ಜುಲೈ 12, 13ರಂದು ತೋಪಿನ ತಿಮ್ಮಪ್ಪ ದೇಗುಲದಲ್ಲಿ ಹರಿಸೇವೆ; ತಾವರೆ ಎಲೆ ಊಟಕ್ಕೆ ಸಕಲ ಸಿದ್ಧತೆ

| Published : Jul 11 2025, 11:48 PM IST

ಜುಲೈ 12, 13ರಂದು ತೋಪಿನ ತಿಮ್ಮಪ್ಪ ದೇಗುಲದಲ್ಲಿ ಹರಿಸೇವೆ; ತಾವರೆ ಎಲೆ ಊಟಕ್ಕೆ ಸಕಲ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರಾಣ ಪ್ರಸಿದ್ಧ ಶ್ರೀತೋಪಿನ ತಿಮ್ಮಪ್ಪಸ್ವಾಮಿ ದೇಗುಲಕ್ಕೆ ಸುಮಾರು 823 ವರ್ಷಗಳ ಇತಿಹಾಸವಿದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ನೆಚ್ಚಿನ ದೇವರಾಗಿದ್ದಾರೆ. ದೇಗುಲಕ್ಕೆ ಆಗಮಿಸಿ ಭಕ್ತಿಯಿಂದ ಪೂಜೆ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುವುದು ಭಕ್ತರ ಅಪಾರವಾದ ನಂಬಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಆಬಲವಾಡಿ ಗ್ರಾಮದ ತೋಪಿನ ತಿಮ್ಮಪ್ಪ ದೇವಸ್ಥಾನದಲ್ಲಿ ಜುಲೈ 12 ಮತ್ತು 13ರಂದು ನಡೆಯುವ ಹರಿಸೇವೆಗೆ ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್, ಭಕ್ತಾದಿಗಳು ಹಾಗೂ ಗ್ರಾಮಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಜುಲೈ 12ರಂದು ಶನಿವಾರ ಮಧ್ಯಾಹ್ನ 1 ಗಂಟೆಗೆ ಮೀಸಲು ನೀರು ತರುವುದು, 2 ಗಂಟೆಗೆ ತಲೆ ಮುಡಿ, ಮಹಾ ಮಂಗಳಾರತಿ ರಾತ್ರಿ 6 ಗಂಟೆಗೆ ಬಂಡಿ ಮರೆವಣಿಗೆ, ರಾತ್ರಿ 12 ಗಂಟೆಗೆ ಬಾಯಿ ಬೀಗ, ರಾತ್ರಿ 1 ಗಂಟೆಗೆ ಸೋಮನ ಕುಣಿತ, ಜವಳಿ ಕುಣಿತ, ಮಂಗಳ ವಾದ್ಯ, ಮದ್ದಿನ ತಮಾಷೆ ಮತ್ತು ತಮಟೆಗಳೊಂದಿಗೆ ತಿಮ್ಮಪ್ಪನ ದೇವರ ಉತ್ಸವ ಮೂರ್ತಿ, ಶ್ರೀ ಲಕ್ಷ್ಮೀದೇವಿ, ಶ್ರೀ ಬಂಕದ ಘಟ್ಟಮ್ಮ, ಮದ್ದೇನಟ್ಟಮ್ಮ ದೇವರುಗಳ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಜುಲೈ 13 ರಂದು ದೇಗುಲದ ಆವರಣದಲ್ಲಿ ಸಹಸ್ರಾರು ಭಕ್ತಾದಿಗಳಿಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ತಾವರೆಎಲೆಯಲ್ಲಿ ಅನ್ನಸಂತರ್ಪಣೆ (ಹರಿಸೇವೆ) ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾಜ್ಞಮಿಕ ಕಾರ್ಯಕ್ರಮಗಳು ಜರುಗಲಿವೆ. ಒಂದೇ ಬಾರಿ 20 ರಿಂದ 30 ಸಾವಿರ ಭಕ್ತಾದಿಗಳಿಗೆ ಊಟ ಬಡಿಸುವುದು ಹರಿಸೇವೆಯಲ್ಲಿನ ವಿಶೇಷತೆಯಾಗಿದೆ.ಪುರಾಣ ಪ್ರಸಿದ್ಧ ಶ್ರೀತೋಪಿನ ತಿಮ್ಮಪ್ಪಸ್ವಾಮಿ ದೇಗುಲಕ್ಕೆ ಸುಮಾರು 823 ವರ್ಷಗಳ ಇತಿಹಾಸವಿದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ನೆಚ್ಚಿನ ದೇವರಾಗಿದ್ದಾರೆ. ದೇಗುಲಕ್ಕೆ ಆಗಮಿಸಿ ಭಕ್ತಿಯಿಂದ ಪೂಜೆ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುವುದು ಭಕ್ತರ ಅಪಾರವಾದ ನಂಬಿಕೆಯಾಗಿದೆ. ಆದ್ದರಿಂದ ಮಂಡ್ಯ, ಬೆಂಗಳೂರು, ಮೈಸೂರು, ರಾಮನಗರ ಸೇರಿದಂತೆ ಸೇರಿದಂತೆ ಇತರೆ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಪ್ರತಿ ಶನಿವಾರ ಮತ್ತು ಬುಧವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಪ್ರತಿ ವರ್ಷದ ಆಷಾಢ ಮಾಸದಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಮಾತ್ರವಲ್ಲದೆ ಕಾರ್ತಿಕ ಮಾಸದ ಕಡೆ ಸೋಮವಾರ ದೀಪೋತ್ಸವ, ವೈಕುಂಠ ಏಕಾದಶಿ, ರಥ ಸಪ್ತಮಿ ಸೇರಿದಂತೆ ವಿಶೇಷ ದಿನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣನವರು 2007 ಮತ್ತು 2008ರಲ್ಲಿ ಶಿಥಿಲಗೊಂಡ ದೇಗುಲವನ್ನು ಸ್ವಂತ ಹಣದ ಜತೆಗೆ ದಾನಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಸುಸಜ್ಜಿತ ನಿರ್ಮಾಣ ಮಾಡಿ ಗಮನ ಸೆಳೆದಿದ್ದರು.

ಊಟಕ್ಕೆ ತಾವರೆ ಎಲೆ ಬಳಕೆ ವಿಶೇಷ:

ಸಾಮಾನ್ಯವಾಗಿ ದೇವರ ಹರಿ ಸೇವೆಗೆ ಇಸ್ತ್ರಿ ಎಲೆಯಲ್ಲಿ ಊಟ ಕೊಡುವುದು ವಿಶೇಷ. ಆದರೆ, ಆಬಲವಾಡಿ ತೋಪಿನ ದೇವಸ್ಥಾನದಲ್ಲಿ ನಡೆಯುವ ಹರಿ ಸೇವೆಗೆ ದೇಶದಲ್ಲೇ ಪ್ರಥಮ ಎಂಬಂತೆ ಹಾಗೂ ಲಕ್ಷ್ಮೀದೇವಿಗೆ ತಾವರೆ ಎಲೆ ತುಂಬಾ ಇಷ್ಟ ಎಂಬ ಕಾರಣಕ್ಕೆ ಹರಿಸೇವೆಗೆ ಆಗಮಿಸುವ ಸಹಸ್ರಾರು ಭಕ್ತಾದಿಗಳಿಗೆ ತಾವರೆಯಲ್ಲಿ ಊಟ ಕೊಡಲಾಗುತ್ತದೆ.

ತಾವರೆ ಎಲೆಯನ್ನು ಮದ್ದೂರು ಸೇರಿದಂತೆ ಇತರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಕೆರೆಗೆ ಹೋಗಿ ತಾವರೆ ಎಲೆಯನ್ನು ಸಂಗ್ರಹಿಸಲಾಗುತ್ತದೆ. ಹರಿಸೇವೆಗೆ ಗ್ರಾಮದ ಗ್ರಾಮಸ್ಥರು, ಭಕ್ತಾದಿಗಳು ಹಾಗೂ ದಾನಿಗಳು ತಾವರೆಎಲೆ, ಅಕ್ಕಿ, ಬೇಳೆ, ಸೌದೆ, ಬೆಲ್ಲ, ತುಪ್ಪ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಗೂ ಆರ್ಥಿಕ ನೆರವನ್ನು ಕಾಣಿಕೆ ರೂಪದಲ್ಲಿ ನೀಡುತ್ತಾರೆ. ಗ್ರಾಮಸ್ಥರು ಒಟ್ಟಾಗಿ ಸೇರಿ ಸಹಸ್ರಾರು ಭಕ್ತಾಧಿಗಳಿಗೆ ಊಟ ಉಣಬಡಿಸಿಕೊಂಡು ಬಂದಿರುವುದು ಮೆಚ್ಚುಗೆಯ ಸಂಗತಿಯಾಗಿದೆ.

ಮದ್ದೂರಿನಿಂದ ಕೊಪ್ಪ ಮಾರ್ಗವಾಗಿ 18 ಕಿ.ಮೀ. ನಾಗಮಂಗಲದಿಂದ ದೇವಲಾಪುರ ಮಾರ್ಗವಾಗಿ 30 ಕಿ.ಮೀ. ಮಂಡ್ಯದಿಂದ ಕೆರೆಗೋಡು ಮಾರ್ಗವಾಗಿ 24 ಕಿ.ಮೀ.ದೂರದಲ್ಲಿ ತೋಪಿನ ತಿಮ್ಮಪ್ಪ ದೇಗುಲವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ಆಬಲವಾಡಿ ಗ್ರಾಮಸ್ಥರು, ಯಜಮಾನರುಗಳು, ಶ್ರೀ ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಟ್ರಸ್ಟಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಂಘ ಸಂಸ್ಥೆಗಳು ಪದಾಧಿಕಾರಿಗಳು, ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಮನವಿ ಮಾಡಿದ್ದಾರೆ.