ಸಾರಾಂಶ
ನವದೆಹಲಿ/ಮುಂಬೈ: ಅಶಿಸ್ತು ಮತ್ತು ಪಕ್ಷ ವಿರೋಧಿ ಹೇಳಿಕೆಗಳ ಆರೋಪದ ಮೇಲೆ ಕಾಂಗ್ರೆಸ್ ಪಕ್ಷವು ತನ್ನ ಮಾಜಿ ಸಂಸದ ಸಂಜಯ್ ನಿರುಪಮ್ ಅವರನ್ನು ಆರು ವರ್ಷಗಳ ಅವಧಿಗೆ ಉಚ್ಚಾಟಿಸಿದೆ.
ಇದರ ಬೆನ್ನಲ್ಲೇ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ನಿರುಪಂ, ‘ಕಾಂಗ್ರೆಸ್ ಪಕ್ಷ ಈಗ ಇತಿಹಾಸವಾಗಿದೆ. ಅಲ್ಲದೆ ಮಹಾರಾಷ್ಟ್ರದ ಅಘಾಡಿ ಮೈತ್ರಿಕೂಟವು ರೋಗಗ್ರಸ್ತ ಘಟಕವಾಗಿದೆ’ ಎಂದು ದೂರಿದ್ದಾರೆ ಹಾಗೂ ಈ ಬಾರಿ ಮುಂಬೈ ಉತ್ತರದಿಂದ ಸ್ಪರ್ಧೆ ಮಾಡುವ ಘೋಷಣೆ ಮಾಡಿದ್ದಾರೆ.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಅವರು ‘ಜೈ ಶ್ರೀರಾಂ’ ಎಂದು ಕೂಗಿದರು. ಇದು ಅವರು ಬಿಜೆಪಿ ಸೇರಬಹುದೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಸುದ್ದಿಗಾರರ ಜತೆ ಮಾತನಾಡಿದ ನಿರುಪಂ, ‘ಕಾಂಗ್ರೆಸ್‌ನಲ್ಲಿ ಆಗ ಸೋನಿಯಾ ಅವರ ಒಂದು ಅಧಿಕಾರ ಕೇಂದ್ರ ಇತ್ತು. ಆದರೆ ಇಂದು ಸೋನಿಯಾ, ರಾಹುಲ್, ಪ್ರಿಯಾಂಕಾ, ಖರ್ಗೆ, ಕೆ.ಸಿ. ವೇಣುಗೋಪಾಲ್ - ಹೀಗೆ 5 ಪವರ್ ಸೆಂಟರ್ ಆಗಿವೆ. ರಾಹುಲ್ ಗಾಂಧಿ ಜತೆ ತಳಮಟ್ಟದ ಸಂಪರ್ಕವಿಲ್ಲದ ನಾಯಕರು ಇದ್ದಾರೆ’ ಎಂದಿದ್ದಾರೆ,
2014ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ವಾಯವ್ಯ ಕ್ಷೇತ್ರದಲ್ಲಿ ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ನಿರುಪಮ್ ಸೋಲನುಭವಿಸಿದ್ದರು.