ಭಾರತದ ಭೂ ಭಾಗ ಬಾಂಗ್ಲಾಕ್ಕೆ ಸೇರಿಸಿ ಟರ್ಕಿ ಹೊಸ ಕಿರಿಕ್‌

| N/A | Published : May 19 2025, 12:07 AM IST / Updated: May 19 2025, 04:30 AM IST

ಭಾರತದ ಭೂ ಭಾಗ ಬಾಂಗ್ಲಾಕ್ಕೆ ಸೇರಿಸಿ ಟರ್ಕಿ ಹೊಸ ಕಿರಿಕ್‌
Share this Article
  • FB
  • TW
  • Linkdin
  • Email

ಸಾರಾಂಶ

 ಟರ್ಕಿ ಇದೀಗ, ಬಾಂಗ್ಲಾದೇಶದಲ್ಲೂ ಹೊಸ ಭಾರತ ವಿರೋಧಿ ಆಟ ಆಡಲು ಮುಂದಾಗಿದೆ. ಟರ್ಕಿ ಬೆಂಬಲಿತ ಇಸ್ಲಾಂ ಮೂಲಭೂತವಾದಿಗಳ ಎನ್‌ಜಿಒವೊಂದು ಭಾರತದ ಈಶಾನ್ಯ ಮತ್ತು ಪೂರ್ವದ ಹಲವು ರಾಜ್ಯಗಳನ್ನು ಸೇರಿಸಿ ಗ್ರೇಟರ್‌ ಬಾಂಗ್ಲಾದೇಶ್‌ ಪರಿಕಲ್ಪನೆ ಹುಟ್ಟುಹಾಕಿದೆ.

 ನವದೆಹಲಿ: ಭಾರತದ ಜತೆಗಿನ ಯುದ್ಧದ ವೇಳೆ ತನ್ನ ಯೋಧರನ್ನು ಕಳುಹಿಸಿ ಪಾಕಿಸ್ತಾನದ ಬೆನ್ನಿಗೆ ನಿಂತಿದ್ದ ಟರ್ಕಿ ಇದೀಗ, ಬಾಂಗ್ಲಾದೇಶದಲ್ಲೂ ಹೊಸ ಭಾರತ ವಿರೋಧಿ ಆಟ ಆಡಲು ಮುಂದಾಗಿದೆ. ಟರ್ಕಿ ಬೆಂಬಲಿತ ಇಸ್ಲಾಂ ಮೂಲಭೂತವಾದಿಗಳ ಎನ್‌ಜಿಒವೊಂದು ಭಾರತದ ಈಶಾನ್ಯ ಮತ್ತು ಪೂರ್ವದ ಹಲವು ರಾಜ್ಯಗಳನ್ನು ಸೇರಿಸಿ ಗ್ರೇಟರ್‌ ಬಾಂಗ್ಲಾದೇಶ್‌ ಪರಿಕಲ್ಪನೆ ಹುಟ್ಟುಹಾಕಿದೆ. ಈ ಕುರಿತು ಗ್ರೇಟರ್‌ ಬಾಂಗ್ಲಾದೇಶ್‌ ಮ್ಯಾಪ್‌ ಅನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಿದೆ.

ಸಲ್ತನತ್‌ -ಎ- ಬಾಂಗ್ಲಾ (ಬಾಂಗ್ಲಾ ಸಾಮ್ರಾಜ್ಯ) ಹೆಸರಿನ ಎನ್‌ಜಿಒವೊಂದು ಈ ವಿವಾದಾತ್ಮಕ ಮ್ಯಾಪ್‌ ಅನ್ನು ಬಿಡುಗಡೆ ಮಾಡಿದ್ದು, ಮ್ಯಾನ್ಮಾರ್‌ನ ಆರಕ್ಕನ್‌ ರಾಜ್ಯ, ಬಿಹಾರ, ಜಾರ್ಖಂಡ್‌, ಒಡಿಶಾ ಮತ್ತು ಭಾರತದ ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಗ್ರೇಟರ್‌ ಬಾಂಗ್ಲಾದೇಶ್‌ ಮ್ಯಾಪ್‌ನಲ್ಲಿ ತೋರಿಸಿದೆ. ಢಾಕಾದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ ಹಾಲ್‌ಗಳಲ್ಲಿ ಈ ಮ್ಯಾಪ್‌ ಅನ್ನು ಹಾಕಲಾಗಿದೆ.

ಪಾಕಿಸ್ತಾನದ ರೀತಿಯಲ್ಲಿ ಇದೀಗ ಬಾಂಗ್ಲಾದೇಶದ ಮೇಲೂ ಟರ್ಕಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ ಬಾಂಗ್ಲಾದೇಶದ ಸೇನೆಗೆ ಟರ್ಕಿಯಿಂದ ಶಾಸ್ತ್ರಾಸ್ತ್ರಗಳ ಪೂರೈಕೆ ಹೆಚ್ಚಿದೆ. ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಬಳಿಕ ಪಾಕಿಸ್ತಾನವು ಬಾಂಗ್ಲಾ ಮತ್ತು ಟರ್ಕಿಯನ್ನು ಹತ್ತಿರ ತರುವಲ್ಲಿ ಮಹತ್ವದ ಪಾತ್ರವಹಿಸಿದೆ.

ರಕ್ತ ನೀರು ಒಟ್ಟಾಗಿ ಹರಿದರೆ ನನ್ನ ಸಂಪರ್ಕಿಸಿ ಎಂದ ವೈದ್ಯ ಸಸ್ಪೆಂಡ್‌

ರಾಯಪುರ: ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಕ್ರಮದ ಬಗ್ಗೆ ಮಾತನಾಡುವ ವೇಳೆ ‘ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಎಚ್ಚರಿಕೆಯನ್ನು ತಮ್ಮ ವೃತ್ತಿಯ ಪ್ರಚಾರಕ್ಕಾಗಿ ಬಳಸಿದ ವೈದ್ಯರೊಬ್ಬರು ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ.ಛತ್ತೀಸಗಢದ ಶ್ರೀ ಶಂಕರಾಚಾರ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಶಿವೇಂದ್ರ ಸಿಂಗ್ ತಿವಾರಿ ಅಮಾನತುಗೊಂಡ ವೈದ್ಯ. 

ಮೂತ್ರಶಾಸ್ತ್ರಜ್ಞರಾದ ಇವರು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕ್ಲಿನಿಕ್‌ನ ಪ್ರಚಾರದ ಭಾಗವಾಗಿ ‘ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಆದ್ದರಿಂದ ನೀವು ನಿಮ್ಮ ಮೂತ್ರದಲ್ಲಿ ರಕ್ತವನ್ನು ನೋಡಿದರೆ, ತಕ್ಷಣ ಮೂತ್ರಶಾಸ್ತ್ರಜ್ಞರನ್ನು ಸಂಪರ್ಕಿಸಿ. ಇಲ್ಲದಿದ್ದರೆ ಅದು ಗಂಭೀರವಾಗಿರಬಹುದು’ ಎಂದು ಪೋಸ್ಟ್ ಮಾಡಿದ್ದರು. ಅವರ ಜಾಣತನವೇ ಇದೀಗ ಅವರಿಗೆ ಉರುಳಾಗಿ ಪರಿಣಮಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ನಿಮ್ಮ ಜಾಹೀರಾತು ಅನಗತ್ಯವಾಗಿತ್ತು. ಜವಾಬ್ದಾರಿಯುತ ವೈದ್ಯರಾಗಿ ನಿಮ್ಮ ನಡೆ ಅಗೌರವಯುತವಾಗಿದೆ. ನಿಮ್ಮ ಕೃತ್ಯವನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದದ್ದು, 15 ದಿನಗಳವರೆಗೆ ಅಮಾನತುಗೊಳಿಸಲಾಗಿದೆ’ ಎಂದು ಸಂಸ್ಥೆಯ ಡೀನ್ ಆದೇಶಿಸಿದ್ದಾರೆ.

ಇಂದಿನಿಂದ ವಿದೇಶದಲ್ಲಿ ಪಾಕ್‌ ವಿರುದ್ಧ ಸಚಿವ ಜೈಶಂಕರ್‌ ಉಗ್ರ ಸಮರ

ನವದೆಹಲಿ: ಪಾಕಿಸ್ತಾನದ ಉಗ್ರ ಮುಖವಾಡ ಬಯಲಿಗೆ ಭಾರತ ಮೇ 22ರಂದು ಸರ್ವಪಕ್ಷಗಳ ನಿಯೋಗವನ್ನು ವಿದೇಶಕ್ಕೆ ಕಳುಹಿಸಲು ಸಜ್ಜಾಗಿರುವಾಗಲೇ, ಅಂಥದ್ದೇ ದಾಳಿಗೆ ವಿದೇಶಾಂಗ ಸಚಿವ ಜೈಶಂಕರ್‌ ಕೂಡಾ ಸಜ್ಜಾಗಿದ್ದಾರೆ. ಸಚಿವ ಜೈಶಂಕರ್‌ ಅವರು ಮೇ 19ರಿಂದ 24ರವರೆಗೆ 6 ದಿನಗಳು ಜರ್ಮನಿ, ನೆದರ್ಲೆಂಡ್ಸ್‌ ಮತ್ತು ಡೆನ್ಮಾರ್ಟ್‌ಗಳಿಗೆ ತೆರಳಲಿದ್ದಾರೆ. ಅಲ್ಲಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಜೊತೆಗೆ ಪಾಕಿಸ್ತಾನ ನಡೆಸುತ್ತಿರುವ ಗಡಿ ಆಚೆಗಿನ ಭಯೋತ್ಪಾದನೆ ಕುರಿತು ಮಾಹಿತಿ ನೀಡಲಿದ್ದಾರೆ.ಇನ್ನೊಂದೆಡೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮೇ 20ರಂದು ವಿವಿಧ ದೇಶಗಳ ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳಿಗೆ ಪಾಕ್‌ ಉಗ್ರವಾದದ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ।ಖುರೇಶಿ, ವ್ಯೋಮಿಕಾ ಸುದ್ದಿಗೋಷ್ಠಿ ‘ಬೂಟಾಟಿಕೆ’: ಎಂದ ಪ್ರೊಫೆಸರ್‌ ಅರೆಸ್ಟ್‌

ಚಂಡೀಗಢ: ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ನ ಬಗ್ಗೆ ಸರಣಿ ಪತ್ರಿಕಾಗೋಷ್ಠಿ ನಡೆಸಿದ್ದ ಕರ್ನಲ್‌ ಸೋಫಿಯಾ ಖುರೇಶಿ ಮತ್ತು ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಹರ್ಯಾಣದ ಅಶೋಕ ವಿವಿಯ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ. ಬಂಧಿತ ಪ್ರಾಧ್ಯಾಪಕ ಅಲಿ ಖಾನ್‌ ಮಹ್ಮುದಾಬಾದ್‌ ಅವರು ಚಂಡೀಗಢದಲ್ಲಿನ ಅಶೋಕಾ ವಿವಿಯಲ್ಲಿ ರಾಜಕೀಯ ಶಾಸ್ತ್ರದ ಮುಖ್ಯಸ್ಥರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ‘ಪತ್ರಿಕಾಗೋಷ್ಠಿ ಕೇವಲ ಬೂಟಾಟಿಕೆ. ಹೇಳುವುದೆಲ್ಲವೂ ಜಾರಿಯಾಗಬೇಕು’ ಎಂದು ಪೋಸ್ಟ್‌ ಹಾಕಿದ್ದರು. ಇದರ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಹರ್ಯಾಣ ಮಹಿಳಾ ಆಯೋಗ ಸಹ ಅಲಿ ಖಾನ್‌ಗೆ ಸಮನ್ಸ್‌ ನೀಡಿದೆ.

Read more Articles on