ಇರಾನ್ ಜತೆಗಿನ ಎರಡನೇ ಸುತ್ತಿನ ಮಾತುಕತೆ ವೇಳೆ ಒಪ್ಪಂದವೇನಾದರೂ ಏರ್ಪಡುವುದು ಖಚಿತವಾದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖುದ್ದು ಪಾಕಿಸ್ತಾನಕ್ಕೆ ತೆರಳುವ ಅಥವಾ ವರ್ಚುಯಲ್ ಆಗಿ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ವಾಷಿಂಗ್ಟನ್: ಇರಾನ್ ಜತೆಗಿನ ಎರಡನೇ ಸುತ್ತಿನ ಮಾತುಕತೆ ವೇಳೆ ಒಪ್ಪಂದವೇನಾದರೂ ಏರ್ಪಡುವುದು ಖಚಿತವಾದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖುದ್ದು ಪಾಕಿಸ್ತಾನಕ್ಕೆ ತೆರಳುವ ಅಥವಾ ವರ್ಚುಯಲ್ ಆಗಿ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಮೊದಲ ಸುತ್ತಿನ ಮಾತುಕತೆ ಒಪ್ಪಂದವಿಲ್ಲದೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇದೀಗ ಬುಧವಾರ ಎರಡನೇ ಹಂತದ ಮಾತುಕತೆಗೆ ಇಸ್ಲಾಮಾಬಾದ್‌ನಲ್ಲಿ ಸಿದ್ಧತೆ ಪೂರ್ಣಗೊಂಡಿದೆ.
ಅಲ್ಲದೆ, ಮೊದಲ ಸುತ್ತಿನ ಮಾತುಕತೆ ಭಾಗವಾಗಿ ಘೋಷಿಸಲಾಗಿದ್ದ 2 ವಾರಗಳ ಕದನ ವಿರಾಮ ಬುಧವಾರವೇ ಅಂತ್ಯಗೊಳ್ಳಲಿದೆ. ಕದನ ವಿರಾಮವನ್ನು ಮತ್ತಷ್ಟು ದಿನ ಮುಂದುವರಿಸುವುದಿಲ್ಲ ಎಂಬ ಅರ್ಥದಲ್ಲಿ ಸೋಮವಾರ ಮಾತನಾಡಿದ್ದ ಟ್ರಂಪ್, ‘ಕದನವಿರಾಮ ಅಂತ್ಯದ ಬಳಿಕ ಇರಾನ್ ಮೇಲೆ ಬಾಂಬ್ ಮಳೆ ಸುರಿಯಲಿದೆ’ ಎಂದಿದ್ದರು. ಈ ಹಿನ್ನೆಲೆಯಲ್ಲಿ ಎರಡನೇ ಸುತ್ತಿನ ಮಾತುಕತೆ ಜರುಗುವುದೆ ಎಂಬ ಕುತೂಹಲ ಮೂಡಿದೆ.
+++
ಇರಾನ್‌ನ ಹಡಗೊಂದನ್ನು ವಶಕ್ಕೆ ಪಡೆದುಕೊಂಡ ಹೊರತಾಗಿಯೂ ಎರಡನೇ ಸುತ್ತಿನ ಮಾತುಕತೆಯಲ್ಲಿ ಇರಾನ್ ಪಾಲ್ಗೊಳ್ಳಲಿದೆ ಎಂಬ ವಿಶ್ವಾಸವನ್ನು ಅಮೆರಿಕ ವ್ಯಕ್ತಪಡಿಸಿದೆ. ಆದರೆ ಇರಾನ್ ಮಾತ್ರ ಮಾತುಕತೆಯಲ್ಲಿ ಪಾಲ್ಗೊಳ್ಳುವುದನ್ನು ಈವರೆಗೆ ಖಚಿತಪಡಿಸಿಲ್ಲ. ಆದರೆ, ಪಾಕಿಸ್ತಾನ ಮಾತ್ರ ಮಾತುಕತೆಯಲ್ಲಿ ಎರಡೂ ದೇಶಗಳು ಪಾಲ್ಗೊಳ್ಳುವ ಕುರಿತು ವಿಶ್ವಾಸ ವ್ಯಕ್ತಪಡಿಸಿದೆ.

