ಸಾರಾಂಶ
ವಾಷಿಂಗ್ಟನ್: ಅಮೆರಿಕ ಸರ್ಕಾರದ ತೆರಿಗೆ ಏಟಿನ ಬೆನ್ನಲ್ಲೇ, ಇದೀಗ ಕೋವಿಡ್-19 ವಿಚಾರವಾಗಿ ಅಮೆರಿಕದ ಮಿಸ್ಸೌರಿ ನ್ಯಾಯಾಲಯವು ಚೀನಾಗೆ ಮತ್ತೊಂದು ಆಘಾತ ನೀಡಿದೆ. 2019ರಲ್ಲಿ ವಿಶ್ವಾದ್ಯಂತ 70 ಲಕ್ಷಕ್ಕೂ ಹೆಚ್ಚಿನ ಮಂದಿ ಸಾವಿಗೆ ಕಾರಣವಾದ ಕೋವಿಡ್ ಸೋಂಕಿನ ಸತ್ಯ ಮುಚ್ಚಿಟ್ಟ ಹಾಗೂ ಪಿಪಿಇ ಕಿಟ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರಿಂದ ಆದ ನಷ್ಟ ಪರಿಹಾರವಾಗಿ ಚೀನಾ ಮೇಲೆ 209 ಕೋಟಿ ರು. ದಂಡ ವಿಧಿಸಿದೆ.
ಒಂದು ವೇಳೆ ಚೀನಾವು ಈ ತೀರ್ಪು ಒಪ್ಪಿಕೊಳ್ಳದಿದ್ದರೆ ಮಿಸ್ಸೌರಿಯಲ್ಲಿರುವ ಚೀನಾದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆಯನ್ನೂ ನ್ಯಾಯಾಲಯ ನೀಡಿದೆ.
2020ರಲ್ಲಿ ಮಿಸ್ಸೌರಿ ಆಡಳಿತವೇ ಕೋರ್ಟಲ್ಲಿ ದಾವೆ ಹೂಡಿತ್ತು. ಈ ಸಂಬಂಧ ಮಿಸ್ಸೌರಿ ಜಿಲ್ಲಾ ನ್ಯಾಯಾಧೀಶ ಸ್ಟೆಫೆನ್ ಎನ್.ವಿಂಬೌಗ್ ಅವರು ಈ ಆದೇಶ ನೀಡಿದ್ದಾರೆ.
ಕೋವಿಡ್ ಕುರಿತು ಚೀನಾವು ಜಗತ್ತಿಗೆ ತಪ್ಪು ಮಾಹಿತಿ ನೀಡಿತ್ತು. ಅಲ್ಲದೆ, ಪಿಪಿಇ ಕಿಟ್‌ಗಳ ಉತ್ಪಾದನೆ, ಮಾರಾಟ, ರಫ್ತು ಮತ್ತು ಆಮದಿನ ಮೇಲೆ ನಿಯಂತ್ರಣ ಸಾಧಿಸಿತ್ತು. ಇದು ಕೋವಿಡ್ ಮತ್ತಷ್ಟು ಹೆಚ್ಚಾಗಲು ಕಾರಣವಾಗಿತ್ತು. ಚೀನಾದಿಂದಾಗಿ ಮಿಸ್ಸೋರಿಗೆ ಭಾರೀ ತೆರಿಗೆ ನಷ್ಟ ಉಂಟಾಗಿದೆ. ಅಲ್ಲದೆ, ಪಿಪಿಇ ಕಿಟ್‌ಗಳ ಉತ್ಪಾದನೆಗಾಗಿಯೇ ಭಾರೀ ವೆಚ್ಚ ಮಾಡಬೇಕಾಯಿತು ಎಂದು ದೂರಲಾಗಿತ್ತು.
ತೀರ್ಪು ಒಪ್ಪಲ್ಲ- ಚೀನಾ:
ಆದರೆ ಚೀನಾ ಮಾತ್ರ ಈ ತೀರ್ಪನ್ನು ಒಪ್ಪುವುದಿಲ್ಲ ಎಂದಿದೆ. ಚೀನಾದ ಆಸ್ತಿ ವಶಪಡಿಸಿಕೊಳ್ಳುವಂಥ ಕ್ರಮಗಳು ನಡೆದರೆ ಪ್ರತೀಕಾರದ ಕ್ರಮ ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಸಿದೆ.