ಸಾರಾಂಶ
ನವದೆಹಲಿ: ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಚುನಾವಣೆ ಜೂ.1 ಶನಿವಾರ ಮುಕ್ತಾಯವಾಗಲಿದೆ. ಸಂಜೆ 6.30ಕ್ಕೆ ಚುನಾವಣೋತ್ತರ ಟೀವಿ ಸಮೀಕ್ಷೆಗಳು ಪ್ರಕಟವಾಗಲಿವೆ. ಹೀಗಾಗಿ ಜೂ.4ರ ಫಲಿತಾಂಶಕ್ಕೂ ಮುನ್ನ ಈ ‘ಸಂಭಾವ್ಯ ಫಲಿತಾಂಶ’ ಪ್ರಕಟಣೆ ಕುತೂಹಲ ಕೆರಳಿಸಿದೆ.
ಇದೇ ವೇಳೆ, 543 ಲೋಕಸಭಾ ಸ್ಥಾನಗಳ ಜತೆಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನ ಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳೂ ಹೊರಬೀಳಲಿವೆ.
ಮತದಾನದ ಅಂತಿಮ ದಿನವಾದ ಜೂ.1 ರಂದು ಸಂಜೆ 6 ಗಂಟೆಯವರೆಗೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸುವುದನ್ನು ಚುನಾವಣಾ ಆಯೋಗ ಸುದ್ದಿ ವಾಹಿನಿಗಳಿಗೆ ನಿರ್ಬಂಧಿಸಿತ್ತು.
ಎಕ್ಸಿಟ್ ಪೋಲ್ ಚರ್ಚೆಗೆ ಬಹಿಷ್ಕಾರ: ಕಾಂಗ್ರೆಸ್ ನಿರ್ಧಾರ
ನವದೆಹಲಿ: ಸುದ್ದಿ ವಾಹಿನಿಗಳಲ್ಲಿ ಶನಿವಾರ ನಡೆಯಲಿರುವ ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಚರ್ಚೆಗಳಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. ಟಿಆರ್‌ಪಿಗಾಗಿ ನಡೆಸುವ ಊಹಾಪೋಹ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದೆ.ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ, ‘ಮತದಾರರು ಮತ ಚಲಾಯಿಸಿದ್ದಾರೆ.
ಅವರ ತೀರ್ಪು ಖಚಿತವಾಗಿದೆ. ಚುನಾವಣೆ ಫಲಿತಾಂಶ ಜೂ.4 ರಂದು ಹೊರ ಬೀಳಲಿದೆ. ಟಿಆರ್‌ಪಿಗಾಗಿ ನಡೆಸುವ ಊಹಾಪೋಹಗಳ ಚರ್ಚೆ ಮತ್ತು ಸ್ಲಗ್‌ಫೆಸ್ಟ್‌ನಲ್ಲಿ ಪಾಲ್ಗೊಳ್ಳುವಿಕೆಯ ಅವಶ್ಯಕತೆ ನಮಗಿಲ್ಲ. ಜೂ.4 ರಂದು ಫಲಿತಾಂಶ ಹೊರಬಿದ್ದಾಗ ಸಂತೋಷದಿಂದ ಚರ್ಚೆಗಳಲ್ಲಿ ಭಾಗವಹಿಸುತ್ತೇವೆ’ ಎಂದಿದ್ದಾರೆ.
ಬಿಜೆಪಿ ವ್ಯಂಗ್ಯ: ಕಾಂಗ್ರೆಸ್ ಪಕ್ಷ ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದಿರುವುದು, ಸೋಲು ಒಪ್ಪಿಗೆಯ ಸಂಕೇತ ಎಂದು ಬಿಜೆಪಿ ವ್ಯಂಗ್ಯವಾಡಿದೆ.