ಮೊದಲ ಮಳೆಗೆ ಸೋರುತಿಹುದು ರಾಮಮಂದಿರ

| Published : Jun 25 2024, 10:55 AM IST

Mukesh Ambani Donation to Ram Mandir

ಸಾರಾಂಶ

ಮೊದಲ ಮಳೆಗೆ ಅಯೋಧ್ಯೆಯಲ್ಲಿನಿರ್ಮಾಣವಾಗಿರುವ ರಾಮಮಂದಿರ ಮಾಳಿಗೆ ಸೋರುತಿದೆ ಎಂದು ವರದಿಯಾಗಿದೆ. ಆರು ತಿಂಗಳ ಹಿಂದೆ 22ನೇ ಜನವರಿ 2024ರಂದು ರಾಮಮಂದಿರ ಉದ್ಘಾಟನೆ ಮಾಡಲಾಗಿತ್ತು.

ಆಯೋಧ್ಯೆ: ಮೊದಲ ಮಳೆಗೆ ಅಯೋಧ್ಯೆಯಲ್ಲಿನಿರ್ಮಾಣವಾಗಿರುವ ರಾಮಮಂದಿರ  ಮಾಳಿಗೆ ಸೋರುತಿದೆ ಎಂದು ವರದಿಯಾಗಿದೆ. ಆರು ತಿಂಗಳ ಹಿಂದೆ 22ನೇ ಜನವರಿ 2024ರಂದು ರಾಮಮಂದಿರ ಉದ್ಘಾಟನೆ ಮಾಡಲಾಗಿತ್ತು. ಇದೀಗ ಉತ್ತರ ಪ್ರದೇಶದ ಭಾಗದಲ್ಲಿ ಮಳೆಆರಂಭವಾಗಿದ್ದು, ರಾಮಮಂದಿರದ ಮೇಲ್ಛಾವಣೆಯಿಂದ ನೀರು ಸೋರಿಕೆಯಾಗುತ್ತಿದೆ. ಗರ್ಭಗುಡಿಯಲ್ಲಿಯೂ ಸೋರಿಕೆಯಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಕುರಿತು ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್, ಬಾಲರಾಮನನ್ನು ಪ್ರತಿಷ್ಠಾಪನೆ ಮಾಡಲಾಗಿರುವ ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆಯಾಗಿದೆ. ಅಲ್ಲದೇ ಇಲ್ಲಿ ಒಳಚರಂಡಿಯ ವ್ಯವಸ್ಥೆಯನ್ನು ಸಹ ಮಾಡಿಲ್ಲ ಎಂದು ಹೇಳಿದ್ದಾರೆ.

ಜುಲೈ 2025ರೊಳಗೆ ರಾಮಮಂದಿರದ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಅದು ಅಸಾಧ್ಯ ಎಂಬುವುದು ನನ್ನ ಅನಿಸಿಕೆಯಾಗಿದೆ. ಈಗಾಗಲೇ ಬಂದ ಮೊದಲ ಮಳೆ ಗೆ ರಾಮಲಲ್ಲಾನ ಜಾಗಕ್ಕೆ ನೀರು ಬಂದಿದೆ. ಹೇಗೆ ಸೋರಿಕೆ ಆಯ್ತು? ಮಳೆನೀರು ಒಳಗೆ ಬರಲು ಕಾರಣ ಏನು ಎಂಬ ಪ್ರಶ್ನೆಗೆ ಸಂಬಂಧಿಸಿದವರು ಉತ್ತರ ನೀಡಬೇಕು. ಹಾಗೆ ಕಾಮಗಾರಿಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಧಾನ ಅರ್ಚಕರಾದ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ.

ಮಂದಿರ ನಿರ್ಮಾಣದಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಎರಡ್ಮೂರು ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಪರಿಹಾರ ರೂಪಿಸಬೇಕು. ಒಂದು ವೇಳೆ ಮಳೆ ಹೆಚ್ಚಾದ್ರೆ ಸೋರಿಕೆ ಹೆಚ್ಚಾಗಬಹುದು ಎಂದು ಸತ್ಯೇಂದ್ರ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ರಾಮಮಂದಿರಕ್ಕೆ ಸಂಬಂಧಿಸಿದ ಪ್ರಕೋಷ್ಠದ ಕಾಮಗಾರಿ 2025ರೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳ್ತಾರೆ. ಆದ್ರೆ ಒಂದೇ ವರ್ಷದಲ್ಲಿ ಕೆಲಸ ಪೂರ್ಣವಾಗೋದು ಅಸಾಧ್ಯ. ಸದ್ಯ ಕೆಲಸದ ವೇಗವನ್ನು ಗಮನಿಸಿದರೆ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ವರ್ಷದಲ್ಲಿಯೇ ಪೂರ್ಣವಾಗುತ್ತೆ ಎಂದು ನಂಬುತ್ತೇನೆ. ರಾಮಲಲ್ಲಾನನ್ನು ಪ್ರತಿಷ್ಠಾಪನೆ ಮಾಡಿರುವ ದೇವಸ್ಥಾನ ಮೊದಲ ಮಳೆಗೆ ಸೋರಿಕೆಯಾಗುತ್ತಿದೆ. ಮಳೆಯಿಂದ ಗರ್ಭಗುಡಿಯೊಳಗೆ ನೀರು ತುಂಬಿಕೊಂಡಿತ್ತು. ಕಾಮಗಾರಿ ವೇಳೆ ಎಲ್ಲಿ ಲೋಪವಾಗಿದೆ ಎಂದು ಕಂಡು ಹಿಡಿದು ಸಮಸ್ಯೆಯನ್ನು ಪರಿಹರಿಸಬೇಕಿದೆ. ನೀರು ಹೊರಗೆ ಹೋಗಲು ಯಾವುದೇ ವ್ಯವಸ್ಥೆಯೇ ಇಲ್ಲ. ಸೋರಿಕೆಯಾದ ನೀರು ಅಲ್ಲಿಯೇ ಸಂಗ್ರಹವಾಗ್ತಿದೆ. ಮೊದಲು ಈ ಸಮಸ್ಯೆಯನ್ನು ಪರಿಹರಿಸಬೇಕಿದೆ. ಸಂಪೂರ್ಣ ಮಳೆಗಾಲ ಶುರುವಾದ್ರೆ ಸಮಸ್ಯೆಯ ತೀವ್ರತೆ ಹೆಚ್ಚಾಗಬಹುದು ಎಂದು ಪ್ರಧಾನ ಅರ್ಚಕರು ಹೇಳಿದ್ದಾರೆ.