ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಹಿಂದಿ ಹೇರಲ್ಲ : ತಮಿಳ್ನಾಡಿಗೆ ಕೇಂದ್ರ ಶಿಕ್ಷಣ ಸಚಿವ ಪ್ರಧಾನ್

| N/A | Published : Feb 21 2025, 11:47 PM IST / Updated: Feb 22 2025, 07:01 AM IST

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಮೂಲಕ ತ್ರಿಭಾಷಾ ಸೂತ್ರವನ್ನು (ಹಿಂದಿ) ಹೇರಿಕೆ ಮಾಡಲಾಗುತ್ತಿದೆ ಎಂಬ ತಮಿಳುನಾಡು ಸರ್ಕಾರದ ವಾದಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿರುಗೇಟು ನೀಡಿದ್ದಾರೆ.

ನವದೆಹಲಿ/ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಮೂಲಕ ತ್ರಿಭಾಷಾ ಸೂತ್ರವನ್ನು (ಹಿಂದಿ) ಹೇರಿಕೆ ಮಾಡಲಾಗುತ್ತಿದೆ ಎಂಬ ತಮಿಳುನಾಡು ಸರ್ಕಾರದ ವಾದಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿರುಗೇಟು ನೀಡಿದ್ದಾರೆ. 

‘ಎನ್‌ಇಪಿಯಿಂದ ಯುವಜನರಿಗೆ ಅನುಕೂಲ ಆಗುತ್ತದೆ. ರಾಜಕೀಯ ಭಿನ್ನಮತ ಬದಿಗಿಟ್ಟು ಯುವಜನರ ಹಿತಾಸಕ್ತಿ ಕುರಿತು ಚಿಂತನೆ ಮಾಡಬೇಕು. ಇದರಿಂದ ಹಿಂದಿ ಹೇರಿಕೆ ಆಗುವುದಿಲ್ಲ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸ್ಟಾಲಿನ್‌ ಅವರು ಪ್ರಧಾನಿ ಮೋದಿ ಅವರಿಗೆ ಗುರುವಾರ ಪತ್ರ ಬರೆದು, ‘ತ್ರಿಭಾಷಾ ಸೂತ್ರ ಸರಿಯಲ್ಲ. ಜತೆಗೆ ಸಮಗ್ರ ಶಿಕ್ಷಾ ಅಭಿಯಾನ(ಎಸ್ಎಸ್‌ಎ) ಮತ್ತು ಪಿಎಂ ಶ್ರೀ ಸ್ಕೂಲ್ಸ್‌ ಯೋಜನೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ಜೋಡಿಸುವುದನ್ನು ಮೂಲಭೂತವಾಗಿ ಒಪ್ಪಲು ಸಾಧ್ಯವಿಲ್ಲ’ ಎಂದಿದ್ದರು.

ಭಾಷೆ ಹೇರಿಕೆ ಇಲ್ಲ:

ಇದಕ್ಕೆ ಪ್ರಧಾನ್‌ ತಿರುಗೇಟು ನೀಡಿ, ‘ಸ್ಟಾಲಿನ್‌ ಅವರ ಈ ಪತ್ರ ಮೋದಿ ಸರ್ಕಾರ ಪ್ರೋತ್ಸಾಹಿಸುತ್ತಿರುವ ಸಹಕಾರ ತತ್ವದ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಗೆ ವಿರುದ್ಧವಾಗಿದೆ. ಎನ್‌ಇಪಿಯಂಥ ಪ್ರಗತಿಪರ ಶೈಕ್ಷಣಿಕ ಸುಧಾರಣೆಯನ್ನು ತಮ್ಮ ರಾಜಕೀಯ ವ್ಯಾಖ್ಯಾನಕ್ಕೆ ಬೆದರಿಕೆ ಎಂಬಂತೆ ನೋಡುವುದು ಸರಿಯಲ್ಲ’ ಎಂದಿದ್ದಾರೆ.

ಇನ್ನು ತ್ರಿಭಾಷಾ ಸೂತ್ರಕ್ಕೆ ತಮಿಳುನಾಡಿನಿಂದ ಕೇಳಿಬರುತ್ತಿರುವ ವಿರೋಧದ ವಿಚಾರವಾಗಿ ಇದೇ ವೇಳೆ ಸ್ಪಷ್ಟನೆ ನೀಡಿದ ಅವರು, ಎನ್‌ಇಪಿ ಯಾವುದೇ ಭಾಷೆ ಹೇರುವುದಿಲ್ಲ. ವಿದೇಶಿ ಭಾಷೆ ಕಲಿಕೆ ಬದಲು ದೇಶೀ ಭಾಷೆಗೆ ಅವಕಾಶ ನೀಡುವ ಉದ್ದೇಶ ಎನ್‌ಇಪಿಗೆ ಇದೆ. ಹಾಗಾಗಿ 3 ಭಾಷೆಗಳ ಆಯ್ಕೆ ನೀಡಲಾಗಿದೆ. ರಾಜಕೀಯ ಭಿನ್ನಮತ ಬದಿಗಿಟ್ಟು ಎನ್‌ಇಪಿ ಅನುಷ್ಠಾನವನ್ನು ಸಮಗ್ರವಾಗಿ ನೋಡಬೇಕು’ ಎಂದಿದ್ದಾರೆ.

ದ್ವಿಭಾಷಾ ನೀತಿಗಷ್ಟೇ ಬದ್ಧ: ಸ್ಟಾಲಿನ್‌

ಪ್ರಧಾನ್‌ ಹೇಳಿಕೆಗೆ ಸಿಎಂ ಎಂ.ಕೆ. ಸ್ಟಾಲಿನ್‌ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಹಿಂದಿ ಹೇರಲೆಂದೇ ಎನ್‌ಇಪಿ ಜಾರಿಗೊಳಿಸಲಾಗುತ್ತಿದೆ. ಇದನ್ನು ನಾವು ಒಪ್ಪಲ್ಲ’ ಎಂದು ಸ್ಟಾಲಿನ್‌ ಹೇಳಿದ್ದಾರೆ.

ಉದಯನಿಧಿ ಮಾತನಾಡಿ, ‘ರಾಜ್ಯವು ದ್ವಿಭಾಷ ನೀತಿಯನ್ನೇ ಅನುಸರಿಸಲಿದೆ. ನಾವು ನಮ್ಮ 2150 ಕೋಟಿ ರು. ಅನುದಾನವನ್ನಷ್ಟೇ ಕೇಳುತ್ತಿದ್ದೇವೆ. ಆದರೆ ನಾವು ಎನ್‌ಇಪಿ ಮತ್ತು ತ್ರಿಭಾಷಾ ಸೂತ್ರ ಒಪ್ಪಿಕೊಳ್ಳಬೇಕೆಂದು ಅವರು ಬಯಸುತ್ತಿದ್ದಾರೆ. ತಮಿಳುನಾಡು ಹಿಂದಿನಿಂದಲೂ ತ್ರಿಭಾಷಾ ಸೂತ್ರ ವಿರೋಧಿಸುತ್ತಿದೆ. ಹೀಗಾಗಿ ಅದರಲ್ಲಿ ರಾಜಕೀಯ ಮಾಡುವಂಥದ್ದೇನಿದೆ’ ಎಂದು ಪ್ರಶ್ನಿಸಿದ್ದಾರೆ.

ತಮಿಳುನಾಡಲ್ಲಿ ಗೆಟೌಟ್ ಸ್ಟಾಲಿನ್ Vs ಗೆಟೌಟ್ ಮೋದಿ

ಚೆನ್ನೈ: ಕೇಂದ್ರ ಸರ್ಕಾರ ಶಿಕ್ಷಣದ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಕೇಂದ್ರದ ವಿರುದ್ಧ ಅಭಿಯಾನಗಳನ್ನು ನಡೆಸುತ್ತಿದ್ದು, ಇದೀಗ ಡಿಎಂಕೆ ಹಾಗೂ ಬಿಜೆಪಿ ನಡುವೆ ‘ಗೆಟೌಟ್ ಸ್ಟಾಲಿನ್’ Vs ‘ಗೆಟೌಟ್ ಮೋದಿ’ ವಾಕ್ಸಮರ ತೀವ್ರಗೊಂಡಿದೆ.ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿರುದ್ಧ ಫೆ.19ರಂದು ಚೆನ್ನೈನಲ್ಲಿ ನಡೆದ ರ್‍ಯಾಲಿ ವೇಳೆ ಡಿಸಿಎಂ ಉದಯನಿಧಿ ಸ್ಟಾಲಿನ್ ಮಾತನಾಡಿ, ‘ರಾಜ್ಯದ ಹಕ್ಕುಗಳನ್ನು ಕೇಂದ್ರ ಸರ್ಕಾರ ಕದಿಯಲು ಯತ್ನಿಸಿದರೆ, ಜನರು ‘ಗೆಟ್ ಔಟ್ ಮೋದಿ’ ಅಭಿಯಾನ ಆರಂಭಿಸುತ್ತಾರೆ’ ಎಂದಿದ್ದರು.

ಇದಕ್ಕೆ ಅಣ್ಣಾಮಲೈ ಪ್ರತ್ಯುತ್ತರ ನೀಡಿ, ’ತಮಿಳುನಾಡನ್ನು ಭ್ರಷ್ಟಾಚಾರ, ಅಕ್ರಮಗಳು, ಮದ್ಯ-ಡ್ರಗ್ಸ್‌ ಸ್ವರ್ಗ ಮಾಡಿರುವುದು ಡಿಎಂಕೆ ಸರ್ಕಾರ’ ಎಂದಿದ್ದು ‘ಗೆಟ್ ಔಟ್ ಸ್ಟಾಲಿನ್’ ಹ್ಯಾಷ್‌ಟ್ಯಾಗ್ ಮೂಲಕ ಪ್ರತಿ ಅಭಿಯಾನ ಆರಂಭಿಸಿದ್ದಾರೆ.

ಭಾಷಾ ದ್ವೇಷ ಹಚ್ಚಬೇಡಿ: ಮೋದಿ ಕರೆ

ನವದೆಹಲಿ: ‘ಭಾರತೀಯ ಭಾಷೆಗಳ ನಡುವೆ ಎಂದಿಗೂ ದ್ವೇಷವಿಲ್ಲ. ಹೀಗಾಗಿ ದ್ವೇಷ ಹಚ್ಚುವ ಯತ್ನ ಮಾಡಬಾರದು. ಭಾಷೆಗಳ ಆಧಾರದ ಮೇಲೆ ತಾರತಮ್ಯ ಮಾಡುವ ಪ್ರಯತ್ನಗಳಿಗೆ ಸೂಕ್ತ ಉತ್ತರವನ್ನು ನೀಡುವ ಮೂಲಕ ಭಾಷೆಗಳು ಒಂದನ್ನೊಂದು ಶ್ರೀಮಂತಗೊಳಿಸಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿನ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಭಾರತವು ವಿಶ್ವದ ಅತಿದೊಡ್ಡ ಭಾಷಾ ವೈವಿಧ್ಯತೆಯನ್ನು ಹೊಂದಿದ ದೇಶ. ಈ ವೈವಿಧ್ಯತೆಯೇ ನಮ್ಮ ಏಕತೆಯ ಅತ್ಯಂತ ಮೂಲಭೂತ ಆಧಾರವಾಗಿದೆ. ಭಾಷಾ ತಾರತಮ್ಯದ ತಪ್ಪು ಕಲ್ಪನೆಗಳಿಂದ ದೂರವಿದ್ದು, ಎಲ್ಲಾ ಭಾಷೆಗಳನ್ನು ಅಳವಡಿಸಿಕೊಂಡು ಶ್ರೀಮಂತಗೊಳಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ’ ಎಂದು ಅವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಅನುಷ್ಠಾನವು ದೇಶಾದ್ಯಂತ ತ್ರಿಭಾಷಾ ಸೂತ್ರವನ್ನು ಹೇರುವ ಪ್ರಯತ್ನವಾಗಿದೆ ಎಂದು ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಟೀಕಿಸಿದ್ದರು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಡಿಎಂಕೆ ರಾಜ್ಯಾದ್ಯಂತ ಅಭಿಯಾನ ಕೂಡ ಕೈಗೊಂಡಿತ್ತು. ಇದರ ಬೆನ್ನಲ್ಲೆ ಪ್ರಧಾನಿ ಈ ಸಂದೇಶ ನೀಡಿದ್ದಾರೆ.