ಸಾರಾಂಶ
ಕೋಲ್ಕತಾ: ವಿಪಕ್ಷಗಳ ಇಂಡಿಯಾ ಕೂಟ ಸೇರಿಕೊಂಡಿದ್ದರೂ ಇತ್ತೀಚೆಗೆ ಕೂಟದಿಂದ ದೂರ ಉಳಿದಿದ್ದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಈಗ ಎಲ್ಲ 42 ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಿಸಿ ಕೂಟದಿಂದ ಅಧಿಕೃತವಾಗಿ ಹೊರಬಿದ್ದಂತಾಗಿದೆ.
ಭಾನುವಾರ ಅಭ್ಯರ್ಥಿ ಪಟ್ಟಿಯನ್ನು ಮಮತಾ ಪ್ರಕಟಿಸಿದ್ದು, ಅದರಲ್ಲಿ ಕ್ರಿಕೆಟಿಗ ಯೂಸುಫ್ ಪಠಾಣ್, ವಿವಾದಿತ ಮಾಜಿ ಸಂಸದೆ ಮಹುವಾ ಮೊಯಿತ್ರಾ, ನಟ ಶತ್ರುಘ್ನ ಸಿನ್ಹಾ, ಕ್ರಿಕೆಟಿಗ ಕೀರ್ತಿ ಆಜಾದ್ ಹೆಸರು ಇವೆ.
ಇನ್ನೂ ಅವಕಾಶವಿದೆ- ಖರ್ಗೆ:ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಪ್ರತಿಕ್ರಿಯಿಸಿ, ‘ನಾಮಪತ್ರ ವಾಪಸಾತಿಯವರೆಗೂ ನಮ್ಮ ಮೈತ್ರಿ ಬಾಗಿಲು ತೆರೆದಿದೆ’ ಎಂದಿದ್ದಾರೆ.
ಯಾರಿಗೆ ಎಲ್ಲಿ ಟಿಕೆಟ್?
ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಹಾಲಿ 8 ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದ್ದು, 12 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಪ್ರಮುಖವಾಗಿ ಕ್ರಿಕೆಟಿಗ ಯೂಸುಫ್ ಪಠಾಣ್‌ಗೆ ಬಹ್ರಾಂಪುರ, ಕೀರ್ತಿ ಆಜಾ಼ದ್‌ಗೆ ವರ್ಧಮಾನ್-ದುರ್ಗಾಪುರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಅಚ್ಚರಿ ಎಂಬಂತೆ ಸಂಸತ್ ಸದಸ್ಯತ್ವದಿಂದ ವಜಾ ಆಗಿದ್ದ ಮಹುವಾ ಮೊಯಿತ್ರಾಗೆ ಕೃಷ್ಣಾನಗರದಿಂದ ಮತ್ತೊಮ್ಮೆ ಟಿಕೆಟ್ ನೀಡಲಾಗಿದೆ.ನಟ ಶತ್ರುಘ್ನ ಸಿನ್ಹಾ ಅವರಿಗೆ ಅಸನ್ಸೋಲ್ ಟಿಕೆಟ್ ಪಾಲಾಗಿದೆ.
ಸಂದೇಶಖಾಲಿ ವಿವಾದದ ನಂತರ ಹಾಲಿ ಸಂಸದೆ ನುಸ್ರತ್ ಜಹಾನ್ ಅವರನ್ನು ಬಸಿರ್ಹತ್ ಸ್ಥಾನದಿಂದ ಕೈಬಿಡಲಾಗಿದೆ. ಬದಲಿಗೆ ಹಾಜಿ ನೂರುಲ್ ಇಸ್ಲಾಂ ಅವರನ್ನು ಅಲ್ಲಿಂದ ಕಣಕ್ಕಿಳಿಸಲಾಗಿದೆ.
ರಾಜಕೀಯ ತ್ಯಜಿಸಲು ಬಯಸುವುದಾಗಿ ನಟಿ ಮಿಮಿ ಚಕ್ರವರ್ತಿ ಘೋಷಿಸಿರುವ ಕಾರಣ ಅವರ ಜಾದವ್‌ಪುರ ಕ್ಷೇತ್ರದಿಂದ ನಟಿ ಸಯೋನಿ ಘೋಷ್ ಅವರನ್ನು ಘೋಷಿಸಲಾಗಿದೆ.
ಪಠಾಣ್ ವರ್ಸಸ್ ಅಧೀರ್ಯೂಸುಫ್ ಪಠಾಣ್ ಮೂಲತಃ ಗುಜರಾತ್‌ನವರಾದರೂ ಪ,ಬಂಗಾಳದ ಬಹ್ರಾಂಪುರದಿಂದ ಅವರಿಗೆ ಮಮತಾ ಬ್ಯಾನರ್ಜಿ ಟಿಕೆಟ್ ನೀಡಿರುವುದು ಅಚ್ಚರಿ ತಂದಿದೆ.
ಬಹ್ರಾಂಪುರದಲ್ಲಿ ಲೋಕಸಭೆ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಹಾಲಿ ಕಾಂಗ್ರೆಸ್ ಸಂಸದ. ಹೀಗಾಗಿ ಇಲ್ಲಿ ಅಧೀರ್-ಯೂಸುಫ್ ಹಣಾಹಣಿ ನಿಶ್ಚಿತವಾಗಿದೆ.
ಯೂಸುಫ್ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಐಪಿಎಲ್ ಕ್ರಿಕೆಟ್ ಆಡುತ್ತಿದ್ದರು. ಇದು ದೀದಿ-ಯೂಸುಫ್ ಮಧ್ಯೆ ಅನ್ಯೋನ್ಯತೆಗೆ ನಾಂದಿ ಹಾಡಿತ್ತು. ಹೀಗಾಗಿ ಮಮತಾ ಅವರು ಅಲ್ಪಸಂಖ್ಯಾತರು ಹೆಚ್ಚಿರುವ ಬಹ್ರಾಂಪುರದಲ್ಲಿ ಯೂಸುಫ್‌ಗೆ ಟಿಕೆಟ್ ನೀಡಿದ್ದಾರೆ ಎನ್ನಲಾಗಿದೆ.