ಆಂಧ್ರದಲ್ಲಿ ಅಗ್ನಿ ದುರಂತ: ₹550 ಕೋಟಿ ತಂಬಾಕು ಬೆಂಕಿಗೆ ಆಹುತಿ

| Published : Oct 11 2025, 12:02 AM IST

ಆಂಧ್ರದಲ್ಲಿ ಅಗ್ನಿ ದುರಂತ: ₹550 ಕೋಟಿ ತಂಬಾಕು ಬೆಂಕಿಗೆ ಆಹುತಿ
Share this Article
  • FB
  • TW
  • Linkdin
  • Email

ಸಾರಾಂಶ

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ತಂಬಾಕು ಕಾರ್ಖಾನೆಯಲ್ಲಿ ಶುಕ್ರವಾರ ಭೀಕರ ಅಗ್ನಿ ಅವಘಢ ಸಂಭವಿಸಿ 550 ಕೋಟಿ ರು. ಮೌಲ್ಯದ ತಂಬಾಕು ಬೆಂಕಿಗೆ ಆಹುತಿಯಾಗಿದೆ.

11,000 ಟನ್‌ ತಂಬಾಕು ಸಂಪೂರ್ಣ ಭಸ್ಮಅಮರಾವತಿ: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ತಂಬಾಕು ಕಾರ್ಖಾನೆಯಲ್ಲಿ ಶುಕ್ರವಾರ ಭೀಕರ ಅಗ್ನಿ ಅವಘಢ ಸಂಭವಿಸಿ 550 ಕೋಟಿ ರು. ಮೌಲ್ಯದ ತಂಬಾಕು ಬೆಂಕಿಗೆ ಆಹುತಿಯಾಗಿದೆ.

ನಸುಕಿನ ಜಾವ ಕಾರ್ಖಾನೆಯ ಎ.ಬಿ ಬ್ಲಾಕ್‌ನಲ್ಲಿ ಬೆಂಕಿ ಹತ್ತಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟೊತ್ತಿಗೆ ಸುಮಾರು 11,000 ಟನ್‌ ತಂಬಾಕು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ನೈಜ ಕಾರಣ ಪತ್ತೆಗೆ ತನಿಖೆ ನಡೆದಿದೆ.

==

ಕಿಲ್ಲರ್ ಸಿರಪ್‌ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂ ನಕಾರ

- ಸಿಬಿಐ ತನಿಖೆ ಕೋರಿದ್ದ ಅರ್ಜಿ ವಜಾ

- ರಾಜ್ಯಗಳ ತನಿಖೆಗೆ ಕೋರ್ಟ್‌ ಮನ್ನಣೆ

ಪಿಟಿಐ ನವದೆಹಲಿ

ವಿಷಕಾರಿ ಕೆಮ್ಮಿನ ಸಿರಪ್‌ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸುಮಾರು 25 ಮಕ್ಕಳ ಸಾವು ಸಂಭವಿಸಿದ ಪ್ರಕರಣಗಳ ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.ವಕೀಲ ವಿಶಾಲ್‌ ತಿವಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ. ‘ಅರ್ಜಿದಾರರು ಪತ್ರಿಕೆ ಓದಿ ಕೋರ್ಟಿಗೆ ಧಾವಿಸುತ್ತಾರೆ. ತಮಿಳುನಾಡು ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಸಿರಪ್‌ ವಿರುದ್ಧ ಕ್ರಮ ಕೈಗೊಳ್ಳುತ್ತಿವೆ. ಇದಲ್ಲದೆ, ಎಲ್ಲ ರಾಜ್ಯಗಳಲ್ಲಿ ಔಷಧಗಳ ನಿಯಂತ್ರಣಕ್ಕೆ ಕಾನೂನುಗಳಿವೆ. ಈ ಸಂದರ್ಭದಲ್ಲಿ ಸಿಬಿಐ ತನಿಖೆಗೆ ಆದೇಶಿಸಿದರೆ ರಾಜ್ಯಗಳ ತನಿಖೆಯನ್ನು ನಾವು ಧೈರ್ಯಹೀನ ಮಾಡಿದಂತಾಗುತ್ತದೆ’ ಎಂದರು.

ಇದಕ್ಕೆ ಮನ್ನಣೆ ನೀಡಿದ, ಮುಖ್ಯ ನ್ಯಾ। ಬಿ.ಆರ್. ಗವಾಯಿ ಅವರಿದ್ದ ತ್ರಿಸದಸ್ಯ ಪೀಠ, ಸರ್ಕಾರಕ್ಕೆ ನೋಟಿಸ್‌ ನೀಡಬೇಕು ಎಂಬ ಇಚ್ಛೆಯನ್ನು ಬದಕಲಿಸಿ, ಅರ್ಜಿ ವಜಾ ಮಾಡಿತು.

==

ಬೆಂಗಳೂರಲ್ಲಿ ಬೆಳ್ಳಿ ಬೆಲೆ 1.70 ಲಕ್ಷ ರು.ಗೆ ಏರಿಕೆ: ದಾಖಲೆ

ನವದೆಹಲಿ: ಬೆಂಗಳೂರಿನಲ್ಲಿ ಶುಕ್ರವಾರ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆ ₹7200 ಏರಿಕೆ ಕೇಜಿಗೆ 1.70 ಲಕ್ಷ ರು. ಗಡಿ ದಾಡಿದೆ.99.5 ಶುದ್ಧತೆಯ (24 ಕ್ಯಾರಟ್‌) ಚಿನ್ನ 10 ಗ್ರಾಂಗೆ 1900 ರು. ಕುಸಿದು, 1,25,900 ರು.ಗೆ ತಲುಪಿದೆ. ಅದೇ ರೀತಿ ಆಭರಣ ಚಿನ್ನ (22 ಕ್ಯಾರಟ್‌) ಪ್ರತಿ ಗ್ರಾಂಗೆ 175 ರು. ಕುಸಿದು 11,545 ರು.ಗೆ ಕುಸಿದಿದೆ. ಆದರೆ ಬೆಳ್ಳಿ ಬೆಲೆ ಮಾತ್ರ ಭಾರಿ ಏರಿಕೆಯಾಗಿದೆ. ಬೆಳ್ಳಿ ಬೆಲೆಯು 7200 ರು. ಏರಿಕೆಯಾಗಿ 1,70,200 ಲಕ್ಷ ರು.ಗೆ ಏರಿದೆ.

ಗುರುವಾರ 10 ಗ್ರಾಂ ಚಿನ್ನ 1,27,800 ರು., ಬೆಳ್ಳಿ 1.63 ಲಕ್ಷ ರು.ಇತ್ತು.

==

ದಿನಪತ್ರಿಕೆ ಉತ್ಪಾದನೆ ವಸ್ತುಗಳ ಜಿಎಸ್ಟಿ ಶೂನ್ಯಕ್ಕೆ ಪತ್ರಕರ್ತರ ಒಕ್ಕೂಟ ಮನವಿ

ಹಲವು ಪತ್ರಿಕೆಗಳು ಬಂದ್‌ ಅಥವಾ ಬಿಕ್ಕಟ್ಟಿನಲ್ಲಿ

ಕಾಗದ, ಶಾಯಿ, ಪ್ಲೇಟ್‌ ಜಿಎಸ್‌ಟಿ ರದ್ದಿಗೆ ಆಗ್ರಹ

ನವದೆಹಲಿ: ‘ಕೆಲ ಅಗತ್ಯ ದಿನಬಳಕೆ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ಶುಲ್ಕವನ್ನು(ಜಿಎಸ್‌ಟಿ) ಇತ್ತೀಚೆಗಷ್ಟೇ ತಗ್ಗಿಸಿದ್ದ ಕೇಂದ್ರ ಸರ್ಕಾರ, ಅದೇ ರೀತಿ ದಿನಪತ್ರಿಕೆಗಳ ಉತ್ಪಾದನೆಯಲ್ಲಿ ಬಳಕೆಯಾಗುವ ಪ್ರಮುಖ ವಸ್ತುಗಳ ಮೇಲಿನ ಜಿಎಸ್ಟಿ ರದ್ದುಗೊಳಿಸಬೇಕು’ ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟವು (ಐಎಫ್‌ಡಬ್ಲುಜೆ) ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರದ ಮುಖೇನ ಆಗ್ರಹಿಸಿದೆ.ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಬಿ.ವಿ. ಮಲ್ಲಿಕಾರ್ಜುನಯ್ಯ ಈ ಬಗ್ಗೆ ಪತ್ರ ಬರೆದಿದ್ದು, ‘ಜಿಎಸ್‌ಟಿ ಸ್ತರ ಪರಿಷ್ಕರಣೆಯಿಂದಾಗಿ ದೇಶದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಆದರೆ ಸಣ್ಣ ಮತ್ತು ಮಧ್ಯಮ ದಿನಪತ್ರಿಕೆಗಳು ಬಿಕ್ಕಟ್ಟಿನಲ್ಲಿವೆ. ಕೆಲವೇ ಪತ್ರಿಕೆಗಳಿಗೆ ಜಾಹೀರಾತುಗಳು ಸಿಗುತ್ತಿದ್ದು, ಉಳಿದವು ಮುಚ್ಚಿಹೋಗಿವೆ ಅಥವಾ ಕಷ್ಟದಲ್ಲಿ ಕಾರ್ಯಾಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಪತ್ರಿಕೆ ಉತ್ಪಾದನೆಯಲ್ಲಿ ಬಳಸುವ ಕಾಗದ, ಶಾಯಿ, ಮುದ್ರಣ ಪ್ಲೇಟ್‌ಗಳ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕಬೇಕು. ಇದರಿಂದ, ಮಾಧ್ಯಮಗಳ ವೆಚ್ಚವನ್ನು ತಗ್ಗಿಸುವ ಸರ್ಕಾರದ ಗುರಿಯೂ ತಲುಪಿದಂತಾಗುತ್ತದೆ’ ಎಂದು ಮನವಿ ಮಾಡಿದ್ದಾರೆ.

ಪ್ರಸ್ತುತ ಪತ್ರಿಕೆಗಳಲ್ಲಿ ಬಳಸುವ ಕಾಗದದ ಮೇಲೆ ಶೇ.5ರಷ್ಟು ಮತ್ತು ಶಾಯಿಯ ಮೇಲೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

==

ಜಿಯೋದಿಂದ ಶೀಘ್ರ ಎಐ ಕ್ಲಾಸ್‌ರೂಂ ಫೌಂಡೇಷನ್‌ ಕೋರ್ಸ್‌ ಆರಂಭ

ನವದೆಹಲಿ: ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ 2025ರಲ್ಲಿ ಜಿಯೋದಿಂದ ಎಐ ಕ್ಲಾಸ್‌ರೂಂ- ಫೌಂಡೇಷನ್‌ ಕೋರ್ಸ್‌ ಆರಂಭಿಸುವ ಕುರಿತು ಘೋಷಣೆ ಮಾಡಲಾಯಿತು. ಇದನ್ನು ಜಿಯೋಪಿಸಿ ರೂಪಿಸಿದ್ದು, ಉಚಿತ ಶಿಕ್ಷಣವಾಗಿದೆ. ಇದು ಆರಂಭಿಕ ಸ್ನೇಹಿಯ ಪ್ರೋಗ್ರಾಂ ಆಗಿದ್ದು, ಎಐನ ಬಗ್ಗೆ ಏನೂ ತಿಳಿಯದೇ ಇರುವವರಿಗೂ ಸಹ ಕೃತಕ ಬುದ್ಧಿಮತ್ತೆಯ ಕುರಿತು ಶಿಕ್ಷಣ ಒದಗಿಸುತ್ತದೆ. ನಾಲ್ಕು ವಾರಗಳ ಕಾಲ ನಡೆಯುವ ಈ ತರಗತಿಗಳು ಎಐ ಕುರಿತ ಡಿಸೈನಿಂಗ್‌, ಕಮ್ಯುನಿಕೇಷನ್‌, ಪ್ರಾಜೆಕ್ಟ್‌ ಸೇರಿ ಇತ್ಯಾದಿ ಪಠ್ಯಕ್ರಮ ಇದರಲ್ಲಿದೆ. ಇದನ್ನು ಜಿಯೋ ಇನ್ಸ್‌ಟಿಟ್ಯೂಟ್‌ ಸಹಭಾಗಿತ್ವದಲ್ಲಿ ಪರಿಚಯಿಸಲಾಗಿದೆ.