ನಾನು ಗೃಹ ಮಂತ್ರಿ ಆಗಿದ್ದರೆ ಬೇರೆನೇ ಕತೆ: ಕಲ್ಯಾಣ್‌

| Published : Nov 05 2024, 12:48 AM IST

ನಾನು ಗೃಹ ಮಂತ್ರಿ ಆಗಿದ್ದರೆ ಬೇರೆನೇ ಕತೆ: ಕಲ್ಯಾಣ್‌
Share this Article
  • FB
  • TW
  • Linkdin
  • Email

ಸಾರಾಂಶ

ಆಂಧ್ರಪ್ರದೇಶದಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಿಡಿ ಕಾರಿರುವ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌, ತಮ್ಮದೇ ಮಿತ್ರಪಕ್ಷ ಟಿಡಿಪಿಯ ಗೃಹ ಸಚಿವೆ ಅನಿತಾರ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮರಾವತಿ: ಆಂಧ್ರಪ್ರದೇಶದಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಿಡಿ ಕಾರಿರುವ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌, ತಮ್ಮದೇ ಮಿತ್ರಪಕ್ಷ ಟಿಡಿಪಿಯ ಗೃಹ ಸಚಿವೆ ಅನಿತಾರ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾತನಾಡಿದ ಅವರು, ‘ಅಪರಾಧಿಗಳಿಗೆ ಜಾತಿ ಧರ್ಮಗಳಿರದು. ಅನಿತಾ ಅವರೇ, ಗೃಹ ಸಚಿವರಾಗಿರುವ ನೀವು ಲೈಂಗಿಕ ದೌರ್ಜನ್ಯ ಪ್ರಕರಣಗಳ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾನು ಗೃಹ ಸಚಿವನ ಹುದ್ದೆ ಕೇಳಲಾಗದು ಎಂದೇನೂ ಇಲ್ಲ. ಹಾಗೇನಾದರೂ ಆಗಿದ್ದರೆ ಕತೆ ಬೇರೆಯದೇ ಆಗಿರುತ್ತಿತ್ತು. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ನಾನೇ ಈ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ’ ಎಂದು ಕಲ್ಯಾಣ್‌ ಗುಡುಗಿದರು,

ಜೊತೆಗೆ, ಅಪರಾಧಿಗಳನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಮಾದರಿಯಲ್ಲಿ ಶಿಕ್ಷಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಜನಸೇನಾ ನಾಯಕ ಪವನ್‌ ಕಲ್ಯಾಣ್‌, ಮಿತ್ರಪಕ್ಷವಾದ ಟಿಡಿಪಿಯ ಸಚಿವೆ ಅನಿತಾರ ವಿರುದ್ಧ ವಾಗ್ದಾಳಿ ನಡೆಸಿರುವುದು ಮೈತ್ರಿಕೂಟದಲ್ಲಿ ಬಿರುಕಿನ ಕುರಿತು ಸುಳಿವು ನೀಡಿದೆ.

ಇನ್ನು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕಲ್ಯಾಣ್‌, ‘ಡಿಜಿಪಿ ಹಾಗೂ ಗುಪ್ತಚರ ಅಧಿಕಾರಿಗಳನ್ನು ಜನ ಟೀಕಿಸುತ್ತಿದ್ದಾರೆ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ನಿಮಗೆ ಸ್ಪಷ್ಟ ಸೂಚನೆ ನೀಡಲಾಗಿದ್ದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಧಿಕಾರಿಗಳು ನನ್ನಂಥವರನ್ನು ಬಂಧಿಸಲು ಸಿದ್ಧರಿದ್ದಾರೆಯೇ ಹೊರತು, ಅಪರಾಧಿಗಳನ್ನಲ್ಲ’ ಎಂದರು.