ತಿರುಪತಿ ಲಡ್ಡು ವಿವಾದ : ತನಿಖೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಆದೇಶ

| Published : Sep 23 2024, 01:24 AM IST / Updated: Sep 23 2024, 05:04 AM IST

chandrababu naidu

ಸಾರಾಂಶ

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾದ ಆರೋಪ ಕುರಿತು ತನಿಖೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ. 

ಅಮರಾವತಿ: ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದ ಬಗ್ಗೆ ತನಿಖೆ ನಡೆಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿಶೇಷ ತನಿಖಾ ತಂಡ ರಚಿಸುವುದಾಗಿ ಘೋಷಿಸಿದ್ದಾರೆ.

ಜೊತೆಗೆ ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ತರಿಸಲಾಗುವ ಕಚ್ಚಾವಸ್ತುಗಳ ತಫಾಸಣೆ ಹಾಗೂ ಲೆಕ್ಕಪರಿಶೋಧನೆಗೂ ಆದೇಶಿಸಲಾಗಿದೆ ಎಂದಿದ್ದಾರೆ,

ಭಾನುವಾರ ಸುದ್ದಿಗೋಷ್ಠಿ ನಡೆಸಿದ ನಾಯ್ಡು, ‘ಐಜಿಪಿ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಇವರು ಸಲ್ಲಿಸುವ ವರದಿಯ ಆಧಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಹಾಗೂ ಇದು ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.

==

ಸರ್ಕಾರದ ನಿಯಂತ್ರಣದಲ್ಲಿ ದೇಗುಲ: ಸದ್ಗುರು ವಿರೋಧ

ನವದೆಹಲಿ: ತಿರುಮಲ ಲಡ್ಡು ವಿವಾದಕ್ಕೆ ಪ್ರತಿಕ್ರಿಯಿಸಿರುವ ಈಶ ಫೌಂಡೇಶನ್‌ನ ಸದ್ಗುರು ಅವರು ಸರ್ಕಾರದ ನಿಯಂತ್ರಣದಲ್ಲಿ ದೇಗುಲಗಳು ಇರುವುದನ್ನು ವಿರೋಧಿಸಿದ್ದಾರೆ.ಟ್ವೀಟ್ ಮಾಡಿರುವ ಅವರು, ‘ದೇವಸ್ಥಾನದ ಪ್ರಸಾದದಲ್ಲಿ ಭಕ್ತರು ದನದ ಮಾಂಸವನ್ನು ಸೇವಿಸುವುದು ಅಸಹ್ಯಕರ. ಅದಕ್ಕಾಗಿಯೇ ದೇವಾಲಯಗಳನ್ನು ಭಕ್ತರು ನಡೆಸಬೇಕು. ಸರ್ಕಾರದ ಆಡಳಿತದಿಂದ ಅಲ್ಲ. ಭಕ್ತಿ ಇಲ್ಲದ ಜಾಗದಲ್ಲಿ ಪಾವಿತ್ರ್ಯತೆ ಇರುವುದಿಲ್ಲ. ಹಿಂದೂ ದೇವಾಲಯಗಳನ್ನು ಭಕ್ತರು ನಡೆಸುವ ಸಮಯ ಬಂದಿದೆ. ಸರ್ಕಾರದ ಆಡಳಿತದಿಂದಲ್ಲ’ ಎಂದಿದ್ದಾರೆ.

==

ಲಡ್ಡು ವಿವಾದ: ಪವನ್‌ ಕಲ್ಯಾಣ್‌ 11 ದಿನ ಉಪವಾಸ ವ್ರತ

ಗುಂಟೂರು: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ಲಡ್ಡು ವಿತರಿಸಿದ್ದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ಜನಸೇನಾ ಪಕ್ಷದ ಅಧ್ಯಕ್ಷ, ಆಂಧ್ರಪ್ರದೇಶದ ಡಿಸಿಎಂ ಪವನ್‌ ಕಲ್ಯಾಣ್‌ 11 ದಿನಗಳ ‘ಪ್ರಾಯಶ್ಚಿತ್ತ ದೀಕ್ಷೆ’ (ಉಪವಾಸ ವ್ರತ) ಆರಂಭಿಸಿದ್ದಾರೆ.

ಗುಂಟೂರು ಜಿಲ್ಲೆಯ ನಂಬೂರಿನ ಶ್ರಿ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಪ್ರಾಯಶ್ಚಿತ್ತ ಆರಂಭಿಸಿರುವ ಅವರು 11 ದಿನಗಳ ಕಾಲ ಇದರ ಅಂಗವಾಗಿ ಉಪವಾಸ ಆರಂಭಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಹಿಂದಿನ ಆಡಳಿತಗಾರರಿಂದಾಗಿ ತಿರುಮಲದ ಲಡ್ಡು ಪ್ರಸಾದ ಅಪವಿತ್ರವಾಗಿದೆ. ಈ ಪಾಪವನ್ನು ಗುರುತಿಸುವಲ್ಲಿ ವಿಫಲವಾಗಿದ್ದು ಹಿಂದೂ ಜನಾಂಗಕ್ಕೇ ಕಳಂಕ ತಂದಿದೆ. ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆಯಾಗಿರುವುದು ತಿಳಿದು ಆಘಾತವಾಯಿತು. ಜನರ ಕಲ್ಯಾಣಕ್ಕಾಗಿ ಶ್ರಮಿಸುವ ನನಗೆ ಇದು ಮೊದಲೇ ತಿಳಿಯಲಿಲ್ಲ ಎಂದು ಬೆಸರವಾಗುತ್ತಿದೆ. ಬಾಲಾಜಿಗೆ ಮಾಡಿರುವ ಈ ಅನ್ಯಾಯಕ್ಕೆ ಸನಾತನ ಧರ್ಮದಲ್ಲಿ ನಂಬಿಕೆ ಉಳ್ಳವರೆಲ್ಲ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ನಾನೂ ಕೂಡ 11 ದಿನ ಉಪವಾಸ ಮಾಡಿ, ದೀಕ್ಷೆಯ ಕೊನೆಯ 2 ದಿನ (ಅ.1 ಮತ್ತು 2) ರಂದು ತಿರುಪತಿಗೆ ತೆರಳುವೆ. ದೇವರ ದರ್ಶನ ಪಡೆದು ಕ್ಷಮೆ ಯಾಚಿಸಿ ಪ್ರಾಯಶ್ಚಿತ್ತ ದೀಕ್ಷೆ ಪೂರ್ಣಗೊಳಿಸುವೆ’ ಎಂದಿದ್ದಾರೆ.

==

ಜುಲೈನಿಂದ ಲಡ್ಡುಗೆ ಕಳಪೆ ತುಪ್ಪ ಬಳಸಿಲ್ಲ: ಟಿಟಿಡಿ

ಹೈದರಾಬಾದ್‌: ತಿರುಪತಿ ತಿಮ್ಮಪ್ಪನ ದೇಗುಲದ ಲಡ್ಡು ಪ್ರಸಾದ ತಯಾರಿಕೆಗೆ ಜುಲೈ ತಿಂಗಳಿನಿಂದ ನಾವು ಕಳಪೆ ತುಪ್ಪ ಬಳಸಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ಮಂಡಳಿ ಸ್ಪಷ್ಟನೆ ನೀಡಿದೆ. ತನ್ಮೂಲಕ ಲಡ್ಡು ಪ್ರಸಾದದ ಕುರಿತು ಭಕ್ತರಲ್ಲಿರುವ ಶಂಕೆಯನ್ನು ತೊಡೆದುಹಾಕಲು ಯತ್ನಿಸಿದೆ.ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಸರ್ಕಾರ ಅಧಿಕಾರದಿಂದ ಇಳಿದು ಟಿಡಿಪಿ ನೇತೃತ್ವದ ಚಂದ್ರಬಾಬು ನಾಯ್ಡು ಸರ್ಕಾರ ಈ ವರ್ಷದ ಜೂನ್‌ ತಿಂಗಳಿನಲ್ಲಿ ಅಧಿಕಾರಕ್ಕೆ ಬಂದಿತು. ಬಳಿಕ ಟಿಟಿಡಿ ಆಡಳಿತ ಮಂಡಳಿಯೂ ಬದಲಾಯಿತು.

‘ಆಗ ಶಂಕೆಯ ಮೇರೆಗೆ ಲಡ್ಡುಗೆ ಬಳಸಲಾದ ದನದ ಕೊಬ್ಬು, ಹಂದಿ ಕೊಬ್ಬು ಮತ್ತು ಮೀನಿನೆಣ್ಣೆಯ ಅಂಶವಿರುವ ತುಪ್ಪವನ್ನು ಪೂರೈಸುತ್ತಿತ್ತು ಎನ್ನಲಾದ ಎಆರ್‌ ಡೈರಿಯ 10 ಟ್ಯಾಂಕರ್‌ ತುಪ್ಪವನ್ನು ಹೊಸ ಆಡಳಿತ ಮಂಡಳಿಯು ಜುಲೈನಲ್ಲಿ ಪರೀಕ್ಷೆಗೆ ಒಳಪಡಿಸಿತು. ಅವುಗಳ ಪೈಕಿ 4 ಟ್ಯಾಂಕರ್‌ ತುಪ್ಪ ಕಳಪೆಯಾಗಿರುವುದು ಪತ್ತೆಯಾಯಿತು. ಅವುಗಳನ್ನು ವಾಪಸ್‌ ಕಳುಹಿಸಲಾಗಿದೆ. ಬಳಿಕ ಕಳಪೆ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಸಿಲ್ಲ’ ಎಂದು ಟಿಟಿಡಿ ಸಿಇಒ ಶ್ಯಾಮಲ ರಾವ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.‘ಜುಲೈ 6ರಂದು ಎರಡು ಕಲಬೆರಕೆ ತುಪ್ಪದ ಟ್ಯಾಂಕರ್‌ ಹಾಗೂ ಜುಲೈ 12ರಂದು ಇನ್ನೆರಡು ಕಲಬೆರಕೆ ತುಪ್ಪದ ಟ್ಯಾಂಕರ್‌ಗಳು ಬಂದಿದ್ದವು. ಟಿಟಿಡಿಯ ಇತಿಹಾಸದಲ್ಲೇ ಮೊದಲ ಬಾರಿ ಹೊರಗಿನ ಪ್ರಯೋಗಾಲಯವೊಂದಕ್ಕೆ (ಗುಜರಾತ್‌ನ ಆನಂದ್‌) ಅದನ್ನು ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಸಿಲ್ಲ. ಆ ಸಮಯದಲ್ಲಿ ಐದು ಕಂಪನಿಗಳು ಟಿಟಿಡಿಗೆ ತುಪ್ಪ ಪೂರೈಸುತ್ತಿದ್ದವು. ಅವುಗಳಲ್ಲಿ ಎಆರ್‌ ಡೈರಿಯ ತುಪ್ಪ ಮಾತ್ರ ಕಳಪೆ ಗುಣಮಟ್ಟದ್ದೆಂದು ಕಂಡುಬಂದಿತ್ತು’ ಎಂದೂ ಹೇಳಿದ್ದಾರೆ.

==

ಸುಳ್ಳು ಹರಡುತ್ತಿರುವ ನಾಯ್ಡುಗೆ ಛೀಮಾರಿ ಹಾಕಿ: ಮೋದಿಗೆ ಜಗನ್‌ ಪತ್ರ

 ಅಮರಾವತಿ : ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬಿನ ಬಳಕೆಯ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ‘ಸುಳ್ಳು ಹರಡುತ್ತಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ನೀವು ಛೀಮಾರಿ ಹಾಕಬೇಕು’ ಎಂದು ಕೋರಿದ್ದಾರೆ.

ಪ್ರಧಾನಿಗೆ 8 ಪುಟಗಳ ಪತ್ರ ಬರೆದಿರುವ ಜಗನ್‌, ‘ಚಂದ್ರಬಾಬು ನಾಯ್ಡು ಒಬ್ಬ ವೃತ್ತಿಪರ ಸುಳ್ಳುಗಾರ. ರಾಜಕೀಯ ಉದ್ದೇಶದಿಂದ ಅವರು ಕೋಟ್ಯಂತರ ಜನರ ಭಾವನೆಗಳ ಜೊತೆಗೆ ಆಟವಾಡುವ ಕೆಳಮಟ್ಟಕ್ಕೆ ಇಳಿದಿದ್ದಾರೆ. ನಮ್ಮ ಅವಧಿಯಲ್ಲಿ ಕಳಪೆ ತುಪ್ಪವನ್ನು ಟಿಟಿಡಿಯ ಆವರಣದೊಳಗೇ ಬಿಟ್ಟುಕೊಂಡಿಲ್ಲ’ ಎಂದು ಹೇಳಿದ್ದಾರೆ.

‘ಸರ್‌, ಈ ವಿಷಮ ಸನ್ನಿವೇಶದಲ್ಲಿ ಇಡೀ ದೇಶ ನಿಮ್ಮತ್ತ ನೋಡುತ್ತಿದೆ. ನಾಯ್ಡು ಎಸಗಿದ ನಾಚಿಕೆಗೇಡಿನ ಕೆಲಸಕ್ಕೆ ನೀವು ಅತ್ಯಂತ ತೀಕ್ಷ್ಣವಾಗಿ ಛೀಮಾರಿ ಹಾಕಬೇಕು. ಅವರು ಸುಳ್ಳು ಹರಡುವುದನ್ನು ತಡೆಯಬೇಕು. ತನ್ಮೂಲಕ ಟಿಟಿಡಿಯಲ್ಲಿ ಜನರು ಇರಿಸಿರುವ ನಂಬಿಕೆ ಮತ್ತು ದೇಗುಲದ ಪಾವಿತ್ರ್ಯವನ್ನು ಮರುಸ್ಥಾಪನೆ ಮಾಡಬೇಕು’ ಎಂದು ಜಗನ್‌ ಕೋರಿದ್ದಾರೆ.