ಸಾರಾಂಶ
ಮುಂಬೈ: ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆಗಳ ನಡುವೆ ಮುಂಬೈನ ಬಾಂದ್ರಾದಲ್ಲಿರುವ ನಟನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಇವು 2 ಪ್ರತ್ಯೇಕ ಘಟನೆಗಳಾಗಿವೆ. ಮಂಗಳವಾರ, ಬುಧವಾರ ಘಟನೆ ನಡೆದಿದ್ದು, ಘಟನೆ ಸಂಬಂಧ ಛತ್ತೀಸ್‌ಗಢ ಮೂಲದ ಜಿತೇಂದ್ರ ಕುಮಾರ್ ಸಿಂಗ್ ಮತ್ತು ಓರ್ವ ಮಹಿಳೆಯನ್ನು ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ.
ಆಗಿದ್ದೇನು?:
ಸಿಂಗ್ ನಟನ ಮನೆ ಸುತ್ತ ಸುತ್ತಾಟ ನಡೆಸುತ್ತಿರುವುದು ಕಂಡು ಬಂದಿತ್ತು, ಭದ್ರತೆಗೆ ನಿಯೋಜಿಸಿದ ಸಿಬ್ಬಂದಿ ಅಲ್ಲಿಂದ ಹೋಗುವಂತೆ ಹೇಳಿದ್ದರು. ಆಗ ಸಿಟ್ಟಿಗೆದ್ದು ಆತ ತನ್ನ ಮೊಬೈಲ್ ಪುಡಿಗಟ್ಟಿದ್ದ. ಅದರೆ ಬಳಿಕ ಕಾರೊಂದರ ಹಿಂದೆ ಅವಿತು ಅದೇ ದಿನ ಸಂಜೆ ಆತ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ನುಗ್ಗಲು ಯತ್ನಿಸಿದ್ದ. ಈ ವೇಳೆ ಆತನನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಆದರೆ ಸಲ್ಮಾನ್‌ರನ್ನು ಭೇಟಿಯಾಗಲು ಅವರ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾಗಿ ಸಿಂಗ್ ವಿಚಾರಣೆ ವೇಳೆ ಹೇಳಿದ್ದಾನೆ.
ಇನ್ನೊಂದು ಪ್ರಕರಣದಲ್ಲಿ ಇಶಾ ಛಾಬ್ರಿಯಾ (36) ಎಂಬಾಕೆ ಬುಧವಾರ ಮುಂಜಾನೆ ಕಟ್ಟಡವನ್ನು ಪ್ರವೇಶಿಸಿ, ನಟನಿಂದ ಆಹ್ವಾನ ಬಂದಿದೆ ಎಂದು ಹೇಳಿಕೊಂಡಳು ಹಾಗೂ ಮನೆ ಬಾಗಿಲು ಕೂಡ ತಟ್ಟಿದಳು. ಆಗ ಭದ್ರತಾ ಸಿಬ್ಬಂದಿ ಆಕೆಯನ್ನು ಪ್ರಶ್ನಿಸಿದಾಗ ಸುಳ್ಳು ಎಂದು ಗೊತ್ತಾಗಿ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಹಲವಾರು ಬೆದರಿಕೆಗಳನ್ನು ಎದುರಿಸುತ್ತಿರುವ ಖಾನ್‌ಗೆ ಮುಂಬೈ ಪೊಲೀಸರು ‘ವೈ-ಪ್ಲಸ್’ ಭದ್ರತೆಯನ್ನು ಒದಗಿಸಿದ್ದಾರೆ.