಪಕ್ಷದ ಪ್ರಮುಖ ಸಂಸದ ರಾಘವ್ ಚಡ್ಢಾ ಸೇರಿದಂತೆ 3 ರಾಜ್ಯಸಭಾ ಸದಸ್ಯರು ಅತ್ಯಂತ ನಾಟಕೀಯ ವಿದ್ಯಮಾನದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ.
ಇನ್ನುಳಿದ ರಾಜ್ಯಸಭಾ ಸದಸ್ಯರಾದ ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಂ ಸಾಹ್ನಿ ಹಾಗೂ ಪಕ್ಷದಿಂದ ಕಳೆದ 2 ವರ್ಷದಿಂದ ಅಂತರ ಕಾಯ್ದುಕೊಂಡಿದ್ದ ಸ್ವಾತಿ ಮಲಿವಾಲ್ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು 7 ಸಂಸದರ ಪಟ್ಟಿಯನ್ನು ರಾಜ್ಯಸಭೆ ಸಭಾಪತಿಗೆ ಚಡ್ಢಾ ಸಲ್ಲಿಸಿದ್ದಾರೆ.
ಚಡ್ಢಾ ಜತೆ ಅಧಿಕೃತವಾಗಿ ಬಿಜೆಪಿ ಸೇರಿದವರೆಂದರೆ, ಇತ್ತೀಚೆಗೆ ರಾಜ್ಯಸಭೆಯಲ್ಲಿನ ಆಪ್ ಉಪ ನಾಯಕರಾಗಿ ನೇಮಕವಾಗಿದ್ದ ಹಾಗೂ ಇ.ಡಿ. (ಜಾರಿ ನಿರ್ದೇಶನಾಲಯ) ದಾಳಿ ಎದುರಿಸಿದ್ದ ಅಶೋಕ್ ಮಿತ್ತಲ್ ಹಾಗೂ ಪಂಜಾಬ್‌ನಲ್ಲಿ ಆಪ್ ಸಂಘಟನೆಗೆ ಹೆಸರುವಾಸಿಯಾಗಿದ್ದ ಸಂದೀಪ್ ಪಾಠಕ್.
ಪಂಜಾಬ್ ಚುನಾವಣೆಗಳು 2027ರಲ್ಲಿ ನಡೆಯಲಿವೆ. ಈಗ ಬಿಜೆಪಿ ಸೇರಿದವರಲ್ಲಿ ಹೆಚ್ಚಿನವರು ಪಂಜಾಬ್‌ನಿಂದ ಆಯ್ಕೆ ಆದವರು. ಹೀಗಾಗಿ ಪಂಜಾಬ್‌ನ ಆಡಳಿತಾರೂಢ ಆಪ್‌ಗೆ ಇದು ದೊಡ್ಡ ಹೊಡೆತ ಎನ್ನಲಾಗಿದೆ.
ಅನರ್ಹತೆ ಭೀತಿಯಿಲ್ಲ:
ರಾಜ್ಯಸಭೆಯಲ್ಲಿ ಆಪ್‌ನ 10 ಸಂಸದರಿದ್ದಾರೆ. ಇವರಲ್ಲಿ 3 ಮಂದಿ ಖುದ್ದಾಗಿ ಘೋಷಿಸಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಇನ್ನೂ ನಾಲ್ವರ ಪಟ್ಟಿಯನ್ನು ಚಡ್ಢಾ ಪ್ರಕಟಿಸಿದ್ದಾರೆ. ಇದರಿಂದಾಗಿ ಬಿಜೆಪಿ ಸೇರುವವರ ಸಂಖ್ಯೆ 7 ಆಗುತ್ತದೆ. 10 ರಾಜ್ಯಸಭಾ ಸದಸ್ಯರಲ್ಲಿ 7 ಜನ ಬಿಜೆಪಿ ಸೇರುವ ಕಾರಣ (3ನೇ 2ರಷ್ಟು) ಅನರ್ಹತೆ ಪ್ರಶ್ನೆ ಉದ್ಭವಿಸುವುದಿಲ್ಲ. ಆಪ್ ಸಂಸದೀಯ ಪಕ್ಷವೇ ಬಿಜೆಪಿ ಸೇರಿದಂತಾಗುತ್ತದೆ. ಹೀಗಾಗಿ ಅನರ್ಹತೆ ಭೀತಿ ಇಲ್ಲ ಎಂಬುದು ಚಡ್ಢಾ ಬಣದ ವಾದ.
ಈ ಬಗ್ಗೆ ಮಾತನಾಡಿದ ಚಡ್ಢಾ, ‘ಸಂವಿಧಾನದ ಪ್ರಕಾರ, ಒಂದು ಪಕ್ಷದ ಒಟ್ಟು ಸಂಸದರಲ್ಲಿ 2/3ರಷ್ಟು ಜನ ಇನ್ನೊಂದು ಪಕ್ಷದೊಂದಿಗೆ ವಿಲೀನಗೊಳ್ಳಬಹುದು. ಈ ಸಂಬಂಧ ನಾವು ಇಂದು ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಪತ್ರ ಸಲ್ಲಿಸಿದ್ದೇವೆ’ ಎಂದಿದ್ದಾರೆ.
ಒಟ್ಟಾರೆ, ಆಪ್ ತೊರೆಯುವವರು ಹಾಗೂ ತೊರೆದವರ ಪಟ್ಟಿಯಲ್ಲಿ 7 ಸಂಸದರ ಹೆಸರು ಇರುವ ಕಾರಣ, ಇನ್ನು ಮೂವರು ಮಾತ್ರ ಉಳಿದಂತಾಗಿದೆ.
ಚಡ್ಢಾಗೆ ನವೀನ್ ಸ್ವಾಗತ:
ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಚಡ್ಢಾ, ತಾವು ಇತರ 6 ಸಂಸದರ ಜತೆ ಪಕ್ಷವನ್ನು ತೊರೆಯುತ್ತಿರುವುದಾಗಿ ಘೋಷಿಸಿದರು. ನಂತರ ಮಿತ್ತಲ್ ಹಾಗೂ ಪಾಠಕ್‌ರ ಜೊತೆಗೂಡಿ ಬಿಜೆಪಿ ಕಚೇರಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಚಡ್ಢಾ ಹೇಳಿದ್ದೇನು?:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಡ್ಢಾ, ‘ಕಳೆದ ಕೆಲವು ವರ್ಷಗಳಿಂದ, ನಾನು ತಪ್ಪು ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ ಎನಿಸುತ್ತಿತ್ತು. ಇಂದು, ನಾನು ಆಪ್‌ನಿಂದ ದೂರ ಸರಿದು ಜನರ ಜೊತೆ ಹೆಚ್ಚು ನಿಕಟವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ. 2012ರಲ್ಲಿ ಸ್ಥಾಪನೆ ಆದಾಗಿನ ಪಕ್ಷ ಇದಾಗಿಲ್ಲ. ಇಂದು ನಾನು ಬದಲಾಗಿರುವ ಆಪ್ ವಿರುದ್ಧವೇ ಹೋರಾಟ ಆರಂಭಿಸುತ್ತೇನೆ’ ಎಂದರು.
ಇತ್ತೀಚೆಗೆ ಚಡ್ಢಾ ಅವರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಕಿತ್ತೆಸೆದು ಅವರ ಸ್ಥಾನದಲ್ಲಿ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿತ್ತು.
