ಸಾರಾಂಶ
ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಉತ್ತರ ಪ್ರದೇಶದ ಅಮೇಠಿಯಿಂದ ಕಣಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ. ‘ಅಮೇಠಿ ಜನರು ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಕ್ಷೇತ್ರದಿಂದ ನಾನು ಸ್ಪರ್ಧಿಸಬೇಕು ಎಂದು ಬಯಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಅಮೇಠಿಯ ಜನರು ತಮ್ಮ ತಪ್ಪನ್ನು ಅರ್ಥಮಾಡಿಕೊಂಡಿದ್ದಾರೆ. ಮತ್ತು ಈಗ ಅವರು ತಮ್ಮ ಕ್ಷೇತ್ರವನ್ನು ಪ್ರತಿನಿಧಿಸಲು ಗಾಂಧಿ ಕುಟುಂಬದ ಸದಸ್ಯರನ್ನು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ರಾಜಕೀಯಕ್ಕೆ ಸೇರಲು ನಿರ್ಧರಿಸಿದರೆ ಅಮೇಠಿಯಿಂದಲೇ ಪದಾರ್ಪಣೆ ಮಾಡಬೇಕು. ಇಲ್ಲಿಂದಲೇ ಆಯ್ಕೆ ಆಗಬೇಕು ಎಂದು ಅಲ್ಲಿನ ಜನರಿಂದ ನನಗೆ ವಿನಂತಿಗಳು ಬರುತ್ತವೆ’ ಎಂದರು.‘
ಈಗಿನ ಸಂಸದೆಯನ್ನು (ಇರಾನಿ) ಅವರನ್ನು ಆಯ್ಕೆ ಮಾಡಿ ತಪ್ಪು ಮಾಡಿದೆವು ಎಂದು ಜನ ಅಂದುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಅವರು ಗಾಂಧಿ ಕುಟುಂಬದ ಪುನರಾಗಮನ ಬಯಸುತ್ತಿದ್ದಾರೆ’ ಎಂದರು.ಅಲ್ಲದೆ, ‘ನಾನು ಮೊದಲ ಚುನಾವಣಾ ಪ್ರಚಾರ ಮಾಡಿದ್ದು 1999ರಲ್ಲಿ ಅಮೇಠಿಯಿಂದಲಲೇ ಎಂಬುದು ನನಗೆ ನೆನಪಿದೆ’ ಎಂದು ವಾದ್ರಾ ಹೇಳಿದರು.
ಅಮೇಠಿ ಕ್ಷೇತ್ರದಲ್ಲಿ ಕಳೆದ ಸಲ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರು ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಈ ಸಲ ಇರಾನಿ ಮತ್ತೆ ಚುನಾವಣೆಗೆ ನಿಂತಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ.ವಾದ್ರಾ ವಿರುದ್ಧ ಅಕ್ರಮ ಆದಾಯ, ಅಕ್ರಮ ಆಸ್ತಿ ಸೇರಿ ಹಲವು ಆರೋಪಗಳು ಇದ್ದು ಸಿಬಿಐ ಸೇರಿ ವಿವಿಧ ಸಂಸ್ಥೆಗಳು ತನಿಖೆ ಮಡೆಸುತ್ತಿವೆ.