ಜಿಂಕೆ ವೇಷ ಧರಿಸಿದವ ಮಾರೀಚ ಬದಲು ರಾವಣ ಎಂದ ಕೇಜ್ರಿ: ವಿವಾದ

| Published : Jan 22 2025, 12:30 AM IST

ಸಾರಾಂಶ

ರಾಮಾಯಣದ ಕುರಿತು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನೀಡಿದ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ರಾಯಪುರ: ರಾಮಾಯಣದ ಕುರಿತು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನೀಡಿದ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ‘ರಾಮ ವನವಾಸದಲ್ಲಿದ್ದಾಗ 1 ದಿನ, ಲಕ್ಷ್ಮಣನಿಗೆ ಸೀತಾಮಾತೆಯನ್ನು ರಕ್ಷಿಸು ಎಂದು ಹೇಳಿ ಆಹಾರದ ವ್ಯವಸ್ಥೆ ಮಾಡಲು ಕಾಡಿಗೆ ಹೋದ. ಅಷ್ಟರಲ್ಲಿ ರಾವಣನು ಚಿನ್ನದ ಜಿಂಕೆಯ ರೂಪದಲ್ಲಿ ಬಂದ. ಸೀತೆ ಈ ಜಿಂಕೆ ತನಗೆ ಬೇಕು ಎಂದಳು. ಲಕ್ಷ್ಮಣ ಅದನ್ನು ತರಲು ಹೋದ ಸಮಯದಲ್ಲಿ ರಾವಣ ಸೀತಾಮಾತೆಯನ್ನು ಅಪಹರಿಸಿದ. ಬಿಜೆಪಿಯವರು ಕೂಡ ಆ ಚಿನ್ನದ ಜಿಂಕೆಯಂತೆಯೇ ಇದ್ದಾರೆ. ಅವರ ಬಲೆಗೆ ಬೀಳಬೇಡಿ’ ಎಂದಿದ್ದರು.

ಅವರ ಹೇಳಿಕೆ ಬಿಜೆಪಿಯವರ ಕೆಂಗಣ್ಣಿಗೆ ಗುರಿಯಾಗಿದ್ದು, ’ಚಿನ್ನದ ರೂಪದಲ್ಲಿ ಬಂದಿದ್ದು ಮಾರೀಚನೇ ಹೊರತು, ರಾವಣನಲ್ಲ; ಕೇಜ್ರಿವಾಲ್ ರಾಮಾಯಣಕ್ಕೆ ಅಪಮಾನ ಮಾಡಿದ್ದಾರೆ, ಅವರೊಬ್ಬ ಚುನಾವಣಾ ಹಿಂದೂ’ ಎಂದು ಟೀಕಿಸಿದ್ದಾರೆ.

ಟರ್ಕಿ ಸ್ಕೀ ರೆಸಾರ್ಟ್‌ನಲ್ಲಿ ಬೆಂಕಿ: 66 ಸಾವು, 51 ಜನರಿಗೆ ಗಾಯಅಂಕಾರ (ಟರ್ಕಿ): ಟರ್ಕಿಯ ವಾಯವ್ಯ ಭಾಗದಲ್ಲಿನ ಸ್ಕೀ ರೆಸಾರ್ಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು 66 ಜನರು ಸಾವನ್ನಪ್ಪಿ, 51 ಜನರು ಗಾಯಗೊಂಡ ದುರ್ಘಟನೆ ಮಂಗಳವಾರ ನಡೆದಿದೆ.ಟರ್ಕಿಯ ಬೊಲು ಪ್ರಾಂತ್ಯದ ಕರ್ತಾಲ್ಕಯಾ ಎಂಬಲ್ಲಿ ನುಸುಕಿನ ಜಾವ 3.30ಕ್ಕೆ ದುರ್ಘಟನೆ ಸಂಭವಿಸಿದೆ. 234 ಜನರಿದ್ದ 12 ಅಂತಸ್ಥಿನ ಹೋಟೆಲ್‌ಗೆ ಬೆಂಕಿ ಬಿದ್ದಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕಟ್ಟಡದಿಂದ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. 30 ಅಗ್ನಿಶಾಮಕ ದಳ ವಾಹನ ಮತ್ತು 28 ಆ್ಯಂಬುಲೆನ್ಸ್‌ಗಳು ಅಲ್ಲಿದ್ದ ಜನರನ್ನು ರಕ್ಷಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಬೆಂಕಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ಘಟನೆಯನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಅಲ್ಲಿನ ಸಚಿವರೊಬ್ಬರು ತಿಳಿಸಿದ್ದಾರೆ.

ತಮಿಳ್ನಾಡು ಚುನಾವಣೆ: ಕರ್ನಾಟಕ ಮತದಾರಳ ನಾಮಪತ್ರ ತಿರಸ್ಕಾರ

ಈರೋಡ್: ಈರೋಡ್ ಪೂರ್ವ ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಬೆಂಗಳೂರಿನ ಕೆ.ಆರ್‌. ಪುರ ಮತದಾರಳೊಬ್ಬಳ ನಾಮಪತ್ರ ತಿರಸ್ಕರಿಸಲಾಗಿದೆ. ಈಕೆ ತಮಿಳುನಾಡಿನ ಮತದಾರಳಲ್ಲ ಎಂಬ ಕಾರಣ ನೀಡಿ ನಾಮಪತ್ರ ತಿರಸ್ಕಾರ ಮಾಡಲಾಗಿದೆ.ಸೋಮವಾರ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಹಿಂಪಡೆಯುವಿಕೆ ಅವಧಿ ಮುಗಿದಿತ್ತು. 47 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ 5 ಗಂಟೆಯ ನಂತರ ಅಶ್ವರ್ ಮತ್ತು ನೂರ್ ಮೊಹಮ್ಮದ್ ಎಂಬ ಸ್ವತಂತ್ರ ಅಭ್ಯರ್ಥಿಗಳು, ’ಪದ್ಮಾವತಿ ಎಂಬ ಇನ್ನೊಬ್ಬ ಸ್ವತಂತ್ರ ಅಭ್ಯರ್ಥಿಯ ಹೆಸರು ಕರ್ನಾಟಕದ ಕೆ.ಆರ್. ಪುರದ ಮತದಾರ ಪಟ್ಟಿಯಲ್ಲಿದೆ. ಚುನಾವಣಾ ನಿಯಮಗಳ ಪ್ರಕಾರ ತಮಿಳುನಾಡಿನ ಮತದಾರರು ಮಾತ್ರ ಇಲ್ಲಿನ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಹ. ಹಾಗಾಗಿ ಅವರ ನಾಮಪತ್ರ ಸ್ವೀಕರಿಸಬಾರದು’ ಎಂದು ದೂರು ಸಲ್ಲಿಸಿದರು. ಆಗ ದಾಖಲೆ ಪರಿಶೀಲಿಸಿದ ಮುಖ್ಯ ಚುನಾವಣಾಧಿಕಾರಿ ಪದ್ಮಾವತಿಯವರ ನಾಮಪತ್ರವನ್ನು ರದ್ದುಗೊಳಿಸಿದರು.

ಉದ್ಯಮಿಗಳಿಗೆ ವಿಸಿ ಪಟ್ಟ: ಈಗ ಕೇರಳ ವಿರೋಧ

ಪಿಟಿಐ ತಿರುವನಂತಪುರಂಉದ್ಯಮಿಗಳನ್ನು ಕುಲಪತಿಗಳನ್ನಾಗಿ ನೇಮಿಸಲು ಅವಕಾಶ ನೀಡುವ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಕರಡು ನೀತಿಗೆ ಕರ್ನಾಟಕ, ತಮಿಳುನಾಡು ಬಳಿಕ ಇದೀಗ ಕೇರಳದಲ್ಲೂ ವಿರೋಧ ವ್ಯಕ್ತವಾಗಿದೆ. ಯುಜಿಸಿಗೆ ಮಾಡಿರುವ ಕರಡು ನೀತಿಯನ್ನು ಕೇಂದ್ರ ಸರ್ಕಾರ ಹಿಂಪಡೆಯುವಂತೆ ಕೋರಿ ತಮಿಳುನಾಡು ರೀತಿಯಲ್ಲಿ ಕೇರಳ ವಿಧಾನಸಭೆಯಲ್ಲೂ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಈ ನಿರ್ಣಯ ಮಂಡಿಸಿದ್ದು, ಯುಜಿಸಿಯ ಹೊಸ ಕರಡು ನೀತಿಗಳು ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.ಜತೆಗೆ, ಯಾವುದೇ ಅಕಾಡೆಮಿಕ್‌ ಅನುಭವ ಇಲ್ಲದ ಖಾಸಗಿ ಕ್ಷೇತ್ರದ ವ್ಯಕ್ತಿಯನ್ನೂ ಕುಲಪತಿಯಾಗಿ ನೇಮಿಸಲು ಈ ಕರಡು ನೀತಿ ಅವಕಾಶ ಮಾಡಿಕೊಡುತ್ತದೆ. ಇದು ಉನ್ನತ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವ ಪ್ರಯತ್ನದ ಭಾಗ ಎಂದು ಆರೋಪಿಸಿದರು.

ಈ ಕರಡು ನೀತಿ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡುವುದಲ್ಲದೆ, ಕೋಮು ಮತ್ತು ಧಾರ್ಮಿಕ ಭಾವನೆ ಬಿತ್ತುವವರ ಕೈಗೆ ಉನ್ನತ ಶಿಕ್ಷಣವನ್ನು ನೀಡಲಿದೆ ಎಂದು ಆತಂಕವನ್ನೂ ಅವರು ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಮೇಲುಸ್ತುವಾರಿ ಜವಾಬ್ದಾರಿ ಆಯಾ ರಾಜ್ಯಗಳ ಶಾಸಕಾಂಗಕ್ಕಿದೆ. ಕೇಂದ್ರ ಸರ್ಕಾರ ಸಮನ್ವಯ, ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಗುಣಮಟ್ಟ ನಿಗದಿಮಾಡುವ ಅಧಿಕಾರವನ್ನಷ್ಟೇ ಹೊಂದಿದೆ. ಆದರೂ ಯಾವುದೇ ಪಾಲುದಾರರೊಂದಿಗೆ ಚರ್ಚೆ ನಡೆಸದೆ ಕೇಂದ್ರವು ಕರಡು ನಿಯಮಗಳನ್ನು ರೂಪಿಸಿದ್ದು, ಇದು ಕುಲಪತಿಗಳ ನೇಮಕ ವಿಚಾರದಲ್ಲೂ ರಾಜ್ಯ ಸರ್ಕಾರವನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ. ಹೀಗಾಗಿ ಈ ಕರಡು ನೀತಿಯು ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಹೇಳಿದರು.

ಮೋದಿ ಸಂಪುಟಕ್ಕೆ ರಾಜೀನಾಮೆ: ಮಾಂಝಿ ಬೆದರಿಕೆ

ಪಟನಾ: ‘ನಮ್ಮ ಹಿಂದುಸ್ತಾನಿ ಅವಾಂ ಮೋರ್ಚಾ (ಹಮ್‌) ಪಕ್ಷಕ್ಕೆ ಎನ್‌ಡಿಎನಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಯಾವುದೇ ಚುನಾವಣೆಯ ಸೀಟು ಹಂಚಿಕೆಯಲ್ಲಿ ನಮ್ಮನ್ನು ಪರಿಗಣಿಸುತ್ತಿಲ್ಲ. ಹೀಗೇ ಮುಂದುವರಿದರೆ ರಾಜೀನಾಮೆ ನೀಡಿ ನಮ್ಮ ಶಕ್ತಿ ಪ್ರದರ್ಶಿಸಬೇಕಾದೀತು’ ಎಂದು ಕೇಂದ್ರ ಸಚಿವ ಹಾಗೂ ಹಮ್‌ ಅಧ್ಯಕ್ಷ ಜೀತನ್‌ರಾಂ ಮಾಂಝಿ ಗುಡುಗಿದ್ದಾರೆ. ಅವರ ಹೇಳಿಕೆ ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಆದರೆ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಜೆಡಿಯು ಹೇಳಿದೆ. ಬಿಹಾರದಲ್ಲಿ ಚಿರಾಗ್‌ ಪಾಸ್ವಾನ್‌ ಪಕ್ಷಕ್ಕೆ ಹೆಚ್ಚು ಮನ್ನಣೆ ಸಿಗುತ್ತಿದೆ ಎಂಬ ವಿಷಯ ಮಾಂಝಿ ಸಿಟ್ಟಿಗೆ ಕಾರಣ ಎನ್ನಲಾಗಿದೆ.