ಕರ್ನಾಟಕ ದೇಶದ ಕೈಗಾರಿಕೆಯ ಬೆನ್ನೆಲುಬು: ಸಿದ್ದು

| Published : Feb 12 2025, 12:33 AM IST

ಸಾರಾಂಶ

ಭಾರತದ ಆರ್ಥಿಕ ಪರಿವರ್ತನೆಯಲ್ಲಿ ರಾಜ್ಯವು ಸದಾ ಮುಂಚೂಣಿಯಲ್ಲಿದ್ದು, ಪ್ರಸ್ತುತ ಕರ್ನಾಟಕವು ದೇಶದಲ್ಲೇ ಅತ್ಯಂತ ಹೂಡಿಕೆದಾರ ಸ್ನೇಹಿ ರಾಜ್ಯವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತದ ಆರ್ಥಿಕ ಪರಿವರ್ತನೆಯಲ್ಲಿ ರಾಜ್ಯವು ಸದಾ ಮುಂಚೂಣಿಯಲ್ಲಿದ್ದು, ಪ್ರಸ್ತುತ ಕರ್ನಾಟಕವು ದೇಶದಲ್ಲೇ ಅತ್ಯಂತ ಹೂಡಿಕೆದಾರ ಸ್ನೇಹಿ ರಾಜ್ಯವಾಗಿದೆ. ಎಚ್‌ಎಎಲ್‌, ಬಿಇಎಲ್‌, ಬಿಇಎಂಎಲ್‌ನಂಥ ಸಾರ್ವಜನಿಕ ಉದ್ದಿಮೆಗಳು ನಮ್ಮಲ್ಲಿದ್ದು, ಕರ್ನಾಟಕವು ದೇಶದ ಕೈಗಾರಿಕಾ ಬೆಳವಣಿಗೆಯ ಬೆನ್ನೆಲುಬಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ಅರಮನೆಯಲ್ಲಿ ನಡೆದ ಇನ್ವೆಸ್ಟ್‌ ಕರ್ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳವಾರ ಮಾತನಾಡಿದ ಅವರು, ಕರ್ನಾಟಕವನ್ನು ದೇಶದಲ್ಲೇ ಹೂಡಿಕೆದಾರ ಸ್ನೇಹಿ ಎಂದು ಗುರುತಿಸಲಾಗುತ್ತದೆ. ದೇಶದ ಆರ್ಥಿಕತೆಗೆ ಕರ್ನಾಟಕದ ಕೊಡುಗೆ ಬಹಳ ದೊಡ್ಡದಿದೆ. ಭವಿಷ್ಯದಲ್ಲೂ ರಾಜ್ಯದಲ್ಲಿ ಹೂಡಿಕೆ ಮಾಡುವವರಿಗೆ ಅನುಕೂಲವಾಗುವಂತೆ ಸದೃಢ ನೀತಿ, ಸಕ್ರಿಯ ಆಡಳಿತ ಮತ್ತು ವ್ಯವಹಾರ-ಸ್ನೇಹಿ ಪರಿಸರ ರೂಪಿಸುವ ಹೊಣೆ ನಮ್ಮದಾಗಿದೆ. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದು, ಪ್ರತಿ ಹೂಡಿಕೆದಾರರು ಯಶಸ್ವಿಯಾಗುವಂತೆ ಹಾಗೂ ಸುಸ್ಥಿರ ಬೆಳವಣಿಗೆಯಾಗುವಂತೆ ಕೆಲಸ ಮಾಡಲಾಗುತ್ತಿದೆ ಎಂದರು.

ರಾಜ್ಯದ ಕೈಗಾರಿಕಾ ಇತಿಹಾಸಕ್ಕೆ ಶತಮಾನದ ಇತಿಹಾಸವಿದೆ. ಕದಂಬರು, ಗಂಗರು, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮಾಜ್ಯ ಮತ್ತು ಮೈಸೂರು ಒಡೆಯರ ಆಳ್ವಿಕೆಯಲ್ಲಿ ಕರ್ನಾಟಕದಲ್ಲಿ ನೇಕಾರಿಕೆ, ಲೋಹಶಾಸ್ತ್ರ, ಶಿಲ್ಪಕಲೆ, ಕರಕುಶಲ ಸಾಮಗ್ರಿಗಳ ತಯಾರಿಕೆಯ ತಾಣವಾಗಿತ್ತು ಮತ್ತು ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು 1923ರಲ್ಲಿ ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪಿಸುವ ಮೂಲಕ ದೇಶದ ಮೊದಲ ಬೃಹತ್‌ ಉಕ್ಕು ಕೈಗಾರಿಕೆ ನಿರ್ಮಿಸಿದರು. ಎಚ್‌ಎಎಲ್‌, ಬಿಇಎಲ್‌, ಬಿಇಎಂಎಲ್‌ ಸೇರಿ ಮತ್ತಿತರ ಸಾರ್ವಜನಿಕ ಉದ್ದಿಮೆಗಳು ಕರ್ನಾಟಕದಲ್ಲಿದ್ದು, ದೇಶದ ಕೈಗಾರಿಕಾ ಬೆಳವಣಿಗೆಯ ಬೆನ್ನೆಲುಬಾಗಿದೆ ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್‌, ಸ್ಪೇಸ್‌, ಬಯೋಟೆಕ್‌ ಮತ್ತಿತರ ಕ್ಷೇತ್ರದ 400ಕ್ಕೂ ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಕರ್ನಾಟಕ ಹೊಂದಿದ್ದು, ಭಾರತದ ಬೌದ್ಧಿಕ ಕೇಂದ್ರವಾಗಿ ತಲೆ ಎತ್ತಿದೆ. ಸುಸ್ಥಿರ ಬೆಳವಣಿಗೆಯ ಕರ್ನಾಟಕ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದ್ದು, ಹಸಿರು ಆರ್ಥಿಕತೆ, ಪರಿಸರ ಸ್ನೇಹಿ ಕೈಗಾರಿಕಾ ವಲಯ ಸ್ಥಾಪನೆ ಮಾಡಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಮೇಲಿನ ಪ್ರಯಾಣಿಕರ ಒತ್ತಡವೇ ಇದಕ್ಕೆ ಸಾಕ್ಷಿ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದೊಂದಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಿಸಲಾಗುತ್ತಿದೆ. ಅದರಿಂದ ಬೆಂಗಳೂರಿನ ಜಾಗತಿಕ ಸಂಪರ್ಕ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಆಡಳಿತದಲ್ಲೂ ಎಐ: ಉತ್ತಮ ಭವಿಷ್ಯಕ್ಕಾಗಿ ಕರ್ನಾಟಕದ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಲಾಗುತ್ತಿದೆ. ಬ್ಲಾಕ್‌ಚೈನ್‌ ಮತ್ತು ಕ್ಲೌಡ್‌ ಕಂಪ್ಯೂಟಿಂಗ್‌ಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಇವೆಲ್ಲದರ ಜತೆಗೆ ಕರ್ನಾಟಕವು ದೇಶದ ಎಲೆಕ್ಟ್ರಿಕ್‌ ವಾಹನಗಳ ರಾಜಧಾನಿಯಾಗಿ ರೂಪುಗೊಂಡಿದೆ ಎಂದು ಹೇಳಿದರು.

ರಾಜ್ಯದ ಮೂಲೆ ಮೂಲೆಯಲ್ಲೂ ಅಭಿವೃದ್ಧಿ: ಬೀದರ್‌ನಿಂದ ಬೆಂಗಳೂರಿನವರೆಗೆ, ಬೆಳಗಾವಿಯಿಂದ ಬಳ್ಳಾರಿವರೆಗೆ ರಾಜ್ಯದ ಪ್ರತಿ ಮೂಲೆಗೂ ಅಭಿವೃದ್ಧಿಯನ್ನು ತಲುಪಿಸಲಾಗುತ್ತಿದೆ. ಇನ್ವೆಸ್ಟ್ ಕರ್ನಾಟಕದ ಮೂಲಕ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ಹೆಚ್ಚಲಿವೆ. ಹೂಡಿಕೆದಾರರಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ಹೂಡಿಕೆದಾರರಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉತ್ತಮ ಸಮಯ ಇದಾಗಿದೆ. ನಮ್ಮೊಂದಿಗೆ ಪಾಲುದಾರರಾಗಿ, ನಮ್ಮೊಂದಿಗೆ ಬೆಳೆಯಬೇಕು. ಉಜ್ವಲ ಭವಿಷ್ಯವುಳ್ಳ ಕರ್ನಾಟಕದ ಬೆಳವಣಿಗೆಗೆ ಅವರು ಪಾಲುದಾರರಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.