ಆಗಸ್ಟ್‌ನಲ್ಲಿ ಯುಪಿಐನಿಂದ ದಾಖಲೆ 200 ಕೋಟಿ ವಹಿವಾಟು ದಾಖಲು

| N/A | Published : Sep 02 2025, 01:00 AM IST

ಸಾರಾಂಶ

ಕಳೆದ ತಿಂಗಳು ಯುಪಿಐ 200 ಕೋಟಿಯಷ್ಟು ವಹಿವಾಟು ನಡೆಸಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಗದು ಅಂಕಿ ಅಂಶ ಮಾಹಿತಿ ನೀಡಿದೆ. ಜುಲೈ ತಿಂಗಳಿನಲ್ಲಿ ಯುಪಿಐ 194.7 ಕೋಟಿ ವಹಿವಾಟು ನಡೆಸಿತ್ತು.

ನವದೆಹಲಿ: ಕಳೆದ ತಿಂಗಳು ಯುಪಿಐ 200 ಕೋಟಿಯಷ್ಟು ವಹಿವಾಟು ನಡೆಸಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಗದು ಅಂಕಿ ಅಂಶ ಮಾಹಿತಿ ನೀಡಿದೆ. ಜುಲೈ ತಿಂಗಳಿನಲ್ಲಿ ಯುಪಿಐ 194.7 ಕೋಟಿ ವಹಿವಾಟು ನಡೆಸಿತ್ತು. ಆದರೆ ಆಗಸ್ಟ್‌ನಲ್ಲಿ ಆ ದಾಖಲೆ ಹಿಂದಿಕ್ಕಿದೆ. ಇನ್ನು ಎನ್‌ಪಿಸಿಐ ಮಾಹಿತಿ ಪ್ರಕಾರ ಮೌಲ್ಯದ ದೃಷ್ಟಿಯಿಂದ ನೋಡುವುದಾದರೆ ಮೇ ತಿಂಗಳಿನಲ್ಲಿ ಅತ್ಯಧಿಕ 25.14 ಲಕ್ಷ ಕೋಟಿ ರು. ವಹಿವಾಟು ನಡೆದಿತ್ತು. ಜುಲೈನಲ್ಲಿ 25.08 ಲಕ್ಷ ಕೋಟಿ ರು. ದಾಖಲಾಗಿತ್ತು. ಆದರೆ ಆಗಸ್ಟ್‌ನಲ್ಲಿ ಆ ಪ್ರಮಾಣ ಕೊಂಚ ಕುಸಿದಿದ್ದು, 24.85 ಲಕ್ಷ ಕೋಟಿ ರೂ.ಗಳಷ್ಟು ವಹಿವಾಟು ನಡೆದಿದೆ.

ಕೇರಳ: ಮೆದುಳು ತಿನ್ನುವ ಅಮೀಬಾಗೆ 3 ತಿಂಗಳ ಮಗು ಸೇರಿ ಮತ್ತೆ 2 ಬಲಿ

ಕಲ್ಲಿಕೋಟೆ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಮುಂದುವರೆದಿದ್ದು, ಮೂರು ತಿಂಗಳ ಮಗು ಸೇರಿದಂತೆ ಮತ್ತೆ ಎರಡು ಸಾವು ಸಂಭವಿಸಿದೆ. ಈ ಮೂಲಕ ಕಳೆದೊಂದು ತಿಂಗಳಲ್ಲಿ ಮಿದುಳಿನ ಸೋಂಕಿಗೆ ಬಲಿಯಾದವರ ಸಂಖ್ಯೆ 3ಕ್ಕೇರಿಯಾಗಿದೆ. 

ಅಮೀಬಿಕ್‌ ಮೆನಿಂಗೊ ಎನ್ಸೆಫಾಲಿಟಿಸ್ ಎಂಬ ಈ ವಿಚಿತ್ರ ಕಾಯಿಲೆಗೆ ಆ.14 ರಂದು 9 ವರ್ಷದ ಬಾಲಕಿ ಬಲಿಯಾಗಿದ್ದಳು. ಅದರ ನಡುವೆಯೇ, ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ತಿಂಗಳ ಮಗು ಚಿಕಿತ್ಸೆ ಫಲಿಸದೆ ಭಾನುವಾರ ಸಾವನ್ನಪ್ಪಿದೆ. ಮತ್ತೊಂದು ಪ್ರಕರಣದಲ್ಲಿ ರಮ್ಲಾ(52) ಎನ್ನುವ ಮಹಿಳೆ ರೋಗ ಲಕ್ಷಣ ಹಿನ್ನೆಲೆ ಜು.8 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಸೋಮವಾರ ಸಾವನ್ನಪ್ಪಿದ್ದಾರೆ.

ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 8 ಮಂದಿ ಈ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಲುಷಿತ ನೀರಿನಲ್ಲಿ ಈಜು, ಸ್ನಾನ ಈ ಸೋಂಕಿಗೆ ಕಾರಣ. ತಲೆನೋವು, ಜ್ವರ, ತಲೆಸುತ್ತು ಇದರ ಪ್ರಾಥಮಿಕ ಲಕ್ಷಣಗಳಾಗಿರುತ್ತದೆ.

ಬೆಟ್ಟಿಂಗ್‌ ರದ್ದು: ಶೇ.60 ಹುದ್ದೆ ಕಡಿತ ಮಾಡಲು ಎಂಪಿಎಲ್‌ ನಿರ್ಧಾರ

ನವದೆಹಲಿ: ಮನಿ ಗೇಮಿಂಗ್ ರದ್ದು ಮಾಡಿ ಕೇಂದ್ರ ಸರ್ಕಾರ ಕಾನೂನು ಜಾರಿಗೊಳಿಸಿದ ಬೆನ್ನಲ್ಲೇ ಪ್ರಮುಖ ಆನ್‌ಲೈನ್‌ ಮನಿಗೇಮಿಂಗ್‌ ಮತ್ತು ಬೆಟ್ಟಿಂಗ್‌ ವೇದಿಕೆಗಳ ಪೈಕಿ ಒಂದಾದ ಎಂಪಿಎಲ್‌ ಶೇ.60ರಷ್ಟು ಉದ್ಯೋಗಿಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. 

ಪ್ರಸ್ತುತ ಮೊಬೈಲ್ ಪ್ರಿಮಿಯರ್‌ ಲೀಗ್‌ (ಎಂಪಿಎಲ್‌) ಭಾರತದಲ್ಲಿ 500 ಸಿಬ್ಬಂದಿ ಹೊಂದಿದ್ದು, ಇದರಲ್ಲಿ 300 ಜನರನ್ನು ತೆಗೆದುಹಾಕಲಿದೆ. ಕಂಪನಿಯ ಒಟ್ಟು ಆದಾಯದಲ್ಲಿ ಶೇ.50ರಷ್ಟು ಪಾಲು ಭಾರತದಿಂದಲೇ ಬರುತ್ತಿದ್ದು, ಈ ಆದಾಯಕ್ಕೂ ಬ್ರೇಕ್ ಬಿದ್ದಿದೆ. ಈ ಕಂಪನಿಯು ಕಳೆದ ವರ್ಷ 850 ಕೋಟಿ ರು.ಆದಾಯ ಗಳಿಸಿತ್ತು.

Read more Articles on