ಎಲೆಕ್ಟ್ರಾನಿಕ್‌ ಮತಯಂತ್ರ ಮತ್ತು ವಿವಿಪ್ಯಾಟ್‌ಗೆ ಬಿದ್ದ ಮತಗಳ ನಡುವೆ ತಾಳೆ ಆಗದ ಕುರಿತು ಹಾಗೂ ಎಲ್ಲ ವಿವಿಪ್ಯಾಟ್‌ ಮತಗಳನ್ನೂ ತಾಳೆ ಮಾಡಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಗಿಸಿದೆ ಹಾಗೂ ತೀರ್ಪು ಕಾಯ್ದಿರಿಸಿದೆ.

ನವದೆಹಲಿ: ಎಲೆಕ್ಟ್ರಾನಿಕ್‌ ಮತಯಂತ್ರ ಮತ್ತು ವಿವಿಪ್ಯಾಟ್‌ಗೆ ಬಿದ್ದ ಮತಗಳ ನಡುವೆ ತಾಳೆ ಆಗದ ಕುರಿತು ಹಾಗೂ ಎಲ್ಲ ವಿವಿಪ್ಯಾಟ್‌ ಮತಗಳನ್ನೂ ತಾಳೆ ಮಾಡಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಗಿಸಿದೆ ಹಾಗೂ ತೀರ್ಪು ಕಾಯ್ದಿರಿಸಿದೆ. ಆದರೆ ‘ಕೇವಲ ಸಂದೇಹ ಆಧರಿಸಿ ನಾವು ಮತದಾನ ಪ್ರಕ್ರಿಯೆಯನ್ನು ನಿಯಂತ್ರಣ ಮಾಡಿ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ಅರ್ಜಿದಾರರಿಗೆ ಮೌಖಿಕವಾಗಿ ತಿಳಿಸಿದೆ.

ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ। ಸಂಜೀವ್‌ ಖನ್ನಾ ನೇತೃತ್ವದ ಪೀಠ, ‘ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಚುನಾವಣಾ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ನಡೆಸುತ್ತದೆ. ನಾವು ಕೇವಲ ಸಂದೇಹದ ಆಧಾರದ ಮೇಲೆ ಚುನಾವಣಾ ಆಯೋಗಕ್ಕೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿ ತೀರ್ಪು ಕಾಯ್ದಿರಿಸಿತು.

ಆಯೋಗದ ವಿಚಾರಣೆ:

ಇದೇ ವೇಳೆ ಉಪ ಚುನಾವಣಾ ಆಯುಕ್ತ ನಿತೇಶ್‌ ಕುಮಾರ್‌ ವ್ಯಾಸ್‌ ಅವರಿಗೆ ನ್ಯಾಯಾಲಯವು ವಿವಿ ಪ್ಯಾಟ್‌ನಲ್ಲಿ ಅಳವಡಿಸಲಾಗುವ ಮೈಕ್ರೋಕಂಟ್ರೋಲರ್‌ ಕುರಿತು ತನಗಿದ್ದ 5 ಸಂದೇಹಗಳನ್ನು ಪರಿಹರಿಸುವಂತೆ ಕೇಳಿತು. ಆಗ ವ್ಯಾಸ್‌ ಅವರು ಮತಗಳನ್ನು ತಿರುಚಲು ಸಾಧ್ಯವಿಲ್ಲ ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ ‘ನಮಗೆ ಸಂದೇಹ ಸಂಪೂರ್ಣ ನಿವಾರಣೆ ಆಗಿದೆ. ಹೀಗಾಗಿ ಸಂದೇಹ ಆಧರಿಸಿ ನಿರ್ದೇಶನ ನೀಡಲಾಗದು’ ಎಂದಿತು.

ಕೇರಳದಲ್ಲಿ ಚುನಾವಣಾ ಆಯೋಗವು ಇವಿಎಂನಲ್ಲಿ ಮತದಾನ ಮಾಡುವ ಕುರಿತು ಪ್ರಾತ್ಯಕ್ಷಿಕೆ ಮಾಡುವಾಗ ವಿವಿಪ್ಯಾಟ್‌ನಲ್ಲಿ ಬಿಜೆಪಿಗೆ ಒಂದು ಹೆಚ್ಚುವರಿ ಮತ ಬಿದ್ದಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.