ಸಾರಾಂಶ
ಚೆನ್ನೈ: ಸಾರಿಗೆ ವ್ಯವಸ್ಥೆಗೆ ಇನ್ನಷ್ಟು ವೇಗ ತುಂಬುವ ನಿಟ್ಟಿನಲ್ಲಿ ಭಾರತದ ಮೊದಲ ಹೈಪರ್‌ಲೂಪ್ (ರೈಲು ಚಲಿಸಲು ಸುರಂಗದ ರೀತಿಯ ಪೈಪ್‌ನಲ್ಲಿನ ಮಾರ್ಗ) ಪರೀಕ್ಷಾ ಟ್ರ್ಯಾಕ್ ಅನ್ನು ತಮಿಳುನಾಡು ರಾಜಧಾನಿ ತಯ್ಯೂರಿನ ಐಐಟಿ ಮದ್ರಾಸ್‌ನಲ್ಲಿ ಉದ್ಘಾಟಿಸಲಾಗಿದೆ.
ಹೈಪರ್‌ಲೂಪ್ ತಂತ್ರಜ್ಞಾನವನ್ನು ಪರೀಕ್ಷಿಸುವ ಸಲುವಾಗಿ ಭಾರತೀಯ ರೈಲ್ವೆ ಇಲಾಖೆ, ಆರ್ಸೆಲರ್ ಮಿತ್ತಲ್, ಐಐಟಿಯ ಆವಿಷ್ಕಾರ್ ಹೈಪರ್‌ಲೂಪ್ ತಂಡ ಹಾಗೂ ಟುಟ್ರ್ ಹೈಪರ್‌ಲೂಪ್ ಎಂಬ ಸ್ಟಾರ್ಟ್‌ಅಪ್ ಜಂಟಿಯಾಗಿ 410 ಮೀ. ಉದ್ದದ ಟ್ರ್ಯಾಕ್ ನಿರ್ಮಿಸಿವೆ. ಗಂಟೆಗೆ 1,200 ಕಿಮೀ ಚಲಿಸುವ, ಕೈಗೆಟಕುವ ದರದ, ವಿಶ್ವಾಸಾರ್ಹ ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆ ಸೃಷ್ಟಿಸುವುದು ಇದರ ಉದ್ದೇಶವಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ‘ಇದು ಸಾರಿಗೆ ವಲಯದ ಹೊಸ ಯುಗ ಆರಂಭದ ಮೈಲುಗಲ್ಲು’ ಎಂದು ಬಣ್ಣಿಸಿದ್ದಾರೆ.
ಇದೀಗ ಮೊದಲ ಬಾರಿ ಗಂಟೆಗೆ 100 ಕಿಮೀ. ವೇಗದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇದನ್ನು 600 ಕಿಮೀ.ಗೆ ಕೊಂಡೊಯ್ಯುವ ಗುರಿಯಿದೆ. ಹೈಪರ್‌ಲೂಪ್ ತಂತ್ರಜ್ಞಾನದಿಂದ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸಿ, ಬೆಂಗಳೂರು ಹಾಗೂ ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು 15 ನಿಮಿಷಕ್ಕೆ ಇಳಿಸಲು ಸಾಧ್ಯವಿದೆ.
ವಿಶ್ವದಲ್ಲಿ ಇನ್ನೂ ಜಾರಿಯಿಲ್ಲ:
ಇದುರೆಗೆ ಅಮೆರಿಕ, ಕೆನಡಾ, ಮೆಕ್ಸಿಕೋ, ಬ್ರಿಟನ್ ಸೇರಿದಂತೆ ಕೆಲ ದೇಶಗಳು ಹೈಪರ್‌ಲೂಪ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಆದರೆ ಯಾವುದೇ ದೇಶ ಈ ಸೇವೆಗಳನ್ನು ಪ್ರಾರಂಭಿಸಿಲ್ಲ.