ನಾವೇ ಯುದ್ಧ ಗೆದ್ದೆವು: ಷರೀಫ್‌

| Published : Sep 27 2025, 12:03 AM IST

ಸಾರಾಂಶ

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌, ವಿಶ್ವಸಂಸ್ಥೆಯ ವೇದೆಕೆಯಲ್ಲಿ ಕೂಡ ‘ಭಾರತದ ವಿರುದ್ಧದ ಯುದ್ಧದಲ್ಲಿ ಗೆದ್ದಿದ್ದೇ ನಾವು’ ಎಂದಿದ್ದಾರೆ. ಅಲ್ಲದೆ, ‘ಯುದ್ಧ ನಿಲ್ಲಿಸಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಅದಕ್ಕೆಂದೇ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಿದ್ದೆವು’ ಎಂದು ಸಮರ್ಥಿಸಿಕೊಂಡಿದ್ದಾರೆ.

- ವಿಶ್ವಸಂಸ್ಥೆ ವೇದಿಕೆಯಲ್ಲೂ ಪಾಕ್ ಪ್ರಧಾನಿ ಮೊಂಡಾಟ

- ಯುದ್ಧ ನಿಲ್ಲಿಸಿದ್ದೇ ಶಾಂತಿದೂತ ಟ್ರಂಪ್: ಶ್ಲಾಘನೆವಿಶ್ವಸಂಸ್ಥೆ: ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌, ವಿಶ್ವಸಂಸ್ಥೆಯ ವೇದೆಕೆಯಲ್ಲಿ ಕೂಡ ‘ಭಾರತದ ವಿರುದ್ಧದ ಯುದ್ಧದಲ್ಲಿ ಗೆದ್ದಿದ್ದೇ ನಾವು’ ಎಂದಿದ್ದಾರೆ. ಅಲ್ಲದೆ, ‘ಯುದ್ಧ ನಿಲ್ಲಿಸಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಅದಕ್ಕೆಂದೇ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಿದ್ದೆವು’ ಎಂದು ಸಮರ್ಥಿಸಿಕೊಂಡಿದ್ದಾರೆ.ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಸಂಜೆ ಭಾಷಣ ಮಾಡಿದ ಅವರು, ‘ಯಾವುದೇ ಬಾಹ್ಯ ಆಕ್ರಮಣದ ವಿರುದ್ಧ ಪಾಕಿಸ್ತಾನ ಅತ್ಯಂತ ನಿರ್ಣಾಯಕವಾಗಿ ವರ್ತಿಸುತ್ತದೆ ಎಂದು ನಾನು ಕಳೆದ ವರ್ಷ ನಾನು ಇದೇ ವೇದಿಕೆಯಲ್ಲಿ ಎಚ್ಚರಿಸಿದ್ದೆ. ನನ್ನ ಮಾತುಗಳು ನಿಜವಾದವು. ಮೇ ತಿಂಗಳಲ್ಲಿ, ನನ್ನ ದೇಶವು ನಮ್ಮ ಪೂರ್ವ ಭಾಗದಿಂದ ಅಪ್ರಚೋದಿತ ಆಕ್ರಮಣವನ್ನು ಎದುರಿಸಿತು. ನಮ್ಮ ಶತ್ರು ದುರಹಂಕಾರದಿಂದ ಆವೃತನಾಗಿದ್ದ. ಆತನನ್ನು ಅವಮಾನ ಮಾಡಿ ಹಿಂದೆ ಕಳಿಸಿದೆವು. ನಾವು ಯುದ್ಧವನ್ನು ಗೆದ್ದಿದ್ದೇವೆ’ ಎಂದರು.

‘ಪಹಲ್ಗಾಂ ಘಟನೆ ಬಳಿಕ ಪಾಕ್‌ ಪಾತ್ರವಿದೆ ಎಂದು ಭಾರತ ಆರೋಪಿಸಿತು. ಸಾಕ್ಷ್ಯ ನೀಡಿ ಎಂದು ನಾವು ಕೇಳಿದರೂ ಭಾರತ ನೀಡಲಿಲ್ಲ. ಸುಖಾಸುಮ್ಮನೇ ಪಾಕ್‌ ಮೇಲೆ ದಾಳಿ ಮಾಡಿತು. ಆದರೆ ಇದಕ್ಕೆ ನಮ್ಮ ಸೇನಾನಿಗಳು ದಿಟ್ಟ ಉತ್ತರ ನೀಡಿದರು’ ಎಂದರು.

‘ಕೊನೆಗೆ ಕದನ ವಿರಾಮ ಜಾರಿಗೆ ತರುವಲ್ಲಿ ಟ್ರಂಪ್‌ ಸಕ್ರಿಯ ಪಾತ್ರ ವಹಿಸಿದರು. ಅವರು ನಿಜವಾಗಿಯೂ ಶಾಂತಿಯ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಚೀನಾ, ಟರ್ಕಿಯೆ, ಸೌದಿ ಅರೇಬಿಯಾ, ಕತಾರ್, ಅಜೆರ್ಬೈಜಾನ್, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡ ನಮ್ಮ ಪರ ನಿಂತವು’ ಎಂದರು.

‘ಸಿಂಧೂ ನದಿ ಒಪ್ಪಂದ ತಡೆಹಿಡಿವ ಏಕಪಕ್ಷೀಯ ಮತ್ತು ಕಾನೂನುಬಾಹಿರ ಪ್ರಯತ್ನ ಕಾನೂನುಬಾಹಿರ. ಅಲ್ಲದೆ, ಕಾಶ್ಮೀರ ಕಣಿವೆಯಲ್ಲಿ ನಡೆವ ಭಾರತದ ದಬ್ಬಾಳಿಕೆಗೆ ಒಂದು ದಿನ ಸಂಪೂರ್ಣ ಅಂತ್ಯ ಹಾಡಲಾಗುವುದು ಎಂದರು.