- ಠಾಕ್ರೆ ಸೇನೆಗೆ ಸಂಸದ ಅಷ್ಟಿಕರ್, ನಿಂಬಾಳ್ಕರ್ ಗುಡ್‌ಬೈ
- ಆಪರೇಷನ್ ಸಕ್ಸಸ್, ಪೇಷಂಟ್ ಹೆಲ್ದಿ: ಫಡ್ನವೀಸ್ಪಿಟಿಐ ಛತ್ರಪತಿ ಸಂಭಾಜಿನಗರ
ಠಾಕ್ರೆ ಬಣದ 6 ಶಿವಸೇನಾ (ಯುಬಿಟಿ) ಸಂಸದರು ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇಬ್ಬರು ಸಂಸದರು ಭಾನುವಾರ ಬಹಿರಂಗವಾಗಿ ಶಿಂಧೆ ಬಣದ ಶಿವಸೇನೆ ಸೇರ್ಪಡೆ ಘೋಷಣೆ ಮಾಡಿದ್ದಾರೆ. ಓಂ ರಾಜೆ ನಿಂಬಾಳ್ಕರ್ ಹಾಗೂ ನಾಗೇಶ್ ಪಾಟೀಲ್ ಅಷ್ಟಿಕರ್ ಅವರೇ ಆ ಸಂಸದರು.ಇದರ ನಡುವೆಯೇ, ‘ಆಪರೇಷನ್ ಸಕ್ಸಸ್. ಪೇಷಂಟ್ ಹೆಲ್ದಿ’ (ಸಂಸದರ ಸೆಳೆವ ಕಾರ್ಯಾಚರಣೆ ಯಶಸ್ವಿ ಆಗಿದೆ) ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೂಚ್ಯವಾಗಿ ಹೇಳಿದ್ದಾರೆ. ಶಿಂಧೆ ಶಿವಸೇನೆ ಮುಖ್ಯಸ್ಥ, ಡಿಸಿಎಂ ಏಕನಾಥ ಶಿಂಧೆ ಕೂಡ ಈ ಮಾತು ಅನುಮೋದಿಸಿದ್ದಾರೆ.
ಭಾನುವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅಷ್ಟಿಕರ್, ‘ಜೂನ್ 18 ರವರೆಗೆ ಪಕ್ಷಾಂತರ ನಿರ್ಧಾರ ಮಾಡಿರಲಿಲ್ಲ. ಆದರೆ ನನ್ನ ವಿರುದ್ಧ ಅವಾಚ್ಯ ಬೈಗುಳ ಅಂದು ಕೇಳಿಬಂತು. ಆಗಲೇ ಪಕ್ಷ ಬಿಡಲು ನಿರ್ಧರಿಸಿದೆವು’ ಎಂದರು. ಈ ಮೂಲಕ ತಮ್ಮನ್ನು ‘ಗಾಂ**’ ಎಂದು ಅವಾಚ್ಯ ಶಬ್ದದಿಂದ ಬೈದ ಉದ್ಧವ್ ಠಾಕ್ರೆ ಆಪ್ತ ಸಂಜಯ ರಾವುತ್ ಬಗ್ಗೆ ಕಿಡಿಕಾರಿದರು.
‘ನಾನು ಸಿದ್ಧಾಂತದಲ್ಲಿ ರಾಜಿ ಆಗಿಲ್ಲ/ ಒಂದು ಶಿವಸೇನೆಯಿಂದ ಇನ್ನೊಂದಕ್ಕೆ ಹೋಗುತ್ತಿದ್ದೇನೆ ಅಷ್ಟೆ. ವಿಪಕ್ಷದಲ್ಲಿ ಇದ್ದ ಕಾರಣ 5 ಕೋಟಿ ರು. ಸಂಸದೀಯ ಅನುದಾನ ಬಿಟ್ಟು ಬೇರೇನೂ ಬರುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯ ಕೈಗೊಳ್ಳುವುದೇ ಕಷ್ಟವಾಗಿತ್ತು. ಹೀಗಾಗಿ ಶಿಂಧೆ ಬಣದ ಶಿವಸೇನೆ ಸೇರುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.ನಿಂಬಾಳ್ಕರ್ ಕೂಡ ಗುಡ್‌ಬೈ:ಈ ನಡುವೆ, 6 ಬಂಡಾಯ ಯುಬಿಟಿ ಶಿವಸೇನೆ ಸಂಸದರಲ್ಲಿದ್ದಾರೆ ಎನ್ನಲಾಗಿದ್ದ ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ ಕ್ಷೇತ್ರದ ಜನಸಂಪರ್ಕ ಸಭೆ ಬಳಿಕ ಮಾತಾಡಿ, ಶಿಂಧೆ ಸೇನೆ ಸೇರುವ ಘೋಷಣೆ ಮಾಡಿದರು.ಬಂಡಾಯ ಸಂಸದರು ಸಂಪರ್ಕದಲ್ಲಿ:‘ಈ ನಡುವೆ ಅತೃಪ್ತ ಸಂಸದರು ತಮ್ಮ ಕ್ಷೇತ್ರದಲ್ಲಿ ಜನರ ಆಕ್ರೋಶಕ್ಕೆ ಹೆದರಿದ್ದಾರೆ. ಇನ್ನೂ ಕೆಲವರು ಶಿವಸೇನೆ ಜತೆಗೆ ಸಂಪರ್ಕದಲ್ಲಿದ್ದಾರೆ’ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
-ನಮ್ಮದೇ ನೈಜ ಶಿವಸೇನೆ: ಶಾಗೆ ಠಾಕ್ರೆ ತಿರುಗೇಟು
ಮುಂಬೈ: ‘ಈಗ ಇರುವುದೊಂದೇ ಶಿವಸೇನೆ. ಅದು ಶಿಂಧೆ ಶಿವಸೇನೆ’ ಎಂದು ಕೊಲ್ಹಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದು, ‘ಶಿವಸೇನೆ ಎಂದರೆ ಅದು ನಮ್ಮದು ಮಾತ್ರ. 2 ಶಿವಸೇನೆ ಇರಲು ಸಾಧ್ಯವಿಲ್ಲ’ ಎಂದು ಗುಡುಗಿದ್ದಾರೆ.