ಗಡೀಪಾರು ಮಾಡಲಾದ ಸಿಖ್‌ ವಲಸಿಗರ ಪಗಡಿ ಕಸದ ಬುಟ್ಟಿಗೆ ಎಸೆದು ಅಮೆರಿಕ ಸೇನೆ ದುರ್ವರ್ತನೆ

| N/A | Published : Feb 18 2025, 12:30 AM IST / Updated: Feb 18 2025, 04:44 AM IST

ಸಾರಾಂಶ

ಅಮೆರಿಕದಿಂದ ಭಾರತದಕ್ಕೆ 3 ಹಂತಗಳಲ್ಲಿ ಗಡೀಪಾರು ಮಾಡಲಾದ ಅಕ್ರಮ ವಲಸಿಗರ ಕೈಗೆ ಕೋಳ ತೊಡಿಸಿ, ಕಾಲಿಗೆ ಸರಪಳಿ ಬಿಗಿದು ಅಮಾನವೀಯವಾಗಿ ನಡೆಸಿಕೊಂಡ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆಯೇ, ಸಿಖ್ಖರಿಗೆ ಅವರ ಧಾರ್ಮಿಕ ಆಚರಣೆಯ ಭಾಗವಾದ ಪಗಡಿ (ಟರ್ಬನ್‌) ಧರಿಸಲು ಅಲ್ಲಿನ ಸೇನೆ ಬಿಡಲಿಲ್ಲ 

ಅಮೃತಸರ: ಅಮೆರಿಕದಿಂದ ಭಾರತದಕ್ಕೆ 3 ಹಂತಗಳಲ್ಲಿ ಗಡೀಪಾರು ಮಾಡಲಾದ ಅಕ್ರಮ ವಲಸಿಗರ ಕೈಗೆ ಕೋಳ ತೊಡಿಸಿ, ಕಾಲಿಗೆ ಸರಪಳಿ ಬಿಗಿದು ಅಮಾನವೀಯವಾಗಿ ನಡೆಸಿಕೊಂಡ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆಯೇ, ಸಿಖ್ಖರಿಗೆ ಅವರ ಧಾರ್ಮಿಕ ಆಚರಣೆಯ ಭಾಗವಾದ ಪಗಡಿ (ಟರ್ಬನ್‌) ಧರಿಸಲು ಅಲ್ಲಿನ ಸೇನೆ ಬಿಡಲಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಈ ಕುರಿತು ಭಾನುವಾರ ಅಮೆರಿಕದ ಸೇನಾ ವಿಮಾನದಲ್ಲಿ ಅಮೃತಸರಕ್ಕೆ ಆಗಮಿಸಿದ 112 ವಲಸಿಗರ ಪೈಕಿ ಇದ್ದವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜತಿಂದರ್‌ ಸಿಂಗ್‌(23) ಎಂಬುವರು ಅಮೆರಿಕದಲ್ಲಿ ಬಂಧಿತರಾದಾಗ ಅನುಭವಿಸಿದ

ಬವಣೆಗಳನ್ನು ಬಿಚ್ಚಿಟ್ಟಿದ್ದಾರೆ. ‘ಉದ್ಯೋಗಕ್ಕಾಗಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ ನನ್ನನ್ನು ಕಳೆದ ನ.27ರಂದು ಬಂಧಿಸಲಾಯಿತು. ಈ ವೇಳೆ ನನ್ನ ವಿರೋಧದ ನಡುವೆಯೂ ಪಗಡಿ ತೆಗೆಸಿ ಅದನ್ನು ಕಸದಬುಟ್ಟಿಗೆ ಎಸೆದರು. ಜೊತೆಗೆ, ಆಗಾಗ ಎಸಿ ಹಾಗೂ ಹೀಟರ್‌ ತಾಪಮಾನ ಬದಲಿಸುತ್ತಾ ವಿಪರೀತ ಚಳಿ ಹಾಗೂ ಬಿಸಿಗಾಳಿಗೆ ಒಡ್ಡುವಂತೆ ಮಾಡಿದರು. ದಿನಕ್ಕೆರಡು ಬಾರಿ ಚಿಪ್ಸ್‌ ಹಾಗೂ ಜ್ಯೂಸ್‌ ಅಷ್ಟೇ ಕೊಡುತ್ತಿದ್ದರು. ನಮಗೆ ತೊಡಿಸಲಾಗಿದ್ದ ಕೋಳವನ್ನು ವಿಮಾನ ಭಾರತದಲ್ಲಿಳಿಯುವ 10 ನಿಮಿಷಗಳ ಮೊದಲಷ್ಟೇ ಬಿಚ್ಚಲಾಯಿತು’ ಎಂದು ಸಿಂಗ್‌ ಹೇಳಿದ್ದಾರೆ.

ಇನ್ನೊಬ್ಬ ವಲಸಿಗ ಜಸ್ವಿಂದರ್‌ ಸಿಂಗ್‌(21) ಮಾತನಾಡಿ, ‘ಬಂಧನ ಕೇಂದ್ರದಲ್ಲಿ ಪಗಡಿ ಸೇರಿ ನನ್ನೆಲ್ಲಾ ಬಟ್ಟೆ ಬಿಚ್ಚಿಸಿದರು. ಕಾರಣ ಕೇಳಿದರೆ, ಅದನ್ನು ಬಳಸಿ ನೇಣು ಬಿಗಿದುಕೊಂಡರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಅಮೃತಸರ ತಲುಪಿದ ಬಳಿಕವಷ್ಟೇ ಅವುಗಳನ್ನೆಲ್ಲಾ ಮರಳಿಸಿದರು’ ಎಂದರು.