ಉತ್ತರಾಖಂಡ ಸರ್ಕಾರದಿಂದ ಇಂದು ಏಕರೂಪ ನಾಗರಿಕ ಸಂಹಿತೆಗೆ ಅಸ್ತು?

| Published : Feb 03 2024, 01:46 AM IST

ಸಾರಾಂಶ

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಕುರಿತು ಶಿಫಾರಸು ಮಾಡಲು ರಚಿಸಿದ್ದ ಉನ್ನತ ಮಟ್ಟದ ಸಮಿತಿ ಶುಕ್ರವಾರ ತನ್ನ 749 ಪುಟಗಳ ಕರಡು ವರದಿಯನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಸಲ್ಲಿಸಿದೆ.

ಏನಿದು ಏಕರೂಪ ನಾಗರಿಕ ಸಂಹಿತೆ?ಎಲ್ಲಾ ಧರ್ಮೀಯರಿಗೂ ವಿವಾಹ, ವಿಚ್ಛೇದನ, ಆಸ್ತಿ, ಭೂಮಿ ಮತ್ತು ಉತ್ತರಾಧಿಕಾರ ಕುರಿತು ವಿವಿಧ ಧರ್ಮಗಳಲ್ಲಿ ಪ್ರತ್ಯೇಕ ನಿಯಮಗಳಿವೆ. ಅದನ್ನೆಲ್ಲಾ ರದ್ದುಪಡಿಸಿ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಕುರಿತು ಶಿಫಾರಸು ಮಾಡಲು ರಚಿಸಿದ್ದ ಉನ್ನತ ಮಟ್ಟದ ಸಮಿತಿ ಶುಕ್ರವಾರ ತನ್ನ 749 ಪುಟಗಳ ಕರಡು ವರದಿಯನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಸಲ್ಲಿಸಿದೆ. ಬಹಪತ್ನಿತ್ವ ನಿಷೇಧ, ಎಲ್ಲ ರೀತಿಯ ವಿವಾಹ ನೋಂದಣಿ ಕಡ್ಡಾಯ, ವಿಚ್ಛೇದನ ಕೋರಲು ಪತಿ-ಪತ್ನಿ ಇಬ್ಬರಿಗೂ ಸಮಾನ ನಿಯಮ, ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಸಮಾನ ಪಾಲು ಸೇರಿ ವಿವಿಧ ಅಂಶಗಳು ಈ ವರದಿಯಲ್ಲಿವೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ। ರಂಜನಾ ಪ್ರಕಾಶ್‌ ದೇಸಾಯಿ ಅವರ ನೇತೃತ್ವದ ಐವರು ಸದಸ್ಯರ ಸಮಿತಿ, ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ವರದಿ ಹಸ್ತಾಂತರಿಸಿತು. ಶನಿವಾರ ನಡೆವ ಸಂಪುಟ ಸಭೆಯಲ್ಲಿ ಕರಡು ವರದಿಯನ್ನು ಅನುಮೋದಿಸಿ ಫೆ.5ರಿಂದ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ಪಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ.ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಧಾಮಿ, ‘ಬಹುನಿರೀಕ್ಷಿತ ಸಮಯ ಸನ್ನಿಹಿತವಾಗಿದೆ. ಏಕರೂಪ ನಾಗರಿಕ ಸಂಹಿತೆ ಕುರಿತ ಕರಡು ವರದಿಯನ್ನು ನಮಗೆ ಸಲ್ಲಿಸಲಾಗಿದೆ. ನಾವು ವರದಿಯನ್ನು ಪರಿಶೀಲಿಸಿ, ಅಧ್ಯಯನ ಮಾಡಿ ಚರ್ಚೆ ನಡೆಸಿದ ಬಳಿಕ ಅದನ್ನು ಫೆ.6ರಂದು ವಿಧಾನಸಭೆಯಲ್ಲಿ ಮಂಡಿಸಲಿದ್ದೇವೆ. 2022ರ ಚುನಾವಣೆಗೂ ಮುನ್ನ ನಾವು ರಾಜ್ಯದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಈ ಮಸೂದೆ ಅಂಗೀಕಾರ ಮಹತ್ವದ ಹೆಜ್ಜೆಯಾಗಿದೆ. ನ್ಯಾ। ದೇಸಾಯಿ ನೇತೃತ್ವದ ಸಮಿತಿಯು ಸಮಾಜದ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ’ ಎಂದು ತಿಳಿಸಿದರು.ಮೊದಲ ರಾಜ್ಯ:ಒಂದು ವೇಳೆ ಫೆ.5-8ರವರೆಗೆ ನಡೆಯಲಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾದರೆ ಇಂಥ ಕಾಯ್ದೆ ರೂಪಿಸಿದ ದೇಶದ ಮೊದಲ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಲಿದೆ.

ಸದ್ಯ ಗೋವಾದಲ್ಲಿ ಮಾತ್ರವೇ ಈ ನಿಯಮ ಜಾರಿಯಲ್ಲಿದೆ. ಆದರೆ ಅದು ಪೋರ್ಚುಗೀಸರ ಕಾಲದಿಂದಲೂ ಇದೆ. ಸ್ವಾತಂತ್ರ್ಯಾನಂತರದ ಗೋವಾ ಸರ್ಕಾರ ಯಾವುದೇ ಹೊಸ ಕಾಯ್ದೆ ರೂಪಿಸಿಲ್ಲ.

ಏಕರೂಪ ಸಂಹಿತೆ: ಏನು ಶಿಫಾರಸು?

ಯುವತಿಯವರಿಗೆ ವಿವಾಹದ ವಯಸ್ಸು 18, ಯುವಕರಿಗೆ 21 ವರ್ಷಎಲ್ಲಾ ರೀತಿಯ ವಿವಾಹ ನೋಂದಣಿ ಮಾಡುವುದು ಕಡ್ಡಾಯ

ವಿಚ್ಛೇದನ ಕೋರಲು ಪತಿ, ಪತ್ನಿ ಇಬ್ಬರಿಗೂ ಸಮಾನ ನಿಯಮ ಅನ್ವಯ

ಪತಿ/ಪತ್ನಿ- ಇಬ್ಬರೂ ಜೀವಂತ ಇರುವಾಗ 2ನೇ ಮದುವೆ ಸಾಧ್ಯವಿಲ್ಲ. ಅಂದರೆ ಬಹು ಪತ್ನಿತ್ವ, ಬಹುಪತಿತ್ವಕ್ಕೆ ಬ್ರೇಕ್‌

ನಿಖಾ ಹಲಾಲಾ, ತ್ರಿವಳಿ ತಲಾಖ್‌, ಇದ್ದತ್‌ನಂಥ ವಿಚ್ಛೇದನ ಪದ್ಧತಿ ನಿಷೇಧ

ಆಸ್ತಿ, ಉತ್ತರದಾಯಿತ್ವದಲ್ಲಿ ಗಂಡು ಮಕ್ಕಳಷ್ಟೇ, ಹೆಣ್ಣು ಮಕ್ಕಳಿಗೂ ಸಮಾನ ಪಾಲು

ಲಿವ್‌ ಇನ್‌ ಸಂಬಂಧವನ್ನು ಸ್ವಯಂ ಘೋಷಣೆ ಮೂಲಕ ಪ್ರಕಟಿಸುವುದು ಅಗತ್ಯ

ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ ಹೊಂದಿರುವ ಆದಿವಾದಿಗಳು ಸಂಹಿತೆ ವ್ಯಾಪ್ತಿಗಿಲ್ಲ