ದ್ವೇಷದಿಂದ ಪರಿಚಿತನ ಕೊಲೆ ಮಾಡಿದ್ದ ಮೂವರು ಬಂಧನ

| N/A | Published : Jun 30 2025, 09:16 AM IST

women in jail

ಸಾರಾಂಶ

ದ್ವೇಷದ ಹಿನ್ನೆಲೆಯಲ್ಲಿ ಪರಿಚಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು :  ದ್ವೇಷದ ಹಿನ್ನೆಲೆಯಲ್ಲಿ ಪರಿಚಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮರಿಯಣ್ಣಪಾಳ್ಯ ನಿವಾಸಿ ಪ್ರೇಮಕುಮಾರ (18), ಆರ್‌.ಟಿ.ನಗರದ ಪಂಪಣ್ಣ ಬ್ಲಾಕ್‌ ನಿವಾಸಿ ದರ್ಶನ್‌ (20) ಮತ್ತು 17 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಂಧಿತರು. ಆರೋಪಿಗಳು ಜೂ.23ರಂದು ರಾತ್ರಿ ಆಕಾಶವಾಣಿ ಲೇಔಟ್‌ಗೆ ಹೊಂದಿಕೊಂಡಿರುವ ಮಾನ್ಯತಾ ಟೆಕ್‌ ಪಾರ್ಕ್‌ ಆವರಣದೊಳಗಿನ ಖಾಲಿ ಜಾಗದಲ್ಲಿ ಅಂಜಿನಪ್ಪ ಅಲಿಯಾಸ್‌ ಮಲ್ಲಾಪುರ ಆಂಜಿನಪ್ಪ(33) ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದರು.

ಆಂಜಿನಪ್ಪ ಮತ್ತು ಆರೋಪಿ ಪ್ರೇಮ ಕುಮಾರ್‌ ಪರಿಚಿತರು. 3 ತಿಂಗಳ ಹಿಂದೆ ಆಕಾಶವಾಣಿ ಲೇಔಟ್‌ ಸಮೀಪದ ಖಾಲಿ ಜಾಗದಲ್ಲಿ ಕುರಿ ಮೇಯಿಸುವಾಗ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಆಂಜಿನಪ್ಪ ಪ್ರೇಮಕುಮಾರ್‌ ಮೇಲೆ ಹಲ್ಲೆ ಮಾಡಿದ್ದ. ಹೀಗಾಗಿ ಪ್ರೇಮಕುಮಾರ್‌, ಆಂಜಿನಪ್ಪ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಕಾಯುತ್ತಿದ್ದನು.

ಮಾರ್ಗ ಮಧ್ಯೆ ಸಿಕ್ಕಿ ಕೊಲೆಯಾದ:

ಜೂ.23ರಂದು ರಾತ್ರಿ ಸುಮಾರು 9 ಗಂಟೆಗೆ ಆರೋಪಿ ಪ್ರೇಮಕುಮಾರ್‌ ತನ್ನ ಸ್ನೇಹಿತರಾದ ದರ್ಶನ್‌ ಮತ್ತು ಕಾನೂನು ಸಂರ್ಘಕ್ಕೊಳಗಾದ ಬಾಲಕನೊಂದಿಗೆ ಅಕಾಶವಾಣಿ ಲೇಔಟ್‌ಗೆ ಹೊಂದಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್‌ ಆವರಣದೊಳಗಿನ ಖಾಲಿ ಜಾಗದಲ್ಲಿ ಮದ್ಯ ಸೇವಿಸಿದ್ದಾರೆ. ಬಳಿಕ ಮೂವರು ಮನೆ ಕಡೆಗೆ ಹೊರಟ್ಟಿದ್ದಾರೆ. ಇದೇ ಸಮಯಕ್ಕೆ ಪಾನಮತ್ತನಾಗಿದ್ದ ಆಂಜಿನಪ್ಪ ಅದೇ ಮಾರ್ಗದಲ್ಲಿ ಬಂದಿದ್ದಾನೆ. ಈ ವೇಳೆ ಆರೋಪಿ ಪ್ರೇಮ ಕುಮಾರ್‌, ಆಂಜಿನಪ್ಪನನ್ನು ಕಂಡು 3 ತಿಂಗಳ ಹಿಂದೆ ತನ್ನ ಮೇಲೆ ಹಲ್ಲೆ ಮಾಡಿದ್ದ ವಿಚಾರವಾಗಿ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಬಳಿಕ ಆತನ ಇಬ್ಬರು ಸ್ನೇಹಿತರು ಸೇರಿಕೊಂಡು ಆಂಜಿನಪ್ಪನನ್ನು ಸಮೀಪದ ಖಾಲಿ ಜಾಗಕ್ಕೆ ಎಳೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.

ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆ ದೃಢ:

ಮರುದಿನ ದಾರಿಹೋಕರು ನೀಡಿದ ಮಾಹಿತಿಯಿಂದ ಸ್ಥಳಕ್ಕೆ ಬಂದ ಅಮೃತಹಳ್ಳಿ ಠಾಣೆ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಸ್ಥಳೀಯರನ್ನು ವಿಚಾರಿಸಿದಾಗ ಮೃತ ವ್ಯಕ್ತಿ ಆಂಜಿನಪ್ಪ ಎಂಬುದು ಗೊತ್ತಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಬಲವಾದ ವಸ್ತುಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದು ಗೊತ್ತಾಗಿತ್ತು. ಬಳಿಕ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ.

Read more Articles on