ಸಾರಾಂಶ
ತಿರುಮಲ: ತಿರುಪತಿ ಲಡ್ಡು ಕಲಬೆರಕೆ ವಿವಾದ ಕೋಲಾಹಲ ಸೃಷ್ಟಿಸಿ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ ದೇವಸ್ಥಾನದಲ್ಲಿ ಕೊಡಲಾದ ಪ್ರಸಾದದಲ್ಲಿ ಸಹಸ್ರಪದಿ ಪತ್ತೆಯಾಗಿದೆ ಎಂದು ಭಕ್ತರೊಬ್ಬರು ಆರೋಪಿಸಿದ್ದಾರೆ ಹಾಗೂ ಅದರ ಫೋಟೋವೊಂದನ್ನು ಬಹಿರಂಗಪಡಿಸಿದ್ದಾರೆ.
‘ನಾನು ದರ್ಶನಕ್ಕಾಗಿ ವರಂಗಲ್‌ನಿಂದ ಆಗಮಿಸಿದ್ದು, ಕೇಶ ಮುಂಡನದ ನಂತರ ಊಟಕ್ಕೆ ಹೋಗಿದ್ದೆ. ಅಲ್ಲಿ ಬಡಿಸಲಾದ ಮೊಸರನ್ನದಲ್ಲಿ ಸಹಸ್ರಪದಿ ಸಿಕ್ಕಿದೆ. ಇದನ್ನು ಸಿಬ್ಬಂದಿಗೆ ತಿಳಿಸಿದಾಗ ಅವರಿಂದ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ’ ಎಂದಿರುವ ಭಕ್ತರೊಬ್ಬರು, ‘ಇದು ಟಿಟಿಡಿಯ ನಿರ್ಲಕ್ಷದ ಸಂಕೇತವಾಗಿದ್ದು, ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಟಿಟಿಡಿ ನಕಾರ:
ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಟಿಟಿಡಿ, ಅದನ್ನು ಸುಳ್ಳು ಹಾಗೂ ಆಧಾರ ರಹಿತ ಎಂದಿದೆ. ‘ಇದು ಭಕ್ತರ ದಾರಿ ತಪ್ಪಿಸಿ ಸಂಸ್ಥೆಯ ಹೆಸರು ಕೆಡಿಸುವ ಯತ್ನ. ಅತ್ಯಂತ ಸ್ವಚ್ಛ ವಾತಾವರಣದಲ್ಲಿ ಅಡುಗೆ ಸಿದ್ಧಪಡಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ.
==
ಪೋಪ್‌ರಿಂದ ಕೇರಳ ಪಾದ್ರಿಗೆ ಕಾರ್ಡಿನಲ್ ಪಟ್ಟ
ರೋಮ್: ಕ್ರೈಸ್ತರ ಧಾರ್ಮಿಕ ಗುರು ಪೋಪ್ ಫ್ರಾನ್ಸಿಸ್ ಹೊಸ 21 ಕಾರ್ಡಿನಲ್‌ಗಳ ಹೆಸರುಗಳನ್ನು ಘೋಷಿಸಿದ್ದಾರೆ. ಈ ಕಾರ್ಡಿನಲ್‌ಗಳು ಮುಂದಿನ ಪೋಪ್ ಆಯ್ಕೆ ಸಮಿತಿಯಲ್ಲಿ ಇರುತ್ತಾರೆ.ಈ ಕಾರ್ಡಿನಲ್‌ಗಳಲ್ಲಿ ಕೇರಳದ ಜಾರ್ಜ್ ಜಾಕೋಬ್ ಕೂವಕಾಡ್ ಅವರನ್ನೂ ಪೋಪ್ ನೇಮಿಸಿದ್ದಾರೆ. ಇವರು ವ್ಯಾಟಿಕನ್‌ಗೆ ತೆರಳಲಿದ್ದು ಕ್ರಿಸ್ಮಸ್ ಹಬ್ಬದ ಮೊದಲ ದಿನವಾದ ಡಿ.8ರಂದು ಕೆಂಪು ಟೋಪಿಗಳನ್ನು ನೀಡಲಾಗುವುದು.
ಪೋಪ್‌ಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡುವ ಅಧಿಕಾರ ಹೊಂದಿರುವ ಕಾರ್ಡಿನಲ್‌ಗಳು ಅವರ ಪ್ರಧಾನ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಾರೆ.
==
ಅಖಂಡ ಭಾರತಕ್ಕೆ ನಮ್ಮ ಬೆಂಬಲ: ಕೆನಡಾ
ಟೊರಂಟೋ: ಭಾರತವನ್ನು ವಿಭಜಿಸಿ ಪ್ರತ್ಯೇಕ ಖಲಿಸ್ತಾನಿ ದೇಶ ರಚನೆಗಾಗಿ ಹೋರಾಡುತ್ತಿರುವ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಲೇ ಬಂದಿರುವ ಕೆನಡಾ, ಅಚ್ಚರಿಯ ರೀತಿಯಲ್ಲಿ ಅಖಂಡ ಭಾರತದ ಪರವಾಗಿ ತನ್ನ ನಿಲುವು ಅತ್ಯಂತ ಸ್ಪಷ್ಟವಾಗಿದೆ ಎಂದು ಹೇಳಿದೆ.ಖಲಿಸ್ತಾನಿಗಳ ಪರ ನೇರ ಬೆಂಬಲ, ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಬಹಿರಂಗ ಆರೋಪದ ಬಳಿಕ ಉಭಯ ದೇಶಗಳ ಸಂಬಂಧ ಹಳಸಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಕೆನಡಾ, ಭಾರತದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಇತ್ತೀಚೆಗೆ ಕೆನಡಾದ ಒಟ್ಟಾವಾದಲ್ಲಿ ನಡೆದ ವಿದೇಶಿ ಹಸ್ತಕ್ಷೇಪ ಆಯೋಗದ ಮುಂದೆ ಹಾಜರಾಗಿದ್ದ ಕೆನಡಾದ ವಿದೇಶಾಂಗ ಖಾತೆ ಉಪ ಸಚಿವ ಡೇವಿಡ್ ಮೋರಿಸನ್, ‘ಭಾರತೀಯ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಬೇಕು ಎಂಬ ವಿಷಯದಲ್ಲಿ ಕೆನಡಾದ ನಿಲವು ಅತ್ಯಂತ ಸ್ಪಷ್ಟವಾಗಿದೆ. ಅಖಂಡ ಭಾರತ ಮತ್ತು ಅದೇ ನಮ್ಮ ನಿಲುವು’ ಎಂದು ಹೇಳಿದ್ದಾರೆ.
==
ಮ.ಪ್ರ.: ₹1,814 ಕೋಟಿ ಮೌಲ್ಯದ ಮಾದಕವಸ್ತು ವಶ
ಭೋಪಾಲ್: ದಿಲ್ಲಿಯಲ್ಲಿ ಇತ್ತೀಚೆಗೆ ಭಾರಿ ಪ್ರಮಾಣದ ಡ್ರಗ್ಸ್ ವಶದ ಬೆನ್ನಲ್ಲೇ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ₹1,814 ಕೋಟಿ ಮೌಲ್ಯದ 907.09 ಕೇಜಿ ಮೆಫೆಡ್ರೋನ್ ಡ್ರಗ್ಸ್ ಹಾಗೂ 5 ಸಾವಿರ ಕೇಜಿ ಡ್ರಗ್ಸ್ ಉತ್ಪಾದನಾ ಕಚ್ಚಾವಸ್ತುಗಳನ್ನು ವಶ ವಶಪಡಿಸಿಕೊಳ್ಳಲಾಗಿದೆ ಹಾಗೂ ಇಬ್ಬರನ್ನು ಬಂಧಿಸಲಾಗಿದೆ.ಭೋಪಾಲ್ ಸಮೀಪದ ಕಾರ್ಖಾನೆಯೊಂದರ ಮೇಲೆ ಜಂಟಿ ದಾಳಿ ನಡೆಸಿದ ಮಾದಕವಸ್ತು ನಿಗ್ರಹ ದಳ (ಎನ್‌ಸಿಬಿ) ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಈ ಬೃಹತ್ ಡ್ರಗ್ಸ್ ಜಾಲ ಬಯಲಿಗೆಳೆದಿವೆ. ಗುಜರಾತ್ ಮೊದಲು ಇದರ ಸುಳಿವು ಪತ್ತೆ ಆಗಿದ್ದ ಕಾರಣ ಅದರ ಸಹಯೋಗದಲ್ಲಿ ದಾಳಿ ಮಾಡಲಾಗಿದೆ.
ಯಾರಿಗೂ ಸಂದೇಹ ಬರಬಾರದು ಎಂದು ಕಾರ್ಖಾನೆಗೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಅಧಿಕಾರಿಗಳು ಕಾರ್ಖಾನೆಯಲ್ಲಿ ಉತ್ಪಾದನೆಯಾಗುತ್ತಿದ್ದ ಮೆಫೆಡ್ರೋನ್ ಡ್ರಗ್ಸ್ (ಎಂಡಿ) ವಶಪಡಿಸಿಕೊಂಡರು ಹಾಗೂ ಜೊತೆಗೆ ಈ ಸಂಬಂಧ ಸನ್ಯಾಲ್ ಪ್ರಕಾಶ್ ಬಾನೆ (40) ಹಾಗೂ ಅಮಿತ್ ಚತುರ್ವೇದಿ (57) ಎಂಬ ಇಬ್ಬರು ಶಂಕಿತರನ್ನು ಬಂಧಿಸಿದರು. ಈ ಪೈಕಿ ಬಾನೆ 2017ರಲ್ಲೂ ಡ್ರಗ್ಸ್ ದಂಧೆ ವೇಳೆ ಸಿಕ್ಕಿಬಿದ್ದು 5 ವರ್ಷ ಜೈಲಲ್ಲಿದ್ದು ಬಿಡುಗಡೆ ಆಗಿದ್ದ. ಕಾರ್ಖಾನೆಯಲ್ಲಿ ನಿತ್ಯ 25 ಕೇಜಿ ಎಂಡಿ ಡ್ರಗ್ಸ್ ತಯಾರಿಸಲಾಗುತ್ತಿತ್ತು.ಅಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಗುಜರಾತ್‌ನ ಆರೋಗ್ಯ ಸಚಿವ ಹರ್ಷ್ ಸಾಂಘ್ವಿ, ‘ಇದು ಮಾದಕವಸ್ತು ಕಳ್ಳಸಾಗಣೆ ಮತ್ತು ದುರುಪಯೋಗದ ವಿರುದ್ಧದ ಹೋರಾಟಕ್ಕೆ ಸಾಕ್ಷಿಯಾಗಿದ್ದು, ಸಮಾಜದ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಲು ಅತ್ಯಗತ್ಯ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ದೆಹಲಿ ಪೊಲೀಸರು ಮಹಿಪಾಲಪುರದಲ್ಲಿ 5,620 ಕೋಟಿ ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡಿದ್ದರು. ಇದು ರಾಜಧಾನಿಯ ಅತಿದೊಡ್ಡ ಡ್ರಗ್ಸ್ ಬೇಟೆ ಎನ್ನಿಸಿಕೊಂಡಿತ್ತು.
==
ಸಂತ ಕ್ಸೇವಿಯರ್ ದೇಹ ವಿವಾದ: ಗೋವಾ ಉದ್ವಿಗ್ನ
ಪಣಜಿ: ಇಲ್ಲಿನ ಚರ್ಚ್‌ನಲ್ಲಿ ಸಂರಕ್ಷಿಸಿ ಇಡಲಾಗಿರುವ ಸ್ಪೇನ್ ಮೂಲದ ಧರ್ಮಪ್ರಚಾರಕ ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರ ದೇಹವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕೆಂದು ಆರ್‌ಎಸ್ಎಸ್‌ನ ಮಾಜಿ ನಾಯಕ ಸುಭಾಷ್ ವೆಲಿಂಗ್‌ಕರ್ ಇತ್ತೀಚೆಗೆ ನೀಡಿದ್ದ ಹೇಳಿಕೆ ಗೋವಾದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ.ಇಂಥ ಹೇಳಿಕೆ ನೀಡಿದ ವೆಲಿಂಗ್‌ಕರ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಗೋವಾದ ವಿವಿಧ ಭಾಗಗಳಲ್ಲಿ ಶನಿವಾರ, ಭಾನುವಾರ ಪ್ರತಿಭಟನೆ ನಡೆಸಲಾಗಿದೆ. ಕೆಲವು ಕಡೆ ರಾಷ್ಟ್ರೀಯ ಹೆದ್ದಾರಿ ತಡೆ ಕೂಡಾ ನಡೆಸಲಾಗಿದೆ.
ರಾಹುಲ್ ಕಿಡಿ:ಈ ನಡುವೆ ಇಂಥ ಹೇಳಿಕೆ ಮೂಲಕ ಬಿಜೆಪಿ ಉದ್ದೇಶಪೂರ್ವಕವಾಗಿ ಕೋಮುದ್ವೇಷ ಹುಟ್ಟುಹಾಕುತ್ತಿದೆ ಎಂದು ಲೋಕಸಭೆಯಲ್ಲಿನ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಬಿಜೆಪಿಯ ಇಂಥ ವಿಭಜನಕಾರಿ ನೀತಿಗಳನ್ನು ಗೋವಾ ಮತ್ತು ದೇಶದ ಇತರೆ ಭಾಗಗಳ ಜನರು ತಿರಸ್ಕರಿಸಲಿದ್ದಾರೆ ಎಂದು ಹೇಳಿದ್ದಾರೆ.
ವೆಲಿಂಗಕರ್ ಹೇಳಿದ್ದೇನು?:ಓಲ್ಡ್ ಗೋವಾದ ಚರ್ಚ್‌ನಲ್ಲಿ ಇಡಲಾಗಿರುವ ದೇಹ ಫ್ರಾನ್ಸಿಸ್ ಕ್ಸೇವಿಯರ್ ಅವರದ್ದೇ ಹೌದೇ? ಅಲ್ಲದೇ ಎನ್ನುವುದು ಖಚಿತಪಡಿಸಲು ಅದರ ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದು ಇತ್ತೀಚೆಗೆ ವೆಲಿಂಗ್‌ಕರ್ ಆಗ್ರಹ ಮಾಡಿದ್ದರು. ಈ ಹೇಳಿಕೆ ವಿರುದ್ಧ ಈಗಾಗಲೇ 12 ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ವೆಲಿಂಗ್‌ಕರ್ ನಿರೀಕ್ಷಣಾ ಜಾಮೀನು ಕೋರಿ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದು, ಅದರ ತೀರ್ಪು ಸೋಮವಾರ ಬರುವ ನಿರೀಕ್ಷೆ ಇದೆ.