ವಾರಸುದಾರರಿಲ್ಲದೆ ₹ 78213 ಕೋಟಿ ಬ್ಯಾಂಕುಗಳಲ್ಲಿ ಅನಾಥ!

| Published : May 31 2024, 02:15 AM IST / Updated: May 31 2024, 04:20 AM IST

ವಾರಸುದಾರರಿಲ್ಲದೆ ₹ 78213 ಕೋಟಿ ಬ್ಯಾಂಕುಗಳಲ್ಲಿ ಅನಾಥ!
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ ಹಣ 78213 ಕೋಟಿ ರು.ಗೆ ಏರಿಕೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಹಣ ಉಳಿತಾಯ ಖಾತೆಗಳಲ್ಲಿದ್ದು, ಅದಕ್ಕೆ ಯಾರೂ ಹಕ್ಕು ಮಂಡಿಸಿಲ್ಲ.

ಪಿಟಿಐ ಮುಂಬೈದೇಶದ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ ಹಣ 78213 ಕೋಟಿ ರು.ಗೆ ಏರಿಕೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಹಣ ಉಳಿತಾಯ ಖಾತೆಗಳಲ್ಲಿದ್ದು, ಅದಕ್ಕೆ ಯಾರೂ ಹಕ್ಕು ಮಂಡಿಸಿಲ್ಲ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ ನಿಧಿಯ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ಇದೆ. 2023ರ ಮಾರ್ಚ್‌ನಲ್ಲಿ ವಾರಸುದಾರರಿಲ್ಲದ ಹಣದ ಮೊತ್ತ 62 225 ಕೋಟಿ ರು. ಇತ್ತು. ಅದು ಒಂದೇ ವರ್ಷದಲ್ಲಿ ಶೇ.26ರಷ್ಟು ಅಂದರೆ 16 ಸಾವಿರ ಕೋಟಿ ರು.ನಷ್ಟು ಹೆಚ್ಚಳವಾಗಿದೆ. ಈಗ 78 213 ಕೋಟಿ ರು.ಗೆ ಏರಿಕೆಯಾಗಿದೆ.

10 ವರ್ಷ ಹಾಗೂ ಅದಕ್ಕಿಂತ ಹೆಚ್ಚು ಅವಧಿಯಿಂದ ಯಾರೂ ಹಕ್ಕು ಮಂಡಿಸಿಲ್ಲದ ಹಣವನ್ನು ಸಹಕಾರಿ ಬ್ಯಾಂಕುಗಳು ಸೇರಿದಂತೆ ದೇಶದ ಎಲ್ಲ ಬ್ಯಾಂಕುಗಳು ಭಾರತೀಯ ರಿಸರ್ವ್‌ ಬ್ಯಾಂಕಿನ ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ ನಿಧಿಗೆ ವರ್ಗಾಯಿಸುತ್ತವೆ.

ನಿಷ್ಕ್ರಿಯ ಖಾತೆಗಳಲ್ಲಿ ಅನಾಥವಾಗಿರುವ ಈ ಹಣವನ್ನು ಬ್ಯಾಂಕ್‌ ಖಾತೆದಾರರಿಗೆ ತಲುಪಿಸಲು ನೆರವಾಗುವ ಉದ್ದೇಶದಿಂದ ರಿಸರ್ವ್‌ ಬ್ಯಾಂಕ್‌ ವರ್ಷಾರಂಭದಲ್ಲಿ ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಅಲ್ಲದೆ, ಇಂತಹ ಖಾತೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ, ಅವ್ಯವಹಾರವಾಗದಂತೆ ನೋಡಿಕೊಳ್ಳುವಂತೆ, ನಿಷ್ಕ್ರಿಯ ಖಾತೆಗಳ ಗ್ರಾಹಕರನ್ನು ಪತ್ತೆ ಹಚ್ಚುವಂತೆಯೂ ಬ್ಯಾಂಕುಗಳಿಗೆ ನಿರ್ದೇಶನ ನೀಡಿತ್ತು.

ತಮ್ಮ ಹೆಸರಿನಲ್ಲಿ ಯಾವುದಾದರೂ ಅನಾಥ ಹಣ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ‘UDGAM’ ಎಂಬ ಪೋರ್ಟಲ್‌ ಅನ್ನೂ ಆರಂಭಿಸಿತ್ತು. ಆದರೂ ವಾರಸುದಾರರಿಲ್ಲದ ಹಣ ಹೆಚ್ಚಾಗಿದೆ.