ಸಾರಾಂಶ
ರಷ್ಯಾ ಜೊತೆಗಿನ ಕದನ ನಿಲ್ಲಿಸಲು ಉಕ್ರೇನ್ ಬೆದರಿಸುವ ಯತ್ನ ಫಲಕೊಡದೇ ಅಮೆರಿಕ ದೂರವಾದ ಬೆನ್ನಲ್ಲೇ, ಉಕ್ರೇನ್ ನೆರವಿಗೆ ಯುರೋಪಿಯನ್ ದೇಶಗಳು ಧಾವಿಸಿದೆ.
ಲಂಡನ್: ರಷ್ಯಾ ಜೊತೆಗಿನ ಕದನ ನಿಲ್ಲಿಸಲು ಉಕ್ರೇನ್ ಬೆದರಿಸುವ ಯತ್ನ ಫಲಕೊಡದೇ ಅಮೆರಿಕ ದೂರವಾದ ಬೆನ್ನಲ್ಲೇ, ಉಕ್ರೇನ್ ನೆರವಿಗೆ ಯುರೋಪಿಯನ್ ದೇಶಗಳು ಧಾವಿಸಿದೆ. ಯುರೋಪ್ ದೇಶಗಳ ಮೇಲೆ ಅಮೆರಿಕ ತೆರಿಗೆ ಸಮರ ಸಾರಿದ ಬೆನ್ನಲ್ಲೇ, ಅಮೆರಿಕದಿಂದ ತಿರಸ್ಕರಿಸಲ್ಪಟ್ಟ ಉಕ್ರೇನ್‌ಗೆ ಯುರೋಪ್ ದೇಶಗಳು ನೆರವಿನ ಹಸ್ತ ಚಾಚಿರುವುದು ಭಾರೀ ಕುತೂಹಲ ಮೂಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ‘ಎಲ್ಲಾ ದೇಶಗಳು ತಮ್ಮೆಲ್ಲಾ ಸಾಮರ್ಥ್ಯವನ್ನು ಬಳಸಿ ಉಕ್ರೇನ್‌ನನ್ನು ಬೆಂಬಲಿಸಬೇಕು. ಕೈಲಾದ ಮಟ್ಟಿಗೆ ಯುದ್ಧ ನಿಲ್ಲಿಸಲು ಸಹಕರಿಸಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೆ ಫ್ರಾನ್ಸ್ ಮತ್ತು ಉಕ್ರೇನ್ ಜೊತೆ ನಡೆಸಿದ ಮಾತುಕತೆಯಲ್ಲಿ ಹೊರಹೊಮ್ಮಿದ ಅಂಶಗಳ ಪೈಕಿ 4 ಅಂಶಗಳ ಬಗ್ಗೆ ಯುರೋಪ್ ದೇಶಗಳು ತಮ್ಮ ಸಹಮತಿ ವ್ಯಕ್ತಪಡಿಸಿವೆ.
ಅವುಗಳೆಂದರೆ ಉಕ್ರೇನ್‌ಗೆ ನಿರಂತರ ನೆರವು ಹರಿದುಬರುವಂತೆ ಮಾಡುವುದು, ರಷ್ಯಾದ ಮೇಲಿನ ಆರ್ಥಿಕ ಒತ್ತಡ ಮುಂದುವರೆಸುವುದು, ಸಂಧಾನ ಮಾತುಕತೆ ನಡೆದಲ್ಲಿ, ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಖಚಿತಪಡಿಸುವುದು, ಭವಿಷ್ಯದಲ್ಲಿ ಆಕ್ರಮಣ ತಡೆಯಲು ಉಕ್ರೇನ್‌ಗೆ ಶಸ್ತ್ರಾಸ್ತ್ರ ಒದಗಿಸುವುದನ್ನು ಒದಗಿಸುವುದು ಎಂದು ಹೇಳಿದ್ದಾರೆ.