ನೂತನ ಪಂಬನ್‌ ಬ್ರಿಡ್ಜ್‌ ಶೀಘ್ರ ಲೋಕಾರ್ಪಣೆ - ವರ್ಟಿಕಲ್‌ ಲಿಫ್ಟ್‌ ತಂತ್ರಜ್ಞಾನದ ನೂತನ ಸೇತುವೆ

| N/A | Published : Feb 11 2025, 11:27 AM IST

Pamban Bridge

ಸಾರಾಂಶ

ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಒಂದಾದ ತಮಿಳುನಾಡಿನ ರಾಮೇಶ್ವರಂ ಸಂಪರ್ಕಿಸುವ ಹೊಸದಾಗಿ ನಿರ್ಮಿಸಿರುವ ಭಾರತದ ಮೊದಲ ವರ್ಟಿಕಲ್‌ ಲಿಫ್ಟ್‌ ರೈಲ್ವೇ ಸಮುದ್ರ ಸೇತುವೆ ‘ಪಂಬನ್‌ ಬ್ರಿಡ್ಜ್‌’ ಲೋಕಾರ್ಪಣೆಗೆ ಸಜ್ಜಾಗಿದೆ. 

ಮಯೂರ್‌ ಹೆಗಡೆ

 ಮಧುರೈ : ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಒಂದಾದ ತಮಿಳುನಾಡಿನ ರಾಮೇಶ್ವರಂ ಸಂಪರ್ಕಿಸುವ ಹೊಸದಾಗಿ ನಿರ್ಮಿಸಿರುವ ಭಾರತದ ಮೊದಲ ವರ್ಟಿಕಲ್‌ ಲಿಫ್ಟ್‌ ರೈಲ್ವೇ ಸಮುದ್ರ ಸೇತುವೆ ‘ಪಂಬನ್‌ ಬ್ರಿಡ್ಜ್‌’ ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸೇತುವೆಯನ್ನು ಉದ್ಘಾಟಿಸಲಿದ್ದು, ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ನಲ್ಲಿ ಇದು ರೈಲುಗಳ ಸಂಚಾರಕ್ಕೆ ಮುಕ್ತವಾಗಲಿದೆ.

ಸಮುದ್ರದಲ್ಲಿ ನಿರ್ಮಿಸಿರುವ ಈ ಸೇತುವೆಯ ಕೆಳಗೆ ದೈತ್ಯ ಹಡಗುಗಳು ಬಂದಾಗ ಅವು ಹಾದುಹೋಗಲು ಅನುವಾಗುವಂತೆ ಸೇತುವೆ ಮಧ್ಯಭಾಗ ಮೇಲೆತ್ತಿಕೊಳ್ಳುವ ವ್ಯವಸ್ಥೆ ರೂಪಿಸಲಾಗಿದ್ದು, ಇದು ಆಧುನಿಕ ಎಂಜಿನಿಯರಿಂಗ್‌ನ ಅದ್ಭುತ ಎನ್ನಿಸಿಕೊಂಡಿದೆ.

ರಾಮನಾಥಪುರಂ ಜಿಲ್ಲೆಯ ಮಂಡಪಂ ರೈಲು ನಿಲ್ದಾಣ ಹಾಗೂ ದ್ವೀಪನಗರಿ ರಾಮೇಶ್ವರಂ ರೈಲು ನಿಲ್ದಾಣದ ನಡುವೆ ಈ ಪಂಬನ್‌ ಸೇತುವೆ ಇದೆ. ದಕ್ಷಿಣ ರೈಲ್ವೆ ವಲಯವು ರೈಲ್ವೆ ವಿಕಾಸ ನಿಗಮ ಲಿ. ಸಹಯೋಗದಲ್ಲಿ ₹534 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಿದೆ.

110 ವರ್ಷದ ಹಳೆಯ ಸೇತುವೆಗೆ ಬದಲಿ: 1914ರಲ್ಲಿ ನಿರ್ಮಾಣಗೊಂಡಿರುವ 110 ವರ್ಷ ಹಳೆಯ ಸೇತುವೆ ಕೂಡ ಇದರ ಪಕ್ಕದಲ್ಲಿದೆ. ಈ ಹಳೆಯ ಸೇತುವೆ ಮಧ್ಯಭಾಗ ಕೂಡ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಲು ರೆಕ್ಕೆಯಂತೆ ತೆರೆದುಕೊಳ್ಳುತ್ತಿತ್ತು. ಸಮುದ್ರದ ಲವಣಾಂಶದಿಂದಾಗಿ ಈ ಸೇತುವೆ ತುಕ್ಕು ಹಿಡಿದಿದ್ದು, ಸುರಕ್ಷತೆ ಕಾರಣಕ್ಕೆ 2022ರ ಡಿಸೆಂಬರ್‌ನಲ್ಲಿ ಈ ಸೇತುವೆ ಮೇಲೆ ರೈಲು ಸಂಚಾರ ಅಂತ್ಯಗೊಳಿಸಲಾಗಿತ್ತು. ಅಂದಿನಿಂದ ರಾಮೇಶ್ವರ, ಧನುಷ್ಕೋಡಿಗೆ ಪ್ರವಾಸಿಗರು ರಸ್ತೆ ಮಾರ್ಗದ ಮೂಲಕ ಸಾಗುತ್ತಿದ್ದಾರೆ.

ಕಾಮಗಾರಿ ಪೂರ್ಣ: ಹಳೆ ಸೇತುವೆಗೆ ಪರ್ಯಾಯವಾಗಿ 2019ರ ಫೆಬ್ರವರಿಯಲ್ಲಿ ಆರಂಭವಾದ ಹೊಸ ಪಂಬನ್‌ ಬ್ರಿಡ್ಜ್‌ ನಿರ್ಮಾಣ ಕಾಮಗಾರಿ 2024ರ ನವೆಂಬರ್‌ನಲ್ಲಿ ಪೂರ್ಣಗೊಂಡಿದೆ. ಈಗಾಗಲೇ ರೈಲ್ವೆ ಸುರಕ್ಷತಾ ಆಯುಕ್ತಾಲಯ ತಪಾಸಣೆ ನಡೆಸಿದ್ದು, ಹೊಸ ಸೇತುವೆಯಲ್ಲಿ ಪ್ರಾಯೋಗಿಕ ರೈಲು ಸಂಚಾರವೂ ಆಗಿದೆ. ಪ್ರಧಾನಿ ಮೋದಿ ಸೇತುವೆ ಉದ್ಘಾಟಿಸಲಿದ್ದು, ಅದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಂಡಿದ್ದಾಗಿ ದಕ್ಷಿಣ ರೈಲ್ವೇ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ನಲ್ಲಿ ರೈಲುಗಳ ಓಡಾಟ ಶುರುವಾಗಲಿದೆ. ಪ್ರತಿನಿತ್ಯ 12-15 ರೈಲು ಹಾಗೂ ವಾರದ 12 ರೈಲುಗಳು ಸೇತುವೆ ಮೇಲೆ ಸಂಚರಿಸಲಿವೆ. ಕರ್ನಾಟಕದ ಬೆಂಗಳೂರು, ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿ ದೇಶದ ವಿವಿಧೆಡೆಯಿಂದ ರಾಮೇಶ್ವರಂಗೆ ರೈಲುಗಳ ಮರುಸಂಚಾರ ಪ್ರಾರಂಭ ಆಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

333 ಪಿಲ್ಲರ್‌ಗಳು: 2.10 ಕಿ.ಮೀ. ಉದ್ದದ ಸಮುದ್ರ ದಾಟಲು ನೆರವಾಗುವ ಪಂಬನ್‌ ಸೇತುವೆ 333 ಪಿಲ್ಲರ್‌ಗಳ ಮೇಲೆ ನಿಂತಿದೆ. ಮೀನುಗಾರಿಕೆ, ಸರಕು, ನೌಕಾದಳದ ದೈತ್ಯ ಹಡಗುಗಳು ಸೇತುವೆ ಕೆಳಗೆ ಬಂದಾಗ ಹಾದುಹೋಗಲು ಸಾಧ್ಯವಾಗುವಂತೆ ಸೇತುವೆಯ 72.5 ಮೀ. ಮಧ್ಯಭಾಗವನ್ನು 17 ಮೀಟರ್‌ ಮೇಲಕ್ಕೆ ಎತ್ತರಿಸಲಾಗುತ್ತದೆ. ಈ ಕಾರ್ಯಕ್ಕಾಗಿ 5.30 ನಿಮಿಷ ತಗಲುತ್ತದೆ. ಈ ವರ್ಟಿಕಲ್- ಲಿಫ್ಟ್ ತಂತ್ರಜ್ಞಾನವನ್ನು ಸ್ಪೇನ್‌ ನೆರವಿನಿಂದ ಅಳವಡಿಸಲಾಗಿದೆ. ಉಳಿದಂತೆ ಸೇತುವೆ ಪೂರ್ಣ ಸ್ವದೇಶಿ ತಾಂತ್ರಿಕತೆಯಿಂದ ನಿರ್ಮಾಣವಾಗಿದೆ. ಸದ್ಯ ಈ ಸೇತುವೆ ಮೇಲೆ ವಿದ್ಯುದೀಕರಣಗೊಂಡ ಒಂದು ಹಳಿಯಿದೆ. ಭವಿಷ್ಯದಲ್ಲಿ ಜೋಡಿಹಳಿ ನಿರ್ಮಾಣಕ್ಕೆ ಅವಕಾಶ ಇಟ್ಟುಕೊಳ್ಳಲಾಗಿದೆ.

ಸೇತುವೆಯು ಸೆನ್ಸಾರ್​​ಗಳನ್ನು ಹೊಂದಿದ್ದು, ಇದರಿಂದ ಗಾಳಿ ವೇಗ ಪತ್ತೆ, ಸಮಸ್ಯೆ ಕಂಡುಬಂದಲ್ಲಿ ರೈಲು ನಿಲ್ಲಿಸುವ ವ್ಯವಸ್ಥೆ ಇದೆ. ಇನ್ನು, ಹಳೆಯ ಪಂಬನ್‌ ಬ್ರಿಡ್ಜ್‌ನಲ್ಲಿ ರೈಲು ಕೇವಲ 10 ಕಿ.ಮೀ. ವೇಗದಲ್ಲಿ ಸಾಗುತ್ತಿತ್ತು. ಆದರೆ ಈ ಹೊಸ ಬ್ರಿಡ್ಜ್‌ನಲ್ಲಿ 75 ಕಿ.ಮೀ. ವೇಗದಲ್ಲೂ ರೈಲುಗಳು ಸಂಚರಿಸಬಹುದಾಗಿದೆ.

ತುಕ್ಕು ಹಿಡಿಯದಂತೆ ಕ್ರಮ: ಅಮೆರಿಕದ ಮಿಸ್ಸೌರಿಯಲ್ಲಿರುವ ಮಯಾಮಿ ಬ್ರಿಡ್ಜ್‌ ಬಳಿಕ ಪಂಬನ್‌ ಬ್ರಿಡ್ಜ್‌ ವಿಶ್ವದಲ್ಲೇ ಅತೀ ಹೆಚ್ಚು ತುಕ್ಕು ಹಿಡಿಯುವಂಥ ವಾತಾವರಣದಲ್ಲಿದೆ. ಹೀಗಾಗಿ ಸೇತುವೆಗೆ ಝಿಂಕ್ ಮೆಟಲೈಝಿಂಗ್‌ ಪಿಲೆಕ್ಸ್‌ ಝಿಂಕ್‌ ರಿಚ್‌ ಪ್ರೈಮರ್‌ ಪಾಲಿಸೊಲೋಕ್ಸೆನ್‌ ಬಣ್ಣವನ್ನು ಎರಡು ಕೋಟ್‌ಗಳಲ್ಲಿ ಬಳಿಯಲಾಗಿದೆ. ಈ ಮೂಲಕ ತುಕ್ಕಿನಿಂದ ಹೊಸ ಸೇತುವೆ ರಕ್ಷಿಸಲು ಕ್ರಮ ವಹಿಸಲಾಗಿದೆ ಎಂದು ಎಂಜಿನಿಯರ್‌ಗಳು ತಿಳಿಸಿದರು.

ಪಂಬನ್‌ ಸೇತುವೆ ವಿಶೇಷತೆ

ಒಟ್ಟು ಉದ್ದ 2.10 ಕಿ.ಮೀ.

ನಿರ್ಮಾಣ ವೆಚ್ಚ ₹ 510 ಕೋಟಿ

ಪಿಲ್ಲರ್‌ಗಳ ಸಂಖ್ಯೆ 333

ಸ್ಟೀಲ್ ಬಳಕೆ 4500 ಮೆ.ಟನ್‌

ಕಾಂಕ್ರಿಟ್‌ 25 ಸಾವಿರ ಸಿಯುಎಂ

ಪಂಬನ್‌ ರೈಲ್ವೆ ಸೇತುವೆ ಮಾರ್ಗ ಸಿದ್ಧಗೊಂಡಿದ್ದು, ಶೀಘ್ರ ಇಲ್ಲಿ ರೈಲುಗಳ ಸಂಚಾರ ಶುರುವಾಗಲಿದೆ. ಕರ್ನಾಟಕ ಸೇರಿ ದೇಶಾದ್ಯಂತ ಭಕ್ತರು ರಾಮೇಶ್ವರಕ್ಕೆ ಬರಲು ಅನುಕೂಲವಾಗಲಿದೆ.

ಡಾ. ಮಂಜುನಾಥ ಕನಮಡಿ

ಸಿಪಿಆರ್‌ಒ, ನೈಋತ್ಯ ರೈಲ್ವೆ