- ಇರಾನ್ ಕೃತ್ಯದ ಬಗ್ಗೆ ಪೋಪ್‌ಗೆ ಹೇಳಿ: ಟ್ರಂಪ್‌

- ಜಗತ್ತಿಗೆ ಬೇಕಿದೆ ಶಾಂತಿ: ಪೋಪ್‌ ತಿರುಗೇಟು

----

- ಕ್ರೈಸ್ತರ ಧರ್ಮಗುರುವಿನ ವಿರುದ್ಧ ಮಾತಿನ ಯುದ್ಧ ಮುಂದುವರಿಸಿದ ಟ್ರಂಪ್‌

- ಇರಾನ್‌ 42000 ಜನರ ಹತ್ಯೆಗೈದಿದೆ ಎಂದು ಯಾರಾದ್ರು ಪೋಪ್‌ಗೆ ಹೇಳಿ


- ಶಾಂತಿ ಬೇಕೆಂದು ತಮ್ಮನ್ನು ಟೀಕಿಸಿದ್ದ ಪೋಪ್‌ಗೆ ಡೊನಾಲ್ಡ್‌ ಟ್ರಂಪ್‌ ತಿವಿತ

- ಶಾಂತಿ ಮಂತ್ರ ಜಪಿಸಿ ಟ್ರಂಪ್‌ ಏಟಿಗೆ ಪುನಃ ಎದಿರೇಟು ನೀಡಿದ ಪೋಪ್‌

- ನಂಬಿಕೆ, ಪೂಜಾ ವಿಧಾನ ಭಿನ್ನವಿದ್ದರೂ ಒಟ್ಟಾಗಿ ಬಾಳಬಹುದು: ಕ್ರೈಸ್ತ ಗುರು

==

ವಾಷಿಂಗ್ಟನ್‌: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಲಿಯೋ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಇರಾನ್‌ 42000 ಅಮಾಯಕ ಇರಾನಿಯರನ್ನು ಹತ್ಯೆಗೈದಿದೆ ಎಂದು ಯಾರಾದರೂ ಪೋಪ್‌ಗೆ ತಿಳಿಸಿ’ ಎಂದು ಕಿಡಿಕಾರಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪೋಪ್‌, ‘ಜಗತ್ತಿಗೆ ಇಂದು ಬೇಕಾಗಿರುವುದು ಶಾಂತಿ ಮತ್ತು ಮಾತುಕತೆ’ ಎಂದಿದ್ದಾರೆ.

ಇರಾನ್‌ ಮೇಲಿನ ಅಮೆರಿಕ ದಾಳಿಯನ್ನು ಪೋಪ್‌ ಖಂಡಿಸಿದ ಕುರಿತು ಇತ್ತೀಚೆಗೆ ಟ್ರಂಪ್‌ ಮತ್ತು ಪೋಪ್‌ ನಡುವೆ ವಾಕ್ಸಮರ ನಡೆದು ಬಳಿಕ ತಣ್ಣಗಾಗಿತ್ತು. ಅದರ ಬೆನ್ನಲ್ಲೇ ಟ್ರುತ್‌ ಸೋಷಿಯಲ್‌ನಲ್ಲಿ ಮತ್ತೆ ಪೋಸ್ಟ್‌ ಮಾಡಿರುವ ಟ್ರಂಪ್‌, ‘ಕಳೆದ 2 ತಿಂಗಳ ಅವಧಿಯಲ್ಲಿ ಯಾವುದೇ ಶಸ್ತ್ರಾಸ್ತ್ರ ಹೊಂದಿರದ, 42000 ಅಮಾಯಕ ಪ್ರತಿಭಟನಾಕಾರರನ್ನು ಇರಾನ್‌ ಹತ್ಯೆಗೈದಿದೆ ಎಂದು ದಯವಿಟ್ಟು ಯಾರಾದರೂ ಪೋಪ್‌ ಲಿಯೋ ಅವರಿಗೆ ತಿಳಿಸಬಲ್ಲಿರಾ? ಇಂಥ ಇರಾನ್‌ ಬಳಿ ಪರಮಾಣು ಬಾಂಬ್‌ ಹೊಂದುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಈ ವಿಷಯವನ್ನು ಗಮನಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಅಮೆರಿಕ ಈಸ್‌ ಬ್ಯಾಕ್‌’ ಎಂದು ಟ್ರಂಪ್‌ ಬರೆದುಕೊಂಡಿದ್ದಾರೆ.

ಜಗತ್ತಿಗೆ ಬೇಕಿರೋದು ಶಾಂತಿ- ಪೋಪ್‌ ತಿರುಗೇಟು:

ಯುದ್ಧ ನಿಲ್ಲಿಸುವಂತೆ ಬುದ್ಧಿವಾದ ಹೇಳಿದ ಕಾರಣಕ್ಕೆ ತಮ್ಮ ವಿರುದ್ಧ ವಾಕ್ಸಮರ ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮತ್ತೆ ಪರೋಕ್ಷವಾಗಿ ಉಪದೇಶ ಮಾಡಿರುವ ಕ್ರೈಸ್ತರ ಧರ್ಮಗುರು ಪೋಪ್‌ ಲಿಯೋ 14, ‘ಜಗತ್ತಿಗೆ ಇಂದು ಬೇಕಾಗಿರುವುದು ಶಾಂತಿ ಮತ್ತು ಮಾತುಕತೆ’ ಎಂದು ಹೇಳಿದ್ದಾರೆ.

ಕ್ಯಾಮರೂನ್‌ ಪ್ರವಾಸದಲ್ಲಿರುವ ಪೋಪ್‌ ವಿಮಾನದಲ್ಲಿ ಮಾತನಾಡುತ್ತಾ ಸಂತ ಆಗಸ್ಟೀನ್‌ನ ಪ್ರವಚನಗಳನ್ನು ಉಲ್ಲೇಖಿಸುತ್ತಾ, ‘ದೇವರನ್ನು ಮತ್ತು ಸತ್ಯವನ್ನು ಹುಡುಕುವು ಬಗ್ಗೆ ಅವರು ನೀಡಿರುವ ಮಾರ್ಗದರ್ಶನವು ಇಂದು ಎಲ್ಲಾ ಜನರಿಗೆ ಅಗತ್ಯವಾಗಿದೆ. ವ್ಯತ್ಯಾಸದ ಹೊರತಾಗಿಯೂ ಎಲ್ಲರನ್ನು ಗೌರವಿಸುವುದು ಮತ್ತು ಒಗ್ಗಟ್ಟಿನಿಂದಿರುವ ಬಗೆಗಿನ ಅವರ ಬೋಧನೆಯ ದೃಷ್ಟಿಕೋನವನ್ನು ಜಗತ್ತಿಗೆ ನೀಡಲು ಬಯಸಿದ್ದೇನೆ’ ಎಂದು ಹೇಳಿದರು. ಜತೆಗೆ ಅಲ್ಜೀರಿಯಾದ ಮಸೀದಿಯೊಂದಕ್ಕೆ ತಾವು ಭೇಟಿ ನೀಡಿದ್ದನ್ನು ಸ್ಮರಿಸುತ್ತಾ, ‘ಅಲ್ಜೀರಿಯಾದಲ್ಲಿದ್ದ ಬಹುತೇಕರು ಮುಸಲ್ಮಾನರಾಗಿದ್ದ ಹೊರತಾಗಿಯೂ ಆಗಸ್ಟಿನ್‌ರನ್ನು ಗೌರವಿಸುತ್ತಿದ್ದರು. ಈ ಮೂಲಕ ಕ್ರೈಸ್ತರು ಮತ್ತು ಮುಸಲ್ಮಾನರ ನಡುವೆ ಮಾತುಕತೆಗೆ ಮಾರ್ಗ ತೆರೆದುಕೊಂಡಿತು. ನಮ್ಮ ನಂಬಿಕೆ, ಪೂಜಾ ವಿಧಾನಗಳು ಭಿನ್ನವಾಗಿದ್ದರೂ ಒಟ್ಟಿಗೆ ಬಾಳುವುದು ಹೇಗೆ ಎಂಬುದನ್ನು ನನ್ನ ಮಸೀದಿ ಭೇಟಿ ತೋರಿಸುತ್ತದೆ. ಇಂದು ಜಗತ್ತಿಗೂ ಇದೇ ಬೇಕಾಗಿದೆ’ ಎಂದು ಹೇಳಿದರು.

ಈ ಮೂಲಕ, ‘ರಾಜಕೀಯದ ಬಗ್ಗೆ ಮಾತನಾಡುವುದನ್ನು ಬಿಟ್ಟು ಧರ್ಮದ ಮೇಲೆ ಗಮನ ಹರಿಸಿ’ ಎಂದಿದ್ದ ಟ್ರಂಪ್‌ಗೆ ಪೋಪ್‌ ಧಾರ್ಮಿಕ ಭಾಷೆಯಲ್ಲೇ ತಿರುಗೇಟು ನೀಡಿದ್ದಾರೆ.