ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ 2.0 ಸರ್ಕಾರದ ಮೊದಲ ದ್ವಿಪಕ್ಷೀಯ ಸಭೆ ಭಾರತ ಜತೆ!

| Published : Jan 23 2025, 12:48 AM IST / Updated: Jan 23 2025, 04:40 AM IST

ಸಾರಾಂಶ

ಅತ್ಯಂತ ಮಹತ್ವದ ವಿದ್ಯಮಾನದಲ್ಲಿ ಡೊನಾಲ್ಡ್‌ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಸರ್ಕಾರದ ಮೊದಲ ದ್ವಿಪಕ್ಷೀಯ ಸಭೆ ಭಾರತದ ಜತೆ ನಡೆದಿದೆ. ಇದು ಐತಿಹಾಸಿಕ ಎಂದು ಬಣ್ಣಿಸಲಾಗಿದೆ.

ವಾಷಿಂಗ್ಟನ್: ಅತ್ಯಂತ ಮಹತ್ವದ ವಿದ್ಯಮಾನದಲ್ಲಿ ಡೊನಾಲ್ಡ್‌ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಸರ್ಕಾರದ ಮೊದಲ ದ್ವಿಪಕ್ಷೀಯ ಸಭೆ ಭಾರತದ ಜತೆ ನಡೆದಿದೆ. ಇದು ಐತಿಹಾಸಿಕ ಎಂದು ಬಣ್ಣಿಸಲಾಗಿದೆ.

ಟ್ರಂಪ್ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವ ಮಾರ್ಕೋ ರುಬಿಯೋ ತಮ್ಮ ಮೊದಲ ದ್ವಿಪಕ್ಷೀಯ ಸಭೆಯನ್ನು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಜೊತೆ ನಡೆಸಿದ್ದಾರೆ. ಇದನ್ನು ‘ಟ್ರಂಪ್‌ ಸರ್ಕಾರವು ಭಾರತಕ್ಕೆ ನೀಡುವ ಗೌರವ’ ಎಂದೂ ವಿಶ್ಲೇಷಿಸಲಾಗಿದೆ.

ಐತಿಹಾಸಿಕ ಏಕೆ?:

ಅಮೆರಿಕದಲ್ಲಿ ಸಾಮಾನ್ಯವಾಗಿ ಸಂಪ್ರದಾಯದಂತೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಅಂತಾರಾಷ್ಟ್ರೀಯ ಸಭೆಯನ್ನು ನೆರೆಯ ಕೆನಡಾ, ಮೆಕ್ಸಿಕೋ ಅಥವಾ ನ್ಯಾಟೋ ರಾಷ್ಟ್ರಗಳೊಂದಿಗೆ ನಡೆಸುತ್ತದೆ. ಆದರೆ ಇದೇ ಮೊದಲ ಸಲ ಭಾರತದೊಂದಿಗೆ ನಡೆಸಿದೆ. ಹೀಗಾಗಿ ಐತಿಹಾಸಿಕ ಸಭೆ ಇದು ಎಂದು ಬಣ್ಣಿಸಲಾಗಿದೆ.

ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಜೈಶಂಕರ್‌ ಅಮೆರಿಕಕ್ಕೆ ತೆರಳಿದ್ದರು. ಬಳಿಕ ಈ ಮಹತ್ವದ ಸಭೆ ನಡೆಸಿದ್ದಾರೆ. ಮಾರ್ಕೋ ಜತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಜ್‌ ಕೂಡ ಇದ್ದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಭಾರತ ಮತ್ತು ಅಮೆರಿಕದ ಕಾರ್ಯತಂತ್ರ ಪಾಲುದಾರಿಕೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

ಪುಟಿನ್‌ ‘ಚಾಣಾಕ್ಷ’, ಆದಷ್ಟು ಬೇಗ ಭೇಟಿಯಾಗುವೆ: ಟ್ರಂಪ್‌

ವಾಷಿಂಗ್ಟನ್‌: ವಿಶ್ವದಲ್ಲಿ ನಡೆಯುತ್ತಿರುವ ಯುದ್ಧಗಳನ್ನು ನಿಲ್ಲಿಸಿ 3ನೇ ವಿಶ್ವಯುದ್ಧಕ್ಕೆ ಎಡೆಮಾಡಿಕೊಡುವುದಿಲ್ಲ ಎಂದು ಘೋಷಿಸಿರುವ ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ ಹುದ್ದೆಗೆ ಏರುತ್ತಿದ್ದಂತೆ ‘ಚಾಣಾಕ್ಷ’ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನು ಆದಷ್ಟು ಬೇಗ ಭೇಟಿಯಾಗುವ ಇಚ್ಛೆಯನ್ನು ಪುನರುಚ್ಚರಿಸಿದ್ದಾರೆ.ತಾವು ಅಧ್ಯಕ್ಷರಾಗಿದ್ದರೆ ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಲೇ ಇರಲಿಲ್ಲ ಎಂದ ಟ್ರಂಪ್‌, ‘ರಷ್ಯಾ ಉಕ್ರೇನ್‌ ಮೇಲೆ ಯುದ್ಧಕ್ಕೆ ಹೋಗುತ್ತಲೇ ಇರಲಿಲ್ಲ. ನನಗೆ ಪುಟಿನ್‌ರೊಂದಿಗೆ ಒಳ್ಳೆ ಬಾಂಧವ್ಯ ಇತ್ತು. ಅವರಿಗೆ ಅಧ್ಯಕ್ಷರಾಗಿದ್ದ ಬೈಡೆನ್‌ ಹಾಗೂ ಜನರ ಪ್ರತಿ ಗೌರವವಿರಲಿಲ್ಲ. ಆತ ಚಾಣಾಕ್ಷ’ ಎಂದು ಹೇಳಿದ್ದಾರೆ.

ಟ್ರಂಪ್ ಪ್ರಮಾಣ ವೀಕ್ಷಕರ ಸಂಖ್ಯೆ 12 ವರ್ಷದ ಕನಿಷ್ಠ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕ್ರಮವನ್ನುಅಂದಾಜು 2.46 ಕೋಟಿ ಜನ ಟಿವಿಯಲ್ಲಿ ವೀಕ್ಷಿಸಿದ್ದು, 2013ರಲ್ಲಿ ಬರಾಕ್ ಒಬಾಮಾ ಅವರ 2ನೇ ಪ್ರಮಾಣ ವಚನದ ನಂತರ ಇದು ಅತಿ ಕಡಿಮೆ ಸಂಖ್ಯೆಯಾಗಿದೆ ಎಂಬುದು ತಿಳಿದುಬಂದಿದೆ.ಜೋ ಬೈಡೆನ್ ಅವರ 2021ರ ಪ್ರಮಾಣ ವಚನದಲ್ಲಿ ಈ ಸಂಖ್ಯೆ 3.38 ಕೋಟಿ ತಲುಪಿತ್ತು. 2017ರಲ್ಲಿ ಟ್ರಂಪ್ ಮೊದಲ ಬಾರಿ ಅಧ್ಯಕ್ಷರಾದಾಗ ಇದು 3.06 ಕೋಟಿಯಿತ್ತು ಎಂದು ನೀಲ್ಸನ್ ಕಂಪನಿ ತಿಳಿಸಿದೆ.

ವೀಕ್ಷಕರ ಸಂಖ್ಯೆ ಕಳೆದ 50 ವರ್ಷಗಳಲ್ಲಿ ಗಣನೀಯವಾಗಿ ಬದಲಾಗಿದೆ, 1981ರಲ್ಲಿ ರೊನಾಲ್ಡ್ ರೇಗನ್ ಅಧಿಕಾರಕ್ಕೆ ಬಂದಾಗ 4.18 ಕೋಟಿಯಿತ್ತು. 2004ರಲ್ಲಿ ಜಾರ್ಜ್ ಡಬ್ಲ್ಯೂ ಬುಷ್‌ 2ನೇ ಅವಧಿ ಅಧಿಕಾರಕ್ಕೇರಿದಾಗ 1.55 ಕೋಟಿಗೆ ಇಳಿದಿತ್ತು. ಆದರೆ 2013ರಿಂದೀಚೆಗಿನ ಕಾರ್ಯಕ್ರಮಗಳಲ್ಲಿ ಟ್ರಂಪ್‌ ಪ್ರಮಾಣ ವೀಕ್ಷಕರ ಸಂಖ್ಯೆ ಅತಿ ಕಡಿಮೆ ಎನ್ನಲಾಗಿದೆ.