ಇಸ್ರೋ ಸಣ್ಣ ರಾಕೆಟ್‌ ಉಡಾವಣೆ ಯಶಸ್ವಿ : ಎರಡು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ದ ಎಸ್‌ಎಸ್‌ಎಲ್‌ವಿ

| Published : Aug 17 2024, 12:51 AM IST / Updated: Aug 17 2024, 05:01 AM IST

ಸಾರಾಂಶ

ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲೆಂದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಭಿವೃದ್ಧಿಪಡಿಸಿದ ಪುಟ್ಟ ರಾಕೆಟ್‌ ಎಸ್‌ಎಸ್‌ಎಲ್‌ವಿ (ಸ್ಮಾಲ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌) ಯಶಸ್ವಿಯಾಗಿ ಎರಡು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ದಿದೆ.

  ಶ್ರೀಹರಿಕೋಟ :  ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲೆಂದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಭಿವೃದ್ಧಿಪಡಿಸಿದ ಪುಟ್ಟ ರಾಕೆಟ್‌ ಎಸ್‌ಎಸ್‌ಎಲ್‌ವಿ (ಸ್ಮಾಲ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌) ಯಶಸ್ವಿಯಾಗಿ ಎರಡು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ದಿದೆ. ತನ್ಮೂಲಕ, ಸಣ್ಣಪುಟ್ಟ ಉಪಗ್ರಹಗಳನ್ನು ದೊಡ್ಡ ರಾಕೆಟ್‌ಗಳಲ್ಲಿ ಅಂತರಿಕ್ಷಕ್ಕೆ ಹಾರಿಸಿ ಹಣ ವ್ಯರ್ಥ ಮಾಡುವುದರ ಬದಲು ಸಣ್ಣ ರಾಕೆಟ್‌ ಬಳಸಿ ಅವುಗಳನ್ನು ಉಡಾವಣೆ ಮಾಡುವ ಇಸ್ರೋ ಪ್ರಯೋಗ 3ನೇ ಪ್ರಯತ್ನದಲ್ಲಿ ಯಶಸ್ವಿಯಾಗಿದೆ.

‘ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಶುಕ್ರವಾರ ಬೆಳಿಗ್ಗೆ ಉಡಾವಣೆಯಾದ ಎಸ್‌ಎಸ್‌ಎಲ್‌ವಿ ರಾಕೆಟ್‌, ತಾನು ಹೊತ್ತೊಯ್ದ ಇಒಎಸ್‌-08 ಹಾಗೂ ಎಸ್‌ಆರ್‌-ಒ ಡೆಮೊಸ್ಯಾಟ್‌ ಉಪಗ್ರಹಗಳನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಗಳಿಗೆ ಸೇರಿಸಿದೆ’ ಎಂದು ಇಸ್ರೋ ಚೇರ್ಮನ್‌ ಎಸ್‌.ಸೋಮನಾಥ್‌ ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ವಿ ಪ್ರಯೋಗ 2022ರಲ್ಲಿ ವಿಫಲವಾಗಿತ್ತು. 2023ರಲ್ಲಿ ಯಶಸ್ವಿಯಾಗಿತ್ತು. ಇದೀಗ ಅಂತಿಮ ಹಾಗೂ 3ನೇ ಪ್ರಯೋಗದಲ್ಲಿ ಎರಡು ಕಡಿಮೆ ತೂಕದ ರಾಕೆಟ್‌ಗಳನ್ನು ಗಗನಕ್ಕೆ ಸೇರಿಸಿದೆ. ಇಸ್ರೋದ ಈ ರಾಕೆಟ್‌ ವಾಣಿಜ್ಯ ಉದ್ದೇಶದ ಖಾಸಗಿ ಕಂಪನಿಗಳ ಸಣ್ಣಪುಟ್ಟ ಉಪಗ್ರಹಗಳನ್ನು ಕಡಿಮೆ ಖರ್ಚಿನಲ್ಲಿ ಅಂತರಿಕ್ಷಕ್ಕೆ ಕೊಂಡೊಯ್ಯಲು ನೆರವಾಗಲಿದೆ.

ಶುಕ್ರವಾರ ಅಂತರಿಕ್ಷಕ್ಕೆ ಸೇರ್ಪಡೆಯಾದ ಉಪಗ್ರಹಗಳನ್ನು ವಿಚಕ್ಷಣೆ, ವಿಪತ್ತು ನಿರ್ವಹಣೆ, ಪರಿಸರ ನಿಗಾ, ಬೆಂಕಿ ಪತ್ತೆ, ಜ್ವಾಲಾಮುಖಿಗಳ ಚಟುವಟಿಕೆ ವೀಕ್ಷಣೆ ಮುಂತಾದ ಉದ್ದೇಶಗಳಿಗೆ ಬಳಸಬಹುದಾಗಿದೆ.

ಏನಿದರ ವಿಶೇಷತೆ:

500 ಕೆ.ಜಿ.ವರೆಗಿನ ತೂಕದ ಉಪಗ್ರಹಗಳನ್ನು ಭೂಮಿಯ ಮೇಲೆ 500 ಕಿ.ಮೀ.ವರೆಗಿನ ಸಮೀಪದ ಕಕ್ಷೆಗೆ ಕೊಂಡೊಯ್ದು ಸೇರಿಸುವ ಕೆಲಸಕ್ಕೆ ಎಸ್‌ಎಸ್‌ಎಲ್‌ವಿ ಬಳಕೆಯಾಗಲಿದೆ. ಮಿನಿ, ಮೈಕ್ರೋ ಮತ್ತು ನ್ಯಾನೋ ಉಪಗ್ರಹಗಳನ್ನು ಇದರ ಮೂಲಕ ಉಡಾವಣೆ ಮಾಡಬಹುದಾಗಿದೆ.

ಪಿಎಸ್‌ಎಲ್‌ವಿ ರಾಕೆಟ್‌ 44 ಮೀ. ಉದ್ದವಿದ್ದು, 620 ಟನ್‌ ತೂಕವಿದೆ.. ಉಡ್ಡಯನ ವೆಚ್ಚ 220-235 ಕೋಟಿ ರು. ಸಿದ್ಧಪಡಿಸಲು ಸಾಕಷ್ಟು ಸಮಯ ಬೇಕು. ಎಸ್‌ಎಸ್‌ಎಲ್‌ವಿ 33 ಮೀಟರ್‌ ಉದ್ದವಿದ್ದು, 120 ಟನ್‌ ತೂಕವಿದೆ. ಉಡ್ಡಯನ ವೆಚ್ಚ 30-35 ಕೋಟಿ ರು.. ಒಂದೆರೆಡು ದಿನದಲ್ಲೇ ಉಡ್ಡಯನಕ್ಕೆ ಸಿದ್ಧ ಮಾಡಬಹುದು.

ಜಾಗತಿಕವಾಗಿ ಸಣ್ಣ ಉಪಗ್ರಹಗಳ ಉಡ್ಡಯನ ಉದ್ಯಮ 2020ರಲ್ಲಿ 27000 ಕೋಟಿ ರು.ನದ್ಧಾಗಿತ್ತು. 2030ರ ವೇಳೆಗೆ ಇದು 1.12 ಲಕ್ಷ ಕೋಟಿ ರು. ತಲುಪುವ ನಿರೀಕ್ಷೆ ಇದೆ. ಇದರಲ್ಲಿ ಬಹುಪಾಲು ಪಡೆಯುವ ಗುರಿ ಇಸ್ರೋದ್ದು.