ಸಾರಾಂಶ
ಮುಂಬೈ: ಆನ್‌ಲೈನ್‌ನಲ್ಲಿ ಖಾಸಗಿತನಕ್ಕೆ ಧಕ್ಕೆ ತರುವಂತಹ, ಸೈಬರ್ ದಾಳಿಕೋರರ ಕೃತ್ಯಗಳು ಹೆಚ್ಚುತ್ತಿರುವ ನಡುವೆಯೇ ಖ್ಯಾತ ಬಾಲಿವುಡ್ ನಟ ಅಕ್ಷಯ್‌ಕುಮಾರ್, ತಮ್ಮ ಮಗಳು ಕೂಡಾ ಇಂಥ ದಾಳಿಗೆ ತುತ್ತಾಗಿದ್ದ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
‘ಕೆಲ ತಿಂಗಳ ಆನ್‌ಲೈನ್‌ನಲ್ಲಿ ಗೇಂ ಆಡುವ ವೇಳೆ ನನ್ನ 13 ವರ್ಷದ ಮಗಳು ನಿತಾರಾಳ ನಗ್ನಚಿತ್ರಕ್ಕಾಗಿ ಆಗಂತುಕನೊಬ್ಬ ಬೇಡಿಕೆ ಇಟ್ಟಿದ್ದ’ ಎಂದು, ರಾಜ್ಯದ ಪೊಲೀಸ್ ಪ್ರಧಾನಕಚೇರಿಯಲ್ಲಿ ನಡೆದ ಸೈಬರ್ ಜಾಗೃತಿ ತಿಂಗಳು 2025 ಕಾರ್ಯಕ್ರಮದಲ್ಲಿ ಅಕ್ಷಯ್ ಹೇಳಿದರು.
‘ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಆಟ ಆಡುವ ಅವಕಾಶವಿದೆ. ಅದನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ನನ್ನ ಮಗಳಿಗೆ ಸಂದೇಶ ಕಳಿಸತೊಡಗಿದ್ದ. ಮೊದಮೊದಲು ಆಟದ ಬಗ್ಗೆ ಸಭ್ಯವಾಗಿ ಹೊಗಳುತ್ತಿದ್ದವ, ತಾನು ಮಾತನಾಡುತ್ತಿರುವುದು ಹುಡುಯೊಬ್ಬಳೊಂದಿಗೆ ಎಂದು ತಿಳಿಯುತ್ತಿದ್ದಂತೆ ಆಕೆ ಫೋಟೋ ಕೇಳತೊಡಗಿದ. ನಗ್ನಚಿತ್ರ ಕಳಿಸುವಂತೆ ನನ್ನ ಮಗಳನ್ನು ಪೀಡಿಸತೊಡಗಿದ. ಕೂಡಲೇ ಆಕೆ ಅದನ್ನು ತನ್ನ ತಾಯಿಗೆ ತಿಳಿಸಿದ್ದರಿಂದ ಘಟನೆ ಬೆಳಕಿಗೆ ಬಂತು. ಇದೂ ಸೈಬರ್ ವಂಚನೆಯ ಭಾಗ’ ಎಂದು ವಿವರಿಸಿದ್ದಾರೆ.
ಇದೇ ವೇಳೆ, ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ಕಣ್ಣಿಡುವಂತೆ ಹೆತ್ತವರಿಗೆ ಸೂಚಿಸಿರುವ ಅಕ್ಷಯ್, ‘7ರಿಂದ 10ನೇ ತರಗತಿ ಮಕ್ಕಳಿಗೆ ವಾರಕ್ಕೊಂದು ಸೈಬರ್ ಭದ್ರತೆ ಸಂಬಂಧಿತ ತರಗತಿ ಇರಬೇಕು’ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಡಿಜಿಟಲ್ ಸುರಕ್ಷತೆ ಬಗ್ಗೆ ಮಕ್ಕಳು, ಹದಿಹರೆಯದವರು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಲು ಒಂದು ತಿಂಗಳ ಅಭಿಯಾನ ನಡೆಸಲಾಗುತ್ತಿದೆ.