ಸಾರಾಂಶ
ನವದೆಹಲಿ: ದೆಹಲಿ ಚುನಾವಣೆಯಲ್ಲಿ 2 ರಾಷ್ಟ್ರೀಯ ಪಕ್ಷಗಳು ನೋಟಾಕ್ಕಿಂತಲೂ ಕಡಿಮೆ ಮತ ಪಡೆದಿದೆ. ಚುನಾವಣೆಯಲ್ಲಿ ನೋಟಾಗೆ ಒಟ್ಟಾರೆಯಾಗಿ ಶೇ.0.57ರಷ್ಟು ಮತಗಳು ಬಂದಿದೆ. ಈ ಪ್ರಮಾಣಕ್ಕೆ ಹೋಲಿಸಿದರೆ ರಾಷ್ಟ್ರೀಯ ಪಕ್ಷಗಳಾದ ಬಿಎಸ್‌ಪಿ ಮತ್ತು ಸಿಪಿಎಂಗೆ ಬಂದಿರುವುದು ನೋಟಾಗಿಂತಲೂ ಕಡಿಮೆ. ಬಹುಜನ ಸಮಾಜ ಪಕ್ಷ ಶೇ.0.55, ಸಿಪಿಎಂ ಕೇವಲ ಶೇ. 0.01 ಮತಗಳನ್ನಷ್ಟೇ ಪಡೆದುಕೊಂಡಿದೆ ಎಂದು ಅಂಕಿ ಅಂಶಗಳು ಹೇಳಿವೆ.
ಈ ಜನ್ಮದಲ್ಲಿ ಮೋದಿಗೆ ಆಪ್ ಸೋಲಿಸಲು ಅಸಾಧ್ಯ: ಕೇಜ್ರಿ ವಿಡಿಯೋ ವೈರಲ್
ನವದೆಹಲಿ: ಮತ್ತೆ ಸಿಎಂ ಗಾದಿಗೇರುವ ಕನಸು ಕಂಡಿದ್ದ ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಸೋಲು ಕಂಡ ಬೆನ್ನಲ್ಲೇ, ವರ್ಷಗಳ ಹಿಂದೆ ಆಪ್ ನಾಯಕ ಹೇಳಿದ್ದ ಮಾತೊಂದು ವೈರಲ್ ಆಗಿದೆ. 2023ರ ಸಾರ್ವಜನಿಕ ಸಭೆಯೊಂದರಲ್ಲಿ ಕೇಜ್ರಿವಾಲ್, ‘ ಆಪ್ ಸರ್ಕಾರವನ್ನು ಉರುಳಿಸುವುದು ಅವರ ಉದ್ದೇಶ. ನರೇಂದ್ರ ಮೋದಿ ದೆಹಲಿಯಲ್ಲಿ ಸರ್ಕಾರ ರಚಿಸಲು ಬಯಸುತ್ತಾರೆ. ಚುನಾವಣೆಗಳ ಮೂಲಕ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ಈ ಜನ್ಮದಲ್ಲಿ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ನೀವು ನಮ್ಮನ್ನು ಸೋಲಿಸಲು ಇನ್ನೊಂದು ಜನ್ಮ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದರು.’ ಸದ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೋ ಟ್ರೆಂಡಿಂಗ್ ಆಗುತ್ತಿದೆ.
5 ಮಹಿಳೆಯರಿಗೆ ಈ ಬಾರಿ ವಿಜಯ ಕಿರೀಟ
ನವದೆಹಲಿ: ಸಿಎಂ ಆತಿಶಿ ಸೇರಿದಂತೆ 5 ಮಹಿಳೆಯರು ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆತಿಶಿ ಅವರು ಆಪ್‌ನಿಂದ ಗೆದ್ದ ಏಕೈಕ ಮಹಿಳೆಯಾಗಿದ್ದಾರೆ. ಉಳಿದಂತೆ, ಬಿಜೆಪಿ ಅಭ್ಯರ್ಥಿಗಳಾದ ಶಾಲಿಮಾರ್ ಬಾಗ್ ಕ್ಷೇತ್ರದ ರೇಖಾ ಗುಪ್ತಾ, ವಾಜಿ಼ಪುರದ ಪೂನಂ ಶರ್ಮಾ, ನಜಾಫ್‌ಗರ್‌ನ ನೀಲಂ ಪಹಲ್ವಾನ್, ಗ್ರೇಟರ್ ಕೈಲಾಶ್‌ನ ಶೀಖಾ ರಾಯ್ ವಿಜಯಿಯಾದ ಮಹಿಳೆಯರು.ಕಣದಲ್ಲಿದ್ದ 699 ಅಭ್ಯರ್ಥಿಗಳ ಪೈಕಿ 96 ಮಹಿಳೆಯರಿದ್ದರು. ಬಿಜೆಪಿ ಹಾಗೂ ಆಪ್‌ನಿಂದ ತಲಾ 9 ಮಹಿಳೆಯರು ಸ್ಪರ್ಧೆಯಲ್ಲಿದ್ದರೆ, ಕಾಂಗ್ರೆಸ್‌ನ 7 ಜನ ಇದ್ದರು. 2020ರ ಚುನಾವಣೆಯಲ್ಲಿ 8 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದರು.
ಬಿಜೆಪಿ ತೆಕ್ಕೆಗೆ ಮತ್ತೊಂದು ರಾಜ್ಯ ಸೇರ್ಪಡೆ
ನವದೆಹಲಿ: ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹಿರಿಮೆ ಹೊಂದಿರುವ ಭಾರತೀಯ ಜನತಾ ಪಕ್ಷದ ತೆಕ್ಕೆಗೆ ಇದೀಗ ಮತ್ತೊಂದು ರಾಜ್ಯ ಒಲಿದು ಬಂದಿದೆ. ದೆಹಲಿ ಚುನಾವಣೆ ಗೆಲ್ಲುವುದರೊಂದಿಗೆ ಬಿಜೆಪಿ ಆಡಳಿತದ ರಾಜ್ಯಗಳ ಸಂಖ್ಯೆ 14ಕ್ಕೆ ಏರಿದೆ. ಜೊತೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಆಡಳಿತವಿರುವ ರಾಜ್ಯಗಳ ಸಂಖ್ಯೆ 7 ಇದೆ. ಅಂದರೆ ಬಿಜೆಪಿ ಮತ್ತು ಎನ್‌ಡಿಎ ಒಟ್ಟಾಗಿ 21 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿವೆ. ಉಳಿದಂತೆ ಇಂಡಿಯಾ ಮೈತ್ರಿಕೂಟ 8, ಆಪ್ 1, ಝಡ್‌ಪಿಎಂ 1 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿವೆ.
ಈ ಬಾರಿಯೂ ಸಮೀಕ್ಷೆಗಳು ನಿಜವಾದವು
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ವಿವಿಧ ಸಂಸ್ಥೆಗಳು ಪ್ರಕಟಿಸಿದ್ದ ಚುನಾವಣೋತ್ತರ ಸಮೀಕ್ಷೆಗಳ ಪೈಕಿ ಬಹುತೇಕ ನಿಜವಾಗಿವೆ. 13 ಸಮೀಕ್ಷೆಗಳ ಪೈಕಿ 11 ಬಿಜೆಪಿಗೆ ಸ್ಪಷ್ಟ ಬಹುಮತದ ಸುಳಿವು ನೀಡಿದ್ದರೆ, 2 ಸಮೀಕ್ಷೆಗಳು ಮರಳಿ ಆಪ್ ಗೆಲುವಿನ ಭವಿಷ್ಯ ನುಡಿದಿದ್ದವು. ಆದರೆ ಶನಿವಾರ ಪ್ರಕಟವಾದ ಫಲಿತಾಂಶವು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದೆ.
ಸಮೀಕ್ಷೆಗಳು ಜನರ ನಾಡಿಮಿಡಿತ ಅರಿಯುವಲ್ಲಿ ವಿಫಲವಾಗಿದೆ. ಅದನ್ನು ಮೀರಿ ನಾವು ಗೆಲ್ಲುತ್ತೇವೆ ಎಂದಿದ್ದ ಆಪ್‌ಗೆ ಚುನಾವಣಾ ಫಲಿತಾಂಶ ಶಾಕ್ ನೀಡಿದೆ.2015ರಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿ ಗೆಲುವಿನ ಸುಳಿವು ನೀಡಿದ್ದವು. ಆದರೆ ಎಲ್ಲರ ನಿರೀಕ್ಷೆ ಮೀರಿ ಆಪ್ ಗೆಲುವು ಸಾಧಿಸಿತ್ತು. ಹೀಗಾಗಿ ಸಮೀಕ್ಷೆಯ ಕುರಿತು ಅನುಮಾನಗಳು ಹುಟ್ಟಿಕೊಂಡಿದ್ದವು. ಬಳಿಕ 2020ರ ಚುನಾವಣೆಯಲ್ಲೂ ಬಹುತೇಕ ಸಮೀಕ್ಷೆಗಳು ನಿಜವಾಗಿದ್ದು. ಇದೀಗ ಪುನರಾವರ್ತನೆಯಾಗಿದೆ.