‘ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಅಮೆರಿಕದಲ್ಲೇ ತಯಾರಿಸದಿದ್ದರೆ, ಅದರ ಉತ್ಪಾದನಾ ಕಂಪನಿಯಾದ ಆ್ಯಪಲ್‌ ಶೇ.25 ಸುಂಕ ಪಾವತಿಸಬೇಕಾಗುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ವಾಷಿಂಗ್ಟನ್‌: ‘ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಅಮೆರಿಕದಲ್ಲೇ ತಯಾರಿಸದಿದ್ದರೆ, ಅದರ ಉತ್ಪಾದನಾ ಕಂಪನಿಯಾದ ಆ್ಯಪಲ್‌ ಶೇ.25 ಸುಂಕ ಪಾವತಿಸಬೇಕಾಗುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ. ಇದಲ್ಲದೆ, ‘ಯುರೋಪ್‌ ಒಕ್ಕೂಟವು ವ್ಯಾಪಾರ ಒಪ್ಪಂದಕ್ಕೆ ಸಿದ್ಧವಾಗುತ್ತಿಲ್ಲ. ಹೀಗಾಗಿ ಜೂ.1ರಿಂದ ಇ.ಯು. ವಸ್ತುಗಳಿಗೂ ಅಮೆರಿಕದಲ್ಲಿ ಶೇ.50ರಷ್ಟು ತೆರಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಐಫೋನ್‌ಗಳು ಭಾರತ-ಚೀನಾದಲ್ಲಿ ಹೆಚ್ಚು ಉತ್ಪಾದನೆ ಆಗುತ್ತವೆ. ಹೀಗಾಗಿ ಇತ್ತೀಚೆಗೆ ಟ್ರಂಪ್‌ ಅವರು ಭಾರತದ ಬದಲು ಅಮೆರಿಕದಲ್ಲೇ ಹೆಚ್ಚು ಐಫೋನ್‌ ಉತ್ಪಾದಿಸಿ ಎಂದು ಆ್ಯಪಲ್‌ಗೆ ಕರೆ ನೀಡಿದ್ದರು. ಇದಕ್ಕೂ ಮುನ್ನ ಇ.ಯು. ವಿರುದ್ಧ ಸಾರಿದ್ದ ತೆರಿಗೆ ಕದನಕ್ಕೆ ವಿರಾಮ ಹಾಕಿ ಇತರ ದೇಶಗಳ ರೀತಿ 90 ದಿನಗಳ ತಡೆ ನೀಡಿದ್ದರು.

ಮತ್ತೆ ತೆರಿಗೆ ಕದನ:

ಈಗ ಮತ್ತೆ ತೆರಿಗೆ ಕದನ ಆರಂಭಿಸಿರುವ ಟ್ರಂಪ್‌ ಈ ಬಗ್ಗೆ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿ, ‘ನಾನು ಆ್ಯಪಲ್‌ನ ಟಿಮ್ ಕುಕ್ ಅವರಿಗೆ ಬಹಳ ಹಿಂದೆಯೇ ತಿಳಿಸಿದ್ದೇನೆ, ಅಮೆರಿಕದಲ್ಲಿ ಮಾರಾಟವಾಗುವ ಅವರ ಐಫೋನ್‌ಗಳನ್ನು ಭಾರತ ಅಥವಾ ಬೇರೆಲ್ಲಿಯೂ ಅಲ್ಲ, ಅಮೆರಿಕದಲ್ಲಿಯೇ ಉತ್ಪಾದಿಸಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ಹಾಗಾಗದಿದ್ದರೆ, ಆ್ಯಪಲ್ ಅಮೆರಿಕಕ್ಕೆ ಕನಿಷ್ಠ ಶೇ.25 ಸುಂಕ ಪಾವತಿಸಬೇಕು. ಧನ್ಯವಾದ’ ಎಂದು ಹೇಳಿದ್ದಾರೆ.

ಆದಾಗ್ಯೂ, ಟ್ರಂಪ್ ನಿಜವಾಗಿಯೂ ಒಂದು ನಿರ್ದಿಷ್ಟ ಕಂಪನಿಯ ಮೇಲೆ ಸುಂಕ ವಿಧಿಸುವ ಕಾನೂನುಬದ್ಧ ಅಧಿಕಾರವನ್ನು ಹೊಂದಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟ್ರಂಪ್ ಅವರ ಈಗಿನ ಎಚ್ಚರಿಕೆ ಬಗ್ಗೆ ಆ್ಯಪಲ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಷೇರು ಕುಸಿತ:

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಅಮೆರಿಕದ ಡೌ ಜೋನ್ಸ್‌ ಷೇರುಪೇಟೆ 1.5% ಹಾಗೂ ನಾಸ್ಡಾಕ್‌ 1.7% ಅಂಕಗಳಷ್ಟು ಕುಸಿದಿವೆ. ಕಚ್ಚಾತೈಲ ಬೆಲೆ ಕೂಡ ಏರಿದೆ. ಇನ್ನು ಆ್ಯಪಲ್ ಷೇರುಗಳು ಪ್ರಿಮಾರ್ಕೆಟ್ ವಹಿವಾಟಿನಲ್ಲಿ ಶೇ.2.5 ರಷ್ಟು ಕುಸಿದಿವೆ.