ಸಾರಾಂಶ
ವಾಷಿಂಗ್ಟನ್: ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಆ.15ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಅಲಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಈ ಮಾತುಕತೆ ವೇಳೆ ಭೂಭಾಗ ಮತ್ತು ಕೈದಿಗಳ ಹಸ್ತಾಂತರ ವಿಚಾರವೂ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.
ಟ್ರಂಪ್ ಭೇಟಿಗಾಗಿ ಪುಟಿನ್ ಅವರು ದಶಕದ ಬಳಿಕ ಅಮೆರಿಕಕ್ಕೆ ತೆರಳುತ್ತಿದ್ದು, ಉಕ್ರೇನ್ ಹೊರಗಿಟ್ಟು ನಡೆಯುತ್ತಿರುವ ಈ ಶಾಂತಿ ಮಾತುಕತೆ ಇದೀಗ ವಿಶ್ವದ ಗಮನಸೆಳೆದಿದೆ. ಅಮೆರಿಕವು ತ್ರಿಪಕ್ಷೀಯ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿತ್ತಾದರೂ ರಷ್ಯಾವು ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಸ್ಕಿ ಹೊರಗಿಟ್ಟರಷ್ಟೇ ಸಭೆಗೆ ಸಿದ್ಧ ಎಂದು ಸಂದೇಶ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಿದ್ಧಪಡಿಸಲಾಗಿದೆ.
ಟ್ರಂಪ್-ಪುಟಿನ್ ಮಾತುಕತೆಗೆ ಭಾರತ ಸ್ವಾಗತ
ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪನೆ ಮಾಡುವ ಉದ್ದೇಶದಿಂದ ಮುಂದಿನ ವಾರ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ನಡೆಯಲಿರುವ ಮಾತುಕತೆಯನ್ನು ಭಾರತ ಸ್ವಾಗತಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ಆ.15ರಂದು ಅಲಾಸ್ಕಾದಲ್ಲಿ ಅಮೆರಿಕ ಮತ್ತು ರಷ್ಯಾ ಒಕ್ಕೂಟದ ನಡುವೆ ನಡೆಯಲಿರುವ ಮಾತುಕತೆಯನ್ನು ಭಾರತ ಸ್ವಾಗತಿಸುತ್ತದೆ. ಈ ಚರ್ಚೆಯು, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಭರವಸೆಯಿದೆ. ಪ್ರಧಾನಿ ಮೋದಿಯವರು ಹಲವಾರು ಬಾರಿ ಹೇಳಿದಂತೆ, ಇದು ಯುದ್ಧದ ಯುಗವಲ್ಲ. ಹಾಗಾಗಿ, ಭಾರತವು ಮುಂಬರುವ ಸಭೆಯನ್ನು ಅನುಮೋದಿಸುತ್ತದೆ ಮತ್ತು ಈ ಪ್ರಯತ್ನಗಳಿಗೆ ಬೆಂಬಲವಾಗಿ ನಿಲ್ಲುತ್ತದೆ’ ಎಂದಿದ್ದಾರೆ.