ಸಾರಾಂಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬ್ರೆಜಿಲ್, ನೈಜೀರಿಯಾ ಹಾಗೂ ಗಯಾನಾ ರಾಷ್ಟ್ರಗಳ ಭೇಟಿಯ ಸಂದರ್ಭದಲ್ಲಿ ಆ ರಾಷ್ಟ್ರಗಳ ನಾಯಕರ ಜತೆಗೆ ಜಿ20 ಶೃಂಗಕ್ಕೆ ಬಂದಿದ್ದ ಹಲವಾರು ಜಾಗತಿಕ ನಾಯಕರಿಗೆ ಭಾರತದ ಶ್ರೀಮಂತ ಉಡುಗೊರೆಗಳನ್ನು ನೀಡಿದರು. ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರ ಪುಟ್ಟ ಮಗ ಲಿಲನ್ ಅಲಿಗೆ ಬೊಂಬೆಗಳಿಗೆ ಪ್ರಸಿ ದ್ಧವಾದ ಚನ್ನಪಟ್ಟಣದ ಮರದ ಆಟಿಕೆ ರೈಲು ನೀಡಿ ಕರ್ನಾಟಕದ ಕಲೆಯನ್ನು ಪರಿಚಯಿಸಿದರು.
ಖರ್ಗೆ, ರಾಹುಲ್‌ಗೆ ತಾವ್ಡೆ ₹100 ಕೋಟಿ ಮಾನಹಾನಿ ನೋಟಿಸ್
ಮುಂಬೈ: ಚುನಾವಣೆಯಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವ್ಡೆ ಹಣ ಹಂಚಿದ್ದಾರೆಂದು ಆರೋಪಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇತ್ ಅವರಿಗೆ ಶುಕ್ರವಾರ ತಾವ್ಡೆ ಲೀಗಲ್ ನೋಟಿಸ್ ನೀಡಿದ್ದಾರೆ.‘ಈ ಮೂರೂ ನಾಯಕರು ಬೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ 100 ಕೋಟಿ ರು. ಮಾನನಷ್ಟ ಮೊಕದ್ದಮೆ ದಾವೆ ಹೂಡಲಾಗುವುದು. ಹಾಗೂ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ದಾಖಲಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.ವಿನೋದ್ ತಾವ್ಡೆ ಅವರು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಪಾಲ್ಘರ್‌ನಲ್ಲಿ ವಿಪಕ್ಷ ಕಾರ್ಯಕರ್ತರು ಅವರಿದ್ದ ಹೋಟೆಲ್‌ಗೆ ನುಗ್ಗಿ ಗಲಾಟೆ ಮಾಡಿದ್ದರು. ಬಳಿಕ, ‘ತಾವ್ಡೆ 5 ಕೋಟಿ ರು. ಹಣ ಹಂಚುವ ವೇಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು’ ಎಂದು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸುಪ್ರಿಯಾ ಶ್ರಿನೇತ್ ಆರೋಪಿಸಿದ್ದರು.
ಕುಸಿದಿದ್ದ ಸೆನ್ಸೆಕ್ಸ್ 1961 ಅಂಕ ನೆಗೆತ
ಮುಂಬೈ: ಸತತ ಕುಸಿತ ಕಾಣುತ್ತಿದ್ದ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 1961 ಅಂಕ ನೆಗೆದಿದ್ದು,79,117ರಲ್ಲಿ ಮುಕ್ತಾಯವಾಗಿದೆ. ಅದೇ ರೀತಿ ನಿಫ್ಟಿಯೂ 557 ಅಂಕ ಏರಿಕೆ ಕಂಡು 23,907ರಲ್ಲಿ ಮುಕ್ತಾಯವಾಗಿದೆ. ಇದರಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನ 7 ಲಕ್ಷ ಕೋಟಿ ರು. ವೃದ್ಧಿಸಿದ್ದು, ಮಾರುಕಟ್ಟೆ ಮೌಲ್ಯ 432.25 ಲಕ್ಷ ಕೋಟಿ ರು.ಗೆ ಹೆಚ್ಚಿದೆ.ಸಾಂಸ್ಥಿಕ ಹೂಡಿಕೆದಾರರ ಹೂಡಿಕೆ ಉತ್ಸಾಹ, ಅಮೆರಿಕ ಹಾಗೂ ವಿಶ್ವ ಮಾರುಕಟ್ಟೆಗಳ ಚೇತರಿಕೆಯು ಈ ಏರಿಕೆಗೆ ಕಾರಣ. ಒಂದು ಹಂತದಲ್ಲಿ ಸೆನ್ಸೆಕ್ಸ್ 2,062 ಅಂಕ ಏರಿಕೆ ಕಂಡು 79,218ರಲ್ಲಿ ತಲುಪಿತ್ತು. ನಂತರ ಸ್ವಲ್ಪ ಇಳಿಕೆಯಾಗಿದೆ.
ಬ್ಯಾಂಕ್, ಐಟಿ ಮತ್ತು ಟೆಕ್ ಷೇರುಗಳಲ್ಲಿ ಖರೀದಿ ಹೆಚ್ಚಿದ್ದರಿಂದ ಮಾರುಕಟ್ಟೆ ಲಾಭದಲ್ಲಿ ಮುಕ್ತಾಯವಾಗಿದೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟೈಟಾನ್, ಐಟಿಸಿ, ಇನ್ಫೋಸಿಸ್, ಲಾರ್ಸನ್ ಆ್ಯಂಡ್ ಟೂಬ್ರೊ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಅತಿ ಹೆಚ್ಚು ಲಾಭ ಗಳಿಸಿವೆ.
ಮೃತನೆಂದು ಘೋಷಿಸಿದ್ದ ವ್ಯಕ್ತಿ ಅಂತ್ಯಕ್ರಿಯೆ ವೇಳೆ ಎದ್ದುಕುಂತ!
ಜೈಪುರ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಮೃತಪಟ್ಟಿದ್ದಾನೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟಿದ್ದ 25 ವರ್ಷದ ವ್ಯಕ್ತಿಯೊಬ್ಬ ಅಂತ್ಯಕ್ರಿಯೆ ವೇಳೆ ಎದ್ದುಕುಳಿತ ಘಟನೆ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ನಿರ್ಲಕ್ಷ್ಯದ ಕಾರಣ ನೀಡಿ ಮೂವರು ವೈದ್ಯರನ್ನು ಜಿಲ್ಲಾಡಳಿತ ಅಮಾನತು ಮಾಡಿದೆ.ಏನಿದು ಘಟನೆ?:
ಅನಾಥನಾದ ರೋಹಿತಾಶ್, ಅನಾರೋಗ್ಯದ ಹಿನ್ನೆಲೆ ಜಿಲ್ಲೆಯ ಬಿಡಿಕೆ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದ. ಆದರೆ ಚಿಕಿತ್ಸೆಗೆ ಕುಮಾರ್ ಸ್ಪಂದಿಸದ ಹಿನ್ನೆಲೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿ ಅವರ ದೇಹವನ್ನು ಶವಾಗಾರಕ್ಕೆ ಸಾಗಿಸಲಾಗಿತ್ತು. ಅಲ್ಲಿಂದ ಚಿತಾಗಾರಕ್ಕೆ ಕೊಂಡೊಯ್ದ ವೇಳೆ ಚಿತೆಯಲ್ಲಿ ದೇಹ ಇಟ್ಟಾಗ ಕುಮಾರ್ ಉಸಿರಾಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇಜ್ರಿವಾಲ್‌ಗಿಂತ ಆತಿಶಿ 1000 ಪಾಲು ಉತ್ತಮ: ದಿಲ್ಲಿ ಉಪರಾಜ್ಯಪಾಲ!
ನವದೆಹಲಿ: ಆಪ್ ಮುಖ್ಯಸ್ಥ ಹಾಗೂ ಹಿಂದಿನ ಸಿಎಂ ಅರವಿಂದ ಕೇಜ್ರಿವಾಲ್‌ಗಿಂತ ದಿಲ್ಲಿ ಮುಖ್ಯಮಂತ್ರಿ ಆತಿಶಿ 1000 ಪಾಲು ಉತ್ತಮವೆಂದು ಕೇಜ್ರಿ ಜತೆ ಸಂಘರ್ಷದಿಂದ ಸುದ್ದಿ ಮಾಡಿದ್ದ ದಿಲ್ಲಿ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ತಿಳಿಸಿದ್ದಾರೆ.ಇಂದಿರಾ ಗಾಂಧಿ ಮಹಿಳಾ ವಿವಿ ಘಟಿಕೋತ್ಸವದಲ್ಲಿ ಮಾತನಾಡಿದ ಸಕ್ಸೇನಾ, ‘ದೆಹಲಿಗೆ ಆತಿಶಿಯಂತಹ ಒಬ್ಬ ಮಹಿಳೆ ಮುಖ್ಯಮಂತ್ರಿಯಾಗಿರುವುದು ಇಂದು ನನಗೆ ಸಂತಸ ತಂದಿದೆ. ಅವರು ತಮ್ಮ ಹಿಂದಿನ ಸಿಎಂಗಿಂತ ಸಾವಿರ ಪಟ್ಟು ಉತ್ತಮರು ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ’ ಎಂದರು.
ಅಬಕಾರಿ ಹಗರಣ ಆರೋಪ ಹೊತ್ತಿರುವ ಕೇಜ್ರಿವಾಲ್ ಸೆಪ್ಟೆಂಬರ್‌ನಲ್ಲಿ ತನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕೆ ಸಿಎಂ ಆಗಿ ಆತಿಶಿ ಅಧಿಕಾರಿ ಸ್ವೀಕರಿಸಿದ್ದರು.