ಸಾರಾಂಶ
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಭಾರತ ಪ್ರವಾಸಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಅನುಮೋದನೆ ನೀಡಿದೆ.
ಭಾರತದ ಮನವಿ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ ಭಾರತದ ಇಂಥದ್ದೇ ಪ್ರಸ್ತಾಪವನ್ನು ಭದ್ರತಾ ಮಂಡಳಿ ತಿರಸ್ಕರಿಸಿತ್ತು.
ಮುತ್ತಾಖಿ ಅ.9-16ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. 1998ರಲ್ಲಿ ತಾಲಿಬಾನ್ ನಾಯಕರ ಮೇಲೆ ಭದ್ರತಾ ಮಂಡಳಿ ನಿರ್ಬಂಧ ಹೇರಿರುವ ಕಾರಣ, ಯಾವುದೇ ತಾಲಿಬಾನ್ ನಾಯಕರ ಪ್ರವಾಸಕ್ಕೆ ವಿಶ್ವಸಂಸ್ಥೆ ಪೂರ್ವಾನುಮತಿ ಕಡ್ಡಾಯ.
ಚೀನಾ ಮತ್ತು ಪಾಕಿಸ್ತಾನವನ್ನು ಹತ್ತಿಕ್ಕಲು ಭಾರತ ಯತ್ನಿಸುತ್ತಿರುವ ನಡುವೆಯೇ ಮುತ್ತಾಖಿ ಭಾರತ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ. ವಿದೇಶಗಳಲ್ಲಿ ತಾಲಿಬಾನ್ ಸರ್ಕಾರದ ಪ್ರತಿನಿಧಿಗಳ ಜೊತೆ ಭಾರತದ ಅಧಿಕಾರಿಗಳ ಮಟ್ಟದ ಭೇಟಿ ನಡೆದಿತ್ತಾದರೂ, ಭಾರತಕ್ಕೇ ತಾಲಿಬಾನ್ ನಾಯಕರ ಆಗಮನ ಇದೇ ಮೊದಲು. 2021ರಲ್ಲಿ ಆಫ್ಗಾನಿಸ್ತಾನದ ಚುನಾಯಿತ ಸರ್ಕಾರವನ್ನು ಕೆಡವಿದ ಬಳಿಕ ಅಲ್ಲಿ ತಾಲಿಬಾನಿಗಳು ಸರ್ಕಾರ ನಡೆಸುತ್ತಿದ್ದಾರೆ. ಅಂದಿನಿಂದಲೂ ಮುತ್ತಾಖಿ ವಿದೇಶಾಂಗ ಸಚಿವರಾಗಿದ್ಧಾರೆ.