ಕೈರೋ: ಇರಾನ್-ಅಮೆರಿಕ ಕದನವಿರಾಮದ ಬೆನ್ನಲ್ಲೇ ಇದೀಗ ಇಸ್ರೇಲ್ ಮತ್ತು ಲೆಬನಾನ್ ನಡುವೆಯೂ 10 ದಿನಗಳ ಕದನವಿರಾಮ ಏರ್ಪಟ್ಟಿದ್ದು, ಇದು ಶುಕ್ರವಾರ (ಭಾರತೀಯ ಕಾಲಮಾನ )ಬೆಳಗಿನಜಾವ 2:30ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಲೆಬನಾನ್ ಮತ್ತು ಇಸ್ರೇಲ್‌ನ ನಾಯಕರು ವಾಷಿಂಗ್ಟನ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅತ್ತ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜತೆ ತಾವು ಉತ್ತಮ ಮಾತುಕತೆ ನಡೆಸಿದ್ದಾಗಿ ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
==ಹೋರ್ಮುಜ್‌ಗೆ 10000 ಯೋಧರು, 16 ನೌಕೆಗಳ ದಿಗ್ಬಂಧನ: ಅಮೆರಿಕ
ಇನ್ನಾದರೂ ಇರಾನ್ ಡೀಲ್ ಮಾಡಿಕೊಳ್ಳಲಿ: ಹೆಗ್ಸೆತ್
ವಾಷಿಂಗ್ಟನ್: ಸದ್ಯ ಹೋರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿರುವ ಅಮೆರಿಕ ಸೇನೆಯು, ಇದಕ್ಕಾಗಿ ದೇಶದ ನೌಕಾಪಡೆಯ ಶೇ.10ರಷ್ಟು ಶಕ್ತಿಯನ್ನು ಬಳಸಿದೆ ಎಂದು ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಹೇಳಿದ್ದಾರೆ.ನಿಯೋಜನೆಯಾಗಿರುವ ಶಕ್ತಿಯ ಬಗ್ಗೆ ಮಾಹಿತಿ ನೀಡಿರುವ ಹೆಗ್ಸೆತ್, ‘ಅಮೆರಿಕದ 10 ಸಾವಿರಕ್ಕೂ ಹೆಚ್ಚು ಯೋಧರು ಆ ಜಲಸಂಧಿಯನ್ನು ಕಾಯುತ್ತಿದ್ದಾರೆ. 11 ವಿಧ್ವಂಸಕ ನೌಕೆ, 3 ದಾಳಿ ಹಡಗು ಮತ್ತು ಒಂದು ಯುದ್ಧವಿಮಾನ ವಾಹಕ ನೌಕೆ ಹಾಗೂ ಒಂದು ಯುದ್ಧನೌಕೆಯನ್ನು ನಿಯೋಜನೆ ಮಾಡಲಾಗಿದೆ’ ಎಂದರು. ಈ ಬಲಪ್ರದರ್ಶನದ ಬೆನ್ನಲ್ಲೇ, ‘ಅಂತಿಮವಾಗಿ ಇರಾನಿಗಳು ಒಪ್ಪಂದ ಮಾಡಿಕೊಳ್ಳಲು ಬರಲೇಬೇಕು’ ಎಂದು ಹೆಗ್ಸೆತ್ ಹೇಳಿದ್ದಾರೆ.
==ಟ್ರಂಪ್ ಸಂದೇಶ ಹೊತ್ತು ಜ। ಮುನೀರ್ ಇರಾನ್‌ಗೆ
ಟೆಹ್ರಾನ್: ತಮ್ಮ ನೆಲದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಸಂಧಾನ ಮಾತುಕತೆ ಫಲಪ್ರದವಾಗದ ಬೆನ್ನಲ್ಲೇ ಮರಳಿ ಯತ್ನವ ಮಾಡುವ ಸಲುವಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ। ಅಸೀಂ ಮುನೀರ್ ಇರಾನ್‌ಗೆ ತೆರಳಿದ್ದು, ಗುರುವಾರ ಅಲ್ಲಿನ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಇವರೊಂದಿಗೆ ಆಂತರಿಕ ಸಚಿವ ಮೊಹ್ಸೀನ್ ನಖ್ವಿ ಕೂಡ ಹೋಗಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಇನ್ನೊಂದು ಸುತ್ತಿನ ಮಾತುಕತೆಯು ಇಸ್ಲಾಮಾಬಾದ್‌ನಲ್ಲಿ ನಡೆಸಲು ನಿರ್ಧರಿಸಲಾಗಿರುವ ಹೊತ್ತಿನಲ್ಲಿ ಅದರ ಪೂರ್ವತಯಾರಿಯಾಗಿ ಟ್ರಂಪ್‌ರ ಸಂದೇಶವನ್ನು ಹೊತ್ತು ಮುನೀರ್ ಈ ಪ್ರಯಾಣ ಬೆಳೆಸಿದ್ದಾರೆ. ಈ ಭೇಟಿಯ ಬಳಿಕ ಮುನೀರ್, ಇರಾನ್ ಸಂದೇಶ ಹೊತ್ತು ಅಮೆರಿಕಕ್ಕೆ ತೆರಳುವ ಸಾಧ್ಯತೆ ಇದೆ. ಇತ್ತ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿದೇಶಾಂಗ ಸಚಿವ ಇಶಾಕ್ ದರ್ ಜತೆ ಸೌದಿ ಅರೇಬಿಯಾಗೆ ತೆರಳಿದ್ದು, ಯುವರಾಜ ಭೇಟಿಯಾಗಿ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ತಾವು ಪಡುತ್ತಿರುವ ಶ್ರಮವನ್ನು ಬಣ್ಣಿಸಿದ್ದಾರೆ.