ಮಾಲೇಗಾಂವ್‌ ಕೇಸಲ್ಲಿ ಶ್ರೀ ಶ್ರೀ ಹೆಸರು ಹೇಳಲುಒತ್ತಡವಿತ್ತು: ನಿ. ಮೇಜರ್‌

| N/A | Published : Aug 04 2025, 12:15 AM IST / Updated: Aug 04 2025, 06:13 AM IST

ಮಾಲೇಗಾಂವ್‌ ಕೇಸಲ್ಲಿ ಶ್ರೀ ಶ್ರೀ ಹೆಸರು ಹೇಳಲುಒತ್ತಡವಿತ್ತು: ನಿ. ಮೇಜರ್‌
Share this Article
  • FB
  • TW
  • Linkdin
  • Email

ಸಾರಾಂಶ

ನಿವೃತ್ತ ಮೇಜರ್‌ ರಮೇಶ್‌ ಉಪಾಧ್ಯಾಯ ಕೂಡ ಇಂಥದ್ದೇ ಆರೋಪ ಮಾಡಿದ್ದು, ‘ಬೆಂಗಳೂರು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಹೆಸರು ಹೇಳುವಂತೆ ನನ್ನ ಮೇಲೆ ತನಿಖಾಧಿಕಾರಿಗಳು ಒತ್ತಡ ಹೇರಿದ್ದರು. ಚಿತ್ರ ಹಿಂಸೆ ಕೊಟ್ಟಿದ್ದರು’ ಎಂದು ಆರೋಪಿಸಿದ್ದಾರೆ.

 ಬಲಿಯಾ (ಉತ್ತರಪ್ರದೇಶ) :  2008ರ ಮಾಲೇಗಾಂವ್‌ ಸ್ಫೋಟದ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ ಮುಂಬೈನ ಎನ್‌ಐಎ ವಿಶೇಷ ಕೋರ್ಟ್‌ ತೀರ್ಪು ನೀಡಿದ ಬೆನ್ನಲ್ಲೇ ಪ್ರಕರಣದ ತನಿಖಾಧಿಕಾರಿಗಳ ಮೇಲೆ ಇದೀಗ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಸಾಧ್ವಿ ಪ್ರಜ್ಞಾ ಸಿಂಗ್‌, ಮತ್ತಿತರರ ಜತೆ ದೋಷಮುಕ್ತಗೊಂಡಿರುವ ನಿವೃತ್ತ ಮೇಜರ್‌ ರಮೇಶ್‌ ಉಪಾಧ್ಯಾಯ ಕೂಡ ಇಂಥದ್ದೇ ಆರೋಪ ಮಾಡಿದ್ದು, ‘ಬೆಂಗಳೂರು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಹೆಸರು ಹೇಳುವಂತೆ ನನ್ನ ಮೇಲೆ ತನಿಖಾಧಿಕಾರಿಗಳು ಒತ್ತಡ ಹೇರಿದ್ದರು. ಚಿತ್ರ ಹಿಂಸೆ ಕೊಟ್ಟಿದ್ದರು’ ಎಂದು ಆರೋಪಿಸಿದ್ದಾರೆ.

ಜತೆಗೆ, ‘ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹಾಗೂ ಆರೆಸ್ಸೆಸ್ ನಾಯಕ ಇಂದ್ರೇಶ್‌ ಕುಮಾರ್‌ ಅವರ ಹೆಸರನ್ನೂ ಹೇಳುವಂತೆ ನನಗೆ ಜೈಲಲ್ಲಿ ತೀವ್ರ ಚಿತ್ರಹಿಂಸೆ ನೀಡಲಾಗಿತ್ತು’ ಎಂದು ಕಿಡಿಕಾರಿದ್ದಾರೆ.

ಭಾನುವಾರ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ಆ.28, 2008ರಂದು ಎಟಿಎಸ್‌ ನನ್ನನ್ನು ಕಸ್ಟಡಿಗೆ ತೆಗೆದುಕೊಂಡಿತ್ತು. ಈ ವೇಳೆ ನನಗೆ ತೀವ್ರ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡಲಾಗಿತ್ತು. ಹಲವು ವರ್ಷಗಳ ಕಾಲ ನನ್ನನ್ನು ಏಕಾಂತ ಸೆರೆವಾಸದಲ್ಲಿಡಲಾಗಿತ್ತು. ರಾಜಕೀಯ ಮತ್ತು ಧಾರ್ಮಿಕ ನಾಯಕರು ಕೃತ್ಯದಲ್ಲಿ ಭಾಗಿ ಆಗಿದ್ದಾರೆ ಎಂದು ಅವರ ಹೆಸರು ಹೇಳು. ಹೀಗಾದರಷ್ಟೇ ಶೀಘ್ರ ಬಿಡುಗಡೆ ಮಾಡ್ತೇವೆ ಎಂದು ಒತ್ತಡ ಹೇರಲಾಗಿತ್ತು’ ಎಂದರು.

‘ಆಗಿನ ಯುಪಿಎ ಸರ್ಕಾರ ರಾಜಕೀಯ ಪ್ರೇರಿತವಾಗಿ ಪ್ರಕರಣದ ಕುರಿತು ತನಿಖೆ ನಡೆಸಿದೆ. ಸೋನಿಯಾ ಗಾಂಧಿ, ದಿಗ್ವಿಜಯ ಸಿಂಗ್‌ ಮತ್ತು ಸುಶೀಲ್‌ ಕುಮಾರ್‌ ಶಿಂಧೆಯಂಥ ನಾಯಕರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ನಾನು ವಿನಾ ಕಾರಣ 17 ವರ್ಷ ಜೈಲಲ್ಲಿ ಕಳೆಯಬೇಕಾಯಿತು’ ಎಂದು ಆರೋಪಿಸಿದರು.

‘ನಾನು ನಾರ್ಕೋ ಮತ್ತು ಪಾಲಿಗ್ರಾಫ್‌ ಪರೀಕ್ಷೆ ಮಾಡಿಸಿಕೊಳ್ಳಲು 3 ಬಾರಿ ಸ್ವಯಂಪ್ರೇರಿತನಾಗಿ ಮುಂದೆ ಬಂದಿದ್ದೆ. ಆದರೂ ಎಟಿಎಸ್‌ ಅದರ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲೇ ಇಲ್ಲ’ ಎಂದು ಉಪಾಧ್ಯಾಯ ಬೇಸರ ವ್ಯಕ್ತಪಡಿಸಿದರು.

Read more Articles on