ಇರಾನ್‌-ಅಮೆರಿಕ ಮಧ್ಯೆ ಮತ್ತೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದ್ದು, ಕದನವಿರಾಮ ಬರೀ ತೋರಿಕೆಗೆ ಮಾತ್ರವೆ ಎಂಬ ಪ್ರಶ್ನೆ ಎದ್ದಿದೆ. ಇರಾನ್‌ನ 4 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಲ್ಲದೆ, ಕರಾವಳಿ ಮೇಲೆ ಕಣ್ಗಾವಲು ಇಡುವ ರೇಡಾರ್‌ ಅನ್ನೂ ಅಮೆರಿಕ ಸೇನೆ ಶನಿವಾರ ನಾಶ ಮಾಡಿದೆ.

ಟೆಹರಾನ್‌/ವಾಷಿಂಗ್ಟನ್‌: ಇರಾನ್‌-ಅಮೆರಿಕ ಮಧ್ಯೆ ಮತ್ತೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದ್ದು, ಕದನವಿರಾಮ ಬರೀ ತೋರಿಕೆಗೆ ಮಾತ್ರವೆ ಎಂಬ ಪ್ರಶ್ನೆ ಎದ್ದಿದೆ. ಇರಾನ್‌ನ 4 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಲ್ಲದೆ, ಕರಾವಳಿ ಮೇಲೆ ಕಣ್ಗಾವಲು ಇಡುವ ರೇಡಾರ್‌ ಅನ್ನೂ ಅಮೆರಿಕ ಸೇನೆ ಶನಿವಾರ ನಾಶ ಮಾಡಿದೆ.

ಇದರ ಬೆನ್ನಲ್ಲೇ ಇರಾನ್‌ ಈ ದಾಳಿ ಬೆನ್ನಲ್ಲೇ ಅಮೆರಿಕದ ಮಿತ್ರ ರಾಷ್ಟ್ರಗಳಾದ ಬಹ್ರೇನ್ ಮತ್ತು ಕುವೈತ್‌ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಿದ್ದು, ಅವೆಲ್ಲವುಗಳನ್ನು ಹೊಡೆದುರುಳಿಸಲಾಗಿದೆ. ಬಹ್ರೇನ್‌ ಹಾಗೂ ಕುವೈತ್‌ನಲ್ಲಿ ಎಚ್ಚರಿಕೆಯ ಸೈರನ್‌ ಸದ್ದು ಮೊಳಗಿವೆ.

ಇರಾನ್‌-ಅಮೆರಿಕ ನಡುವೆ ಶಾಂತಿ ಮಾತುಕತೆ ಮುಂದುವರಿದಿರುವ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಗಲ್ಫ್‌ ರಾಷ್ಟ್ರಗಳಲ್ಲಿ ಮತ್ತೆ ಆತಂಕ ಮನೆ ಮಾಡುವಂತೆ ಮಾಡಿದೆ.

ಅಮೆರಿಕ ಹೇಳಿದ್ದೇನು?:

‘ಹೋರ್ಮುಜ್‌ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಬಹುದಾಗಿದ್ದ 4 ಶಹೀದ್‌ ಮಾದರಿಯ ಡ್ರೋನ್‌ಗಳನ್ನು ಗುರುತಿಸಿ ಹೊಡೆದುರುಳಿಸಿದ್ದೇವೆ. ಇದರ ಬೆನ್ನಲ್ಲೇ ನಾವು ಗೋರುಕ್‌ ಮತ್ತು ಕ್ವೆಶಂ ದ್ವೀಪದಲ್ಲಿರುವ ಇರಾನ್‌ನ ಕರಾವಳಿ ಕಣ್ಗಾವಲು ರೇಡಾರ್‌ ಮೇಲೂ ದಾಳಿ ನಡೆಸಿದ್ದೇವೆ. ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಯಾವುದೇ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ದಾಳಿ ನಡೆಸಲಾಗಿದೆ’ ಎಂದು ಅಮೆರಿಕ ಸೇನೆ ಹೇಳಿಕೊಂಡಿದೆ.

ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿಗೆ 9 ಯೋಧರು ಸಾವು

ಬೈರೂತ್‌: ಕದನವಿರಾಮದ ಹೊರತಾಗ್ಯೂ ಹಿಜ್ಬುಲ್ಲಾ ಉಗ್ರರರ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ ಮುಂದುವರಿದಿದ್ದು, 9 ಲೆಬನಾನ್‌ ಯೋಧರು ಬಲಿಯಾಗಿದ್ದಾರೆ.

ದಕ್ಷಿಣ ಲೆಬನಾನ್‌ನ ನಬತಿಯೆಹ್‌ ಮತ್ತು ಸಕ್ಸಕಿಯಾ ಮೇಲೆ ಈ ದಾಳಿ ನಡೆದಿದ್ದು, ಸೇನೆಯ ಬ್ರಿಗೇಡಿಯರ್ ಜನರಲ್‌, ಕ್ಯಾಪ್ಟನ್‌ ಹಾಗೂ ಯೋಧ ಸೇರಿ 9 ಮಂದಿ ಬಲಿಯಾಗಿದ್ದಾರೆ ಎಂದು ಲೆಬನಾನ್‌ ಸೇನೆ ಹೇಳಿಕೊಂಡಿದೆ.