ಸಾರಾಂಶ
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಸ್ಪಷ್ಟ ಪರ್ಯಾಯವಾಗಿದೆ. ಈ ಮೂಲಕ, ತಮಿಳುನಾಡು ತನ್ನದೇ ಆದ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎನಿಸಿಕೊಂಡಿದೆ.
ಚೆನ್ನೈ : ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸುಸುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಶುಕ್ರವಾರ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಸ್ಪಷ್ಟ ಪರ್ಯಾಯವಾಗಿದೆ. ಈ ಮೂಲಕ, ತಮಿಳುನಾಡು ತನ್ನದೇ ಆದ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎನಿಸಿಕೊಂಡಿದೆ.
ಇದರಲ್ಲಿ ದ್ಬಿಭಾಷಾ ಸೂತ್ರ ಮಾತ್ರ ಜಾರಿಗೆ ತರಲಾಗಿದ್ದು, ತ್ರಿಭಾಷಾ ಸೂತ್ರಕ್ಕೆ (ಹಿಂದಿಗೆ) ಕೊಕ್ ನೀಡಲಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆಯ ಬದಲಿಗೆ 11 ಮತ್ತು 12ನೇ ತರಗತಿಗಳ ಕ್ರೋಡೀಕೃತ ಅಂಕಗಳ ಆಧಾರದ ಮೇಲೆ ಕಲಾ ಮತ್ತು ವಿಜ್ಞಾನ ಕೋರ್ಸ್‌ಗಳ ಪದವಿ ಪ್ರವೇಶಕ್ಕೆ ಶಿಫಾರಸು ಮಾಡುತ್ತದೆ.
ಎನ್‌ಇಪಿಯಲ್ಲಿ ಇದ್ದಂತೆ 11ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಪರೀಕ್ಷೆ (ಪಬ್ಲಿಕ್ ಎಕ್ಸಾಂ) ಇರುವುದಿಲ್ಲ. ಇಂಗ್ಲಿಷ್, ತಮಿಳು ಜತೆಗೆ ಜತೆಗೆ, ವಿಜ್ಞಾನ, ಎಐಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಲಾಗಿದೆ.
ಸಮರ್ಥನೆ: ಈ ಬಗ್ಗೆ ಮಾತನಾಡಿದ ರಾಜ್ಯ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್, ‘10ನೇ ತರಗತಿ ವರೆಗೆ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮಿಳು ಕಲಿಯುತ್ತಾರೆ. ಈ ನೀತಿಯನ್ನು ಬೇರೆ ರಾಜ್ಯದಿಂದ ನಕಲಿಸಿದ್ದಲ್ಲ. ಸಮಿತಿಯ 1 ವರ್ಷದ ಪರಿಶ್ರಮದ ಫಲವಿದು’ ಎಂದರು.
2022ರಲ್ಲಿ ರಚನೆಯಾದ ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾ। ಡಿ. ಮುರುಗೇಶನ್ ಅವರ ನೇತೃತ್ವದ 14 ಸದಸ್ಯರ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಹೊಸ ನೀತಿಯ ರಚನೆಯಾಗಿದೆ. ಇದು ಕಳೆದ ವರ್ಷ ಜುಲೈನಲ್ಲಿ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಶಿಕ್ಷಣವನ್ನು ಸಮವರ್ತಿ ಪಟ್ಟಿಯಿಂದ ರಾಜ್ಯ ಪಟ್ಟಿಗೆ ತರುವ ಬಗ್ಗೆಯೂ ಸಮಿತಿ ಶಿಫಾರಸು ಮಾಡಿದೆ.
ಬಿಜೆಪಿ ಟೀಕೆ:
ತಮಿಳುನಾಡಿನ ಎಸ್‌ಇಪಿಯನ್ನು ‘ರಾಜ್ಯದ ಅಹಂಕಾರಿ ನೀತಿ’ ಎಂದು ಕರೆದಿರುವ ಬಿಜೆಪಿ ನಾಯಕಿ ತಮಿಳಿಸಾಯಿ ಸೌದರ್ಯರಾಜನ್, ‘ಇದು ಎನ್‌ಇಪಿಯ ನಕಲಾಗಿದೆ. ಇದರ ಜಾರಿಯಿಂದ ಶಿಕ್ಷಣವನ್ನು ಕುಗ್ಗಿಸಲು ರಾಜ್ಯಸರ್ಕಾರ ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದಾರೆ.