ಸಾರಾಂಶ
ಹಿಂದುಳಿದವರ ಮತಾಂತರವನ್ನು ತಡೆಯಲು ಮತ್ತು ಹಿಂದೂಗಳಲ್ಲಿ ಒಗ್ಗಟ್ಟನ್ನು ವೃದ್ಧಿಸಲು, ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಿರುವ ಬಡಾವಣೆಗಳಲ್ಲಿ 5 ಸಾವಿರಕ್ಕೂ ಅಧಿಕ ವೆಂಕಟೇಶ್ವರ ಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸುವಂತೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಟಿಟಿಡಿಗೆ ಸೂಚಿಸಿದ್ದಾರೆ.
ತಿರುಮಲ: ಹಿಂದುಳಿದವರ ಮತಾಂತರವನ್ನು ತಡೆಯಲು ಮತ್ತು ಹಿಂದೂಗಳಲ್ಲಿ ಒಗ್ಗಟ್ಟನ್ನು ವೃದ್ಧಿಸಲು, ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಿರುವ ಬಡಾವಣೆಗಳಲ್ಲಿ 5 ಸಾವಿರಕ್ಕೂ ಅಧಿಕ ವೆಂಕಟೇಶ್ವರ ಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸುವಂತೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ಸೂಚಿಸಿದ್ದಾರೆ.
ಬುಧವಾರ ಪರಿವಾರ ಸಮೇತರಾಗಿ ತಿರುಮಲಕ್ಕೆ ಭೇಟಿ ನೀಡಿದ್ದ ನಾಯ್ಡು, ರಾಜ್ಯಾದ್ಯಂತ, ಅನ್ಯ ರಾಜ್ಯಗಳಲ್ಲಿ ಮತ್ತು ತೆಲುಗು ಭಾಷಿಕರು ಹೆಚ್ಚಾಗಿರುವ ಕಡೆಗಳಲ್ಲಿ ಬಾಲಾಜಿ ದೇಗುಲ ನಿರ್ಮಾಣದ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ತಿರುಮಲದ ಪಾವಿತ್ರ್ಯತೆಯನ್ನು ಕಾಪಾಡುವುದು ಮತ್ತು ವಿಶ್ವಾದ್ಯಂತವಿರುವ ಭಕ್ತರು ಸುಲಭವಾಗಿ ತಿಮ್ಮಪ್ಪನ ದರ್ಶನ ಪಡೆಯುವಂತೆ ಮಾಡುವುದೂ ತಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.
ಬಿಜೆಪಿಯಿಂದ ಬೆಂಬಲ:
ನಾಯ್ಡು ಅವರ ಈ ನಿರ್ಧಾರವನ್ನು ಟಿಡಿಪಿಯ ಮಿತ್ರಪಕ್ಷವಾಗಿರುವ ಬಿಜೆಪಿ ಸ್ವಾಗತಿಸಿದೆ. ಬಿಜೆಪಿ ನಾಯಕಿ ಎಸ್.ಯಾಮಿನಿ ಶರ್ಮಾ ಮಾತನಾಡಿ, ‘ಜಗನ್ ಮೋಹನ್ ರೆಡ್ಡಿ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಅನೇಕ ಚರ್ಚ್‌ಗಳ ನಿರ್ಮಾಣವಾಗಿದೆ ಹಾಗೂ ಅನೇಕರ ಮತಾಂತರವಾಗಿದೆ. ಅದರಲ್ಲೂ ಮುಖ್ಯವಾಗಿ ಎಸ್‌ಸಿ ಮತ್ತು ಎಸ್ಟಿಗಳ ಮತಾಂತರವಾಗಿರುವುದೇ ಹೆಚ್ಚು. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಾಲಾಜಿ ದೇವಸ್ಥಾನ ನಿರ್ಮಾಣ ಅಗತ್ಯ’ ಎಂದು ಹೇಳಿದ್ದಾರೆ.
ಶರ್ಮಿಳಾ ಟೀಕೆ:
ಟಿಟಿಡಿಯ ನಿರ್ಧಾರವನ್ನು ಜಗನ್‌ರ ಸಹೋದರಿಯೂ ಆಗಿರುವ ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ಶರ್ಮಿಳಾ ಟೀಕಿಸಿದ್ದು, ‘ನಾಯ್ಡು ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ಅಳವಡಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಜತೆಗೆ, ‘ಸಾಮಾಜಿಕವಾಗಿ ಹಿಂದುಳಿದಿರುವವರ ಏಳ್ಗೆಯನ್ನೇ ಬಯಸುವುದಾದರೆ, ಟಿಟಿಡಿ ದೇವಸ್ಥಾನಗಳ ನಿರ್ಮಾಣಕ್ಕೆ ಮೀಸಲಿಟ್ಟಿರುವ ನಿಧಿಯಲ್ಲಿ ಎಸ್‌ಸಿ, ಎಸ್ಟಿಗಳಿಗಾಗಿ ಮೂಲಸೌಕರ್ಯ ಅಭಿವೃದ್ಧಿ ಮಾಡಲಿ’ ಎಂದಿದ್ದಾರೆ.