22 ತಿಂಗಳಲ್ಲಿ 300 ಲೀ. ಎದೆಹಾಲು ದಾನ ಮಾಡಿದ ಮಹಾತಾಯಿ!

| N/A | Published : Aug 07 2025, 12:46 AM IST / Updated: Aug 07 2025, 04:15 AM IST

ಸಾರಾಂಶ

ತಮಿಳುನಾಡಿನ ಮಹಿಳೆಯೊಬ್ಬರು ಕೇವಲ ತಮ್ಮ ಮಕ್ಕಳಿಗೆ ಹಾಲುಣಿಸುವುದಲ್ಲದೇ 22 ತಿಂಗಳಲ್ಲಿ ಬರೋಬ್ಬರಿ 300 ಲೀಟರ್‌ ಎದೆ ಹಾಲನ್ನು ದಾನ ಮಾಡಿ ಹಲವು ಮಕ್ಕಳ ಜೀವ ಉಳಿಸಿದ್ದಾರೆ.

 ತಿರುಚಿರಾಪಲ್ಲಿ :  ತಮಿಳುನಾಡಿನ ಮಹಿಳೆಯೊಬ್ಬರು ಕೇವಲ ತಮ್ಮ ಮಕ್ಕಳಿಗೆ ಹಾಲುಣಿಸುವುದಲ್ಲದೇ 22 ತಿಂಗಳಲ್ಲಿ ಬರೋಬ್ಬರಿ 300 ಲೀಟರ್‌ ಎದೆ ಹಾಲನ್ನು ದಾನ ಮಾಡಿ ಹಲವು ಮಕ್ಕಳ ಜೀವ ಉಳಿಸಿದ್ದಾರೆ.

ಅವಧಿಪೂರ್ವ ಜನಿಸಿದ ಮಕ್ಕಳಿಗೆ ಮತ್ತು ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಎದೆ ಹಾಲಿನ ತೀರಾ ಅಗತ್ಯವಿರುತ್ತದೆ. ಆದರೆ ಅಗತ್ಯ ಪ್ರಮಾಣದಲ್ಲಿ ಅದು ಲಭ್ಯವಿರುವುದಿಲ್ಲ. ಇಂಥ ಹೊತ್ತಿನಲ್ಲಿ ಬೃಂದಾ ತಮ್ಮ ಎದೆಹಾಲು ದಾನ ಮಾಡಿ ನೂರಾರು ಮಕ್ಕಳ ಪ್ರಾಣ ಕಾಪಾಡಿದ್ದಾರೆ.

ತಿರುಚಿರಾಪಲ್ಲಿಯ ಕಟ್ಟೂರಿನ ಸೆಲ್ವ ಬೃಂದಾ (33)ರ ಈ ಸಾಧನೆ ಏಷ್ಯಾ ಮತ್ತು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. 2023ರ ಏಪ್ರಿಲ್‌ನಿಂದ 2025ರ ಫೆಬ್ರವರಿವರೆಗೆ ಬೃಂದಾ ಅವರು 300.17 ಲೀಟರ್‌ ಹಾಲನ್ನು ಮಹಾತ್ಮ ಗಾಂಧಿ ಸ್ಮರಣಾರ್ಥ ಸರ್ಕಾರಿ ಆಸ್ಪತ್ರೆಯ ಕ್ಷೀರ ಬ್ಯಾಂಕ್‌ಗೆ ದಾನ ಮಾಡಿದ್ದಾರೆ. ಕಳೆದ ವರ್ಷ ಆಸ್ಪತ್ರೆಯ ಒಟ್ಟು ಹಾಲಿನಲ್ಲಿ ಇವರ ಪಾಲು ಅರ್ಧದಷ್ಟಿತ್ತು.

ಈ ಸಾಧನೆಗಾಗಿ ಆ.7ರ ವಿಶ್ವ ಸ್ತನ್ಯಪಾನ ಸಪ್ತಾಹದಂದು ಸನ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read more Articles on