ಸಾರಾಂಶ
ರಾಜಕೋಟ್: ಗುಜರಾತಿನ ರಾಜಕೋಟ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿದ ಟಿಆರ್‌ಪಿ ಅಮ್ಯೂಸ್‌ಮೆಂಟ್ ಹಾಗೂ ಥೀಮ್ ಪಾರ್ಕ್ ಎಂಬ ಗೇಮ್ ಜೋನ್‌ಗೆ ಸಂಬಂಧಿಸಿದ ಹಲವು ಲೋಪಗಳು ಭಾನುವಾರ ಬೆಳಕಿಗೆ ಬಂದಿವೆ.
ಈ ಅಮ್ಯೂಸ್‌ಮೆಂಟ್ ಪಾರ್ಕ್ ನಡೆಸಲು ಸರಿಯಾದ ಅನುಮತಿಯನ್ನೇ ಸಂಸ್ಥೆ ಪಡೆದಿರಲಿಲ್ಲ. ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆದುಕೊಂಡಿರಲಿಲ್ಲ. ಅಷ್ಟೊಂದು ಜನರು ಸೇರಿದ್ದರೂ ಪ್ರವೇಶ- ನಿರ್ಗಮನಕ್ಕೆ ಒಂದೇ ದ್ವಾರವಿತ್ತು. ಅದು 6ರಿಂದ 7 ಅಡಿ ಮಾತ್ರ ಎತ್ತರವಿತ್ತು. ಜನರೇಟರ್ ಓಡಿಸಲು 1500ರಿಂದ 2000 ಲೀಟರ್ ಡೀಸೆಲ್ ಹಾಗೂ ಗೋ-ಕಾರ್ಟಿಂಗ್‌ಗಾಗಿ 1000-1500 ಲೀಟರ್ ಪೆಟ್ರೋಲ್ ಶೇಖರಿಸಿಡಲಾಗಿತ್ತು. ಬೆಂಕಿ ಬೇಗನೆ ವ್ಯಾಪಿಸಲು ಇದು ಕೂಡ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಮತ್ತೊಂದೆಡೆ, ಈ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 35ಕ್ಕೇರಿದೆ. ಅದರಲ್ಲಿ 12 ಮಂದಿ ಮಕ್ಕಳು. ಮೃತರ ಕುಟುಂಬದವರಿಗೆ ಗುಜರಾತ್ ಸರ್ಕಾರ ತಲಾ 4 ಲಕ್ಷ ರು. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರು. ಪರಿಹಾರವನ್ನು ಘೋಷಿಸಿದೆ.
ವೀಕೆಂಡ್ ಆಫರ್:
ಬೇಸಿಗೆ ರಜೆಯ ಕಾರಣಕ್ಕೆ ಗೇಮಿಂಗ್ ಜೋನ್‌ಗೆ ಸಾಕಷ್ಟು ಸಂಖ್ಯೆಯ ಜನರು ಬರುತ್ತಾರೆ. ಇದರ ಜತೆಗೆ ವೀಕೆಂಡ್ ಕಾರಣ ವಿಶೇಷ ಯೋಜನೆಯೊಂದನ್ನು ಗೇಮಿಂಗ್ ಕಂಪನಿ ತಂದಿತ್ತು. 99 ರು. ನೀಡಿ ಯಾರು ಬೇಕಾದರೂ ಪ್ರವೇಶಿಸಬಹುದು ಎಂದು ಹೇಳಿತ್ತು. ಹೀಗಾಗಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆಗಲೇ ದುರಂತ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಶಾರ್ಟ್ ಸರ್ಕಿಟ್‌ನಿಂದ ದುರಂತ ಆಗಿರಬಹುದು ಎಂದು ಅಂದಾಜಿಸಲಾಗಿದೆ.