ಸಾರಾಂಶ
ನ್ಯೂಯಾರ್ಕ್ : ಅಮೆರಿಕಕ್ಕೆ ಆಮದಾಗುವ ಔಷಧಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕದ ಹೊರಗೆ ನಿರ್ಮಾಣವಾಗುವ ಎಲ್ಲ ಚಲನಚಿತ್ರಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮಗುವೊಂದರಿಂದ ಕ್ಯಾಂಡಿಯನ್ನು ಕಸಿದುಕೊಳ್ಳುವಂತೆಯೇ, ನಮ್ಮ ಚಲನಚಿತ್ರ ಉದ್ಯಮವನ್ನು ಇತರ ರಾಷ್ಟ್ರಗಳು ಕಸಿದುಕೊಂಡಿವೆ. ಈ ದೀರ್ಘಕಾಲದ, ಎಂದಿಗೂ ಮುಗಿಯದ ಸಮಸ್ಯೆಯನ್ನು ಪರಿಹರಿಸಲು, ಅಮೆರಿಕದ ಹೊರಗೆ ತಯಾರಾಗುವ ಎಲ್ಲಾ ಚಲನಚಿತ್ರಗಳ ಮೇಲೆ ನಾನು ಶೇ.100ರಷ್ಟು ಸುಂಕವನ್ನು ವಿಧಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
ಈ ಪ್ರಕ್ರಿಯೆಯನ್ನು ಆರಂಭಿಸುವಂತೆ ಮೇ ತಿಂಗಳಲ್ಲೇ ಟ್ರಂಪ್ ವಾಣಿಜ್ಯ ಇಲಾಖೆಗೆ ಸೂಚಿಸಿದ್ದರು. ಇದನ್ನೀಗ ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ ಎಂದಿನಿಂದ ಇದು ಜಾರಿಯಾಗಲಿದೆ ಎಂಬುದನ್ನು ತಿಳಿಸಿಲ್ಲ.
ಹಾಲಿವುಡ್ ಅಮೆರಿಕ ಆರ್ಥಿಕತೆಯ ಪ್ರಮುಖ ಮೂಲವಾಗಿದ್ದು, 2022ರಲ್ಲಿ 23 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಮತ್ತು 25 ಲಕ್ಷ ಕೋಟಿ ರು. ಮಾರಾಟವನ್ನು ಸೃಷ್ಟಿಸಿದೆ. ಹಾಲಿವುಡ್ ಪ್ರತಿಭಟನೆಗಳು ಮತ್ತು ಕೋವಿಡ್ ಕಾರಣದಿಂದ ಚಿತ್ರೋದ್ಯಮ ಕುಸಿದಿದೆ. ಅದನ್ನೀಗ ಸರಿಪಡಿಸಲು ಟ್ರಂಪ್ ಮುಂದಾಗಿದ್ಧಾರೆ. ಬಹುಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ ಭಾರತೀಯ ಚಿತ್ರರಂಗಕ್ಕೆ ಟ್ರಂಪ್ ನೀತಿಯಿಂದ ಹೊಡೆತ ಬೀಳುವ ಸಾಧ್ಯತೆಯಿದೆ.

;Resize=(128,128))
;Resize=(128,128))
;Resize=(128,128))
;Resize=(128,128))