ಸಾರಾಂಶ
ಮುಂಬೈ: ಕೀಳು ಹೇಳಿಕೆ ನೀಡಿ ವಿವಾದದಲ್ಲಿ ಸಿಕ್ಕಿಬಿದ್ದಿರುವ ಯುಟ್ಯೂಬರ್ ರಣವೀರ್ ಅಲಹಾಬಾದಿಯಾ ಪ್ರಕರಣ ಮಂಗಳವಾರ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಒಂದೆಡೆ ಹೇಳಿಕೆ ಬಗ್ಗೆ ಕೇಂದ್ರ ಸರ್ಕಾರ ವರದಿ ಕೇಳಿದ್ದರೆ, ಮತ್ತೊಂದೆಡೆ ವಿವಾದಿತ ವಿಡಿಯೋವನ್ನು ಯುಟ್ಯೂಬ್‌ನಿಂದ ತೆಗೆದು ಹಾಕಲಾಗಿದೆ. ಜೊತೆಗೆ ಹೇಳಿಕೆ ಖಂಡಿಸಿ ಮಂಗಳವಾರ ಮಧ್ಯಪ್ರದೇಶದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದೆಡೆ ಮಂಗಳವಾರ ಶಿವಸೇನೆ ಸಂಸದರು ಲೋಕಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಿ ಇಂಥ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲು ಆಗ್ರಹ ಮಾಡಿದ್ದಾರೆ. ಜೊತೆಗೆ ಮುಂಬೈ ಪೊಲೀಸರು ಮಂಗಳವಾರ ಮುಂಬೈನ ರಣವೀರ್ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡಿದ್ದಾರೆ. ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಭಾಗವಹಿಸಿದ್ದ ರಣವೀರ್, ಯುವತಿಯೊಬ್ಬಳ ಜೊತೆ ಕೀಳು ಸಂವಹನ ನಡೆಸಿ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.
==ಜಮ್ಮುವಿನಲ್ಲಿ ಉಗ್ರರಿಂದ ಐಇಡಿ ಸ್ಫೋಟ: ಇಬ್ಬರು ಯೋಧರು ಹುತಾತ್ಮ
ಶ್ರೀನಗರ: ಜಮ್ಮು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನ ಗಡಿ ನಿಯಂತ್ರಣಾ ರೇಖೆ ಬಳಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಒಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಕಳೆದ 4 ದಿನಗಳಲ್ಲಿ ಗಡಿಯಾಚೆಗಿನ ಉಗ್ರರು ನಡೆಸಿದ ಮೂರನೇ ದಾಳಿಯ ಘಟನೆಯಾಗಿದೆ. ಸೋಮವಾರ ಪಾಕ್ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಗಾಯಗೊಂಡಿದ್ದ. ಫೆ.8ರಂದು ಕೂಡಾ ಪಾಕ್ ಕಡೆಯಿಂದ ದಾಳಿ ನಡೆದಿತ್ತು.
==ವೆಚ್ಚ ಹೆಚ್ಚಳ: ಅಮೆರಿಕದಲ್ಲಿ ಸೆಂಟ್ ನಾಣ್ಯ ಉತ್ಪಾದನೆ ಸ್ಥಗಿತ
ವಾಷಿಂಗ್ಟನ್: ಭಾರತದಲ್ಲಿನ 1, 2, 5 ರು. ನಾಣ್ಯಗಳ ರೀತಿಯಲ್ಲೇ ಅಮೆರಿಕದಲ್ಲಿ ಬಳಕೆಯಲ್ಲಿರುವ ಪೆನ್ನಿ/ಸೆಂಟ್‌ಗಳ ತಯಾರಿಕೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರೇಕ್ ಹಾಕಿದ್ದಾರೆ. ನಾಣ್ಯಗಳ ಮೌಲ್ಯಕ್ಕಿಂತ ಅದರ ಉತ್ಪಾದನಾ ವೆಚ್ಚವೇ ಎರಡು ಪಟ್ಟು ಹೆಚ್ಚಾಗಿದೆ ಎನ್ನುವ ಕಾರಣ ನೀಡಿ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುಬವ ಡೊನಾಲ್ಡ್ ಟ್ರಂಪ್, ‘ ಅಮೆರಿಕ ಬಹಳ ಸಮಯದಿಂದ ನಾಣ್ಯಗಳನ್ನು ಉತ್ಪಾದನೆ ಮಾಡುತ್ತಿದೆ. 1 ಸೆಂಟ್ ತಯಾರಿಗೆ ನಮಗೆ 2 ಸೆಂಟ್‌ಗಳಿಂತ ಹೆಚ್ಚು ವೆಚ್ಚವಾಗುತ್ತದೆ’ ಎಂದಿದ್ದಾರೆ. ಪೆನ್ನಿ ಅಮೆರಿಕದಲ್ಲಿ 230 ವರ್ಷಗಳಿಗೂ ಹೆಚ್ಚು ಕಾಲದಿಂದ ಚಲಾವಣೆಯಲ್ಲಿದೆ.==
ಅಮೆರಿಕದಲ್ಲಿ ಪ್ಲಾಸ್ಟಿಕ್ ಸ್ಟ್ರಾ ಬಳಕೆಗಿದ್ದ ನಿರ್ಬಂಧ ರದ್ದುವಾಷಿಂಗ್ಟನ್: ಅಮೆರಿಕದಲ್ಲಿ ಈ ಹಿಂದೆ ನಿಷೇಧಕ್ಕೆ ಒಳಗಾಗಿದ್ದ ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿರ್ಬಂಧವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದು, ಈ ಕುರಿತ ಆದೇಶಕ್ಕೆ ಸಹಿ ಹಾಕಿದ್ದಾರೆ. ಅಮೆರಿಕದಲ್ಲಿ ಇದುವರೆಗೆ ಪ್ಲಾಸಿಕ್ ಸ್ಟ್ರಾಗಳ ಬದಲಾಗಿ ಪೇಪರ್ ಸ್ಟ್ರಾಗಳನ್ನು ಬಳಸಲಾಗುತ್ತಿತ್ತು. ಆದರೆ ಪೇಪರ್ ಸ್ಟ್ರಾಗಳು ಇನ್ನು ಮುಂದೆ ಬಳಕೆಯಲ್ಲಿರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡ ಬೆನ್ನಲ್ಲೇ ಟ್ರಂಪ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆದರೆ ಟ್ರಂಪ್ ಕ್ರಮ ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಜಾಗತಿಕ ಹೋರಾಟಕ್ಕೆ ಹಿನ್ನಡೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.==
ಭ್ರಷ್ಟಾಚಾರ ಸೂಚ್ಯಂಕ: 180 ದೇಶಗಳ ಪೈಕಿ ಭಾರತ 96ನೇ ಸ್ಥಾನನವದೆಹಲಿ: ವಿವಿಧ ದೇಶಗಳಲ್ಲಿ ಸಾರ್ವಜನಿಕ ವಲಯದಲ್ಲಿನ ಭ್ರಷ್ಟಾಚಾರದ ಕುರಿತು ಕಣ್ಣಿಡುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ 2024ನೇ ಸಾಲಿನ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ ಬಿಡುಗಡೆ ಮಾಡಿದೆ. ಇದರಲ್ಲಿ 180 ದೇಶಗಳ ಪೈಕಿ ಭಾರತ 39 ಅಂಕಗಳೊಂದಿಗೆ 96ನೇ ಸ್ಥಾನ ಪಡೆದಿದೆ. 2023ರಲ್ಲಿ ಭಾರತ 38 ಅಂಕಗಳೊಂದಿಗೆ 93ನೇ ಸ್ಥಾನದಲ್ಲಿತ್ತು. ಪಟ್ಟಿಯಲ್ಲಿ 0-100 ಅಂಕ ನೀಡಲಾಗುವುದು. 0 ಪಡೆದ ದೇಶಗಳು ಅತ್ಯಂತ ಭ್ರಷ್ಟ ಎಂದು ಪರಿಗಣಿತವಾದರೆ, 100 ಅತ್ಯಂತ ಸ್ವಚ್ಛ ಎಂದು ಪರಿಗಣಿಸಲಾಗುತ್ತದೆ ಪಟ್ಟಿಯಲ್ಲಿ ಪಾಕಿಸ್ತಾನ 135ನೇ ಸ್ಥಾನ, ಶ್ರೀಲಂಕಾ 121, ಚೀನಾ 76ನೇ ಸ್ಥಾನ ಪಡೆದಿವೆ. ಡೆನ್ಮಾರ್ಕ್, ಫಿನ್ಲೆಂಡ್ ಮತ್ತು ಸಿಂಗಾಪುರ ದೇಶಗಳು ಅತ್ಯಂತ ಹೆಚ್ಚಿನ ಅಂಕ ಪಡೆದ ಟಾಪ್ ಮೂರು ದೇಶಗಳಾಗಿ ಹೊರಹೊಮ್ಮಿವೆ.